ಮೈಸೂರಿನ ಗೀತಾ ಗೋಪಿನಾಥ್: 7ನೇ ತರಗತಿಯಲ್ಲಿ 45% ಅಂಕದಿಂದ ಐಎಂಎಫ್ ನಲ್ಲಿ ನಂ 2 ಸ್ಥಾನದವರೆಗೆ

Update: 2021-12-03 13:08 GMT
ಗೀತಾ ಗೋಪಿನಾಥ್ (PTI)

ಹೊಸದಿಲ್ಲಿ : ಮೂರು ವರ್ಷಗಳ ಕಾಲ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಸೇವೆ ಸಲ್ಲಿಸಿ ಈ ಹುದ್ದೆಯನ್ನು ಅಲಂಕರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಾರತೀಯ ಮೂಲದ ಗೀತಾ ಗೋಪಿನಾಥ್ ಅವರು ಮುಂದಿನ ವರ್ಷದ ಜನವರಿಯಿಂದ ಸಂಸ್ಥೆಯ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಆಗಿ  ಸೇವೆ ಸಲ್ಲಿಸಲಿದ್ದಾರೆ.

ಪಶ್ಚಿಮ ಬಂಗಾಳ ರಾಜಧಾನಿ ಕೊಲ್ಕತ್ತಾದಲ್ಲಿ ಡಿಸೆಂಬರ್ 1971ರಲ್ಲಿ ಜನಿಸಿದ ಗೀತಾ ಅವರು  ಬೆಳೆದಿದ್ದು ಕರ್ನಾಟಕದ ಮೈಸೂರಿನಲ್ಲಿ. ಅವರಿಗೆ ಚಿಕ್ಕಂದಿನಲ್ಲಿ ಆಟವೆಂದರೆ ಅಚ್ಚುಮೆಚ್ಚು, ಗಿಟಾರ್ ಕೂಡ ಕಲಿತಿದ್ದ ಅವರು ಫ್ಯಾಷನ್ ಶೋ ಒಂದರಲ್ಲಿಯೂ ಭಾಗವಹಿಸಿದ್ದರು. ನಂತರ ಇತರ ಚಟುವಟಿಕೆಗಳತ್ತ ಗಮನ ಕಡಿಮೆಗೊಳಿಸಿ ಶಿಕ್ಷಣದತ್ತವೇ ಗಮನ ಕೇಂದ್ರೀಕರಿಸಿದ್ದರು ಎಂದು ಅವರ ತಂದೆ ಟಿ ವಿ ಗೋಪಿನಾಥ್ ಹೇಳುತ್ತಾರೆ.

ಏಳನೇ ತರಗತಿ ತನಕ ಅವರು ಕೇವಲ ಶೇ 45ರಷ್ಟು ಅಂಕಗಳಿಸುತ್ತಿದ್ದರೆ, ಮುಂದೆ ಶೇ 90ರಷ್ಟು ಅಂಕಗಳನ್ನು ಕಠಿಣ ಪರಿಶ್ರಮದಿಂದ ಗಳಿಸಲು ಆರಂಭಿಸಿದ್ದರೆಂದು ಅವರ ತಂದೆ  ಕೆಲ ಸಮಯದ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.

ಶಾಲಾ ಶಿಕ್ಷಣದ ನಂತರ ಅವರು ಮೈಸೂರಿನ ಮಹಾಜನ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಷಯವನ್ನು ಆರಿಸಿದ್ದರು. ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣ ಪಡೆಯಲು ಬೇಕಾದಷ್ಟು ಉತ್ತಮ ಅಂಕ ಗಳಿಸಿದ್ದರೂ ಅವರು ಅರ್ಥಶಾಸ್ತ್ರದಲ್ಲಿ ಬಿಎ (ಹಾನರ್ಸ್) ಶಿಕ್ಷಣ ಪಡೆದಿದ್ದರು. ಸಿವಿಲ್ ಸರ್ವಿಸಸ್ ಸೇರಬೇಕೆಂಬ ಕನಸೂ ಅವರಿಗಿತ್ತು. ಮುಂದೆ ದಿಲ್ಲಿಯ ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವಿಮೆನ್ ಸೇರಿದ ಅವರು ಎಲ್ಲಾ ಮೂರು ವರ್ಷಗಳಲ್ಲಿ ಟಾಪರ್ ಆಗಿದ್ದರು. ನಂತರ ಎಂಬಿಎ ಪದವಿಯನ್ನೂ ಚಿನ್ನದ ಪದಕದೊಂದಿಗೆ ಪಡೆದುಕೊಂಡಿದ್ದಾರೆ.

ಗೀತಾ ಗೋಪಿನಾಥ್ ಅವರ ಹೆತ್ತವರು ಕೇರಳದವರಾಗಿದ್ದು, ಅವರ ತಂದೆ ರೈತರ ಸಂಘಟನೆ ರೈತ ಮಿತ್ರ ಅನ್ನು ಮುನ್ನಡೆಸಿದ್ದರೆ ತಾಯಿ ವಿ ಸಿ ವಿಜಯಲಕ್ಷ್ಮಿ ಜನಪ್ರಿಯ ಪ್ಲೇಹೌಸ್ ಒಂದನ್ನು 35 ವರ್ಷಗಳ ಕಾಲ ನಡೆಸಿದ್ದಾರೆ.

ಗೀತಾ ಗೋಪಿನಾಥ್ ಅವರು ಮುಂದೆ  ದಿಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್‍ನಲ್ಲಿ ಶಿಕ್ಷಣ ಪಡೆದರು. ಇಲ್ಲಿ ಅವರಿಗೆ ಮುಂದೆ ಅವರು ವಿವಾಹವಾದ ಇಕ್ಬಾಲ್ ಸಿಂಗ್ ಧಲಿವಾಲ್ ಅವರ ಪರಿಚಯವಾಗಿತ್ತು. ಐದು ವರ್ಷಗಳ ಪಿಎಚ್ಡಿಗಾಗಿ ಅವರು ನಂತರ ಸಿಯಾಟಲ್‍ನ ಯುನಿವರ್ಸಿಟಿ ಆಫ್ ವಾಷಿಂಗ್ಟನ್ ಸೇರಿದ್ದರು. ಮುಂದೆ  2001ರಲ್ಲಿ ಪ್ರಿನ್ಸ್ ಟನ್ ವಿವಿಯಿಂದ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.

ಚಿಕಾಗೋ ವಿವಿಯ ಬೂತ್ ಸ್ಕೂಲ್ ಆಫ್ ಬಿಸಿನೆಸ್ ಇಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿರುವ ಗೀತಾ ಮುಂದೆ 2005ರಲ್ಲಿ ಹಾರ್ವರ್ಡ್ ವಿವಿ ಸೇವೆಗೆ ಸೇರಿಕೊಂಡರು.

2016-18 ಅವಧಿಯಲ್ಲಿ ಆಕೆ ಕೇರಳ ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ ಕೇಂದ್ರ ವಿತ್ತ ಸಚಿವಾಲಯದ ಎಮಿನೆಂಟ್ ಪರ್ಸನ್ಸ್ ಅಡ್ವೈಸರಿ ಗ್ರೂಪ್ ಒನ ಜಿ-20 ಇದರ ಸದಸ್ಯೆಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಸಾಗರೋತ್ತರ ಭಾರತೀಯರಿಗೆ ಭಾರತ ಸರಕಾರ ನೀಡುವ ಅತ್ಯುನ್ನತ ಗೌರವವಾದ ಪ್ರವಾಸಿ ಭಾರತೀಯ ಸಮ್ಮಾನ್‍ಗೂ ಗೀತಾ ಪಾತ್ರಾಗಿದ್ದಾರೆ. 2021ರಲ್ಲಿ ಫೈನಾನ್ಶಿಯಲ್ ಟೈಮ್ಸ್ ಅವರನ್ನು ಜಗತ್ತಿನ 25 ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಒಬ್ಬರು ಎಂದು ಗುರುತಿಸಿತ್ತು.

45 ವರ್ಷಕ್ಕಿಂತ ಕಿರಿಯ 25 ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರೆಂದು ಐಎಂಎಫ್  2014ರಲ್ಲಿ ಗೀತಾ ಅವರನ್ನು ಗುರುತಿಸಿತ್ತು. ವಲ್ರ್ಡ್ ಇಕನಾಮಿಕ್ ಫೋರಂ ಅವರನ್ನು ಯಂಗ್ ಗ್ಲೋಬಲ್ ಲೀಡರ್ ಪ್ರಶಸ್ತಿಗೂ ಆರಿಸಿದೆ.

ಕೃಪೆ: hindustantimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News