ಜನರು ಆರೋಗ್ಯಕ್ಕಾಗಿ ಮಾಡುವ ವೆಚ್ಚಗಳು ಇಳಿದಿವೆ ಎಂದು ಸಂಭ್ರಮಿಸುವ ಸರಕಾರ ಹೇಳದ ಅಂಶ ಇಲ್ಲಿದೆ

Update: 2021-12-03 15:58 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ,ಡಿ.3: ಕೇಂದ್ರ ಆರೋಗ್ಯ ಸಚಿವಾಲಯವು ಇತ್ತೀಚಿಗೆ 2017-18ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಲೆಕ್ಕಪತ್ರಗಳ (ಎನ್ಎಚ್ಎ) ಅಂದಾಜುಗಳನ್ನು ಬಿಡುಗಡೆಗೊಳಿಸಿದ್ದು, ದೇಶದಲ್ಲಿ ಔಟ್ ಆಫ್ ಪಾಕೆಟ್ ಎಕ್ಸ್ಪೆಂಡಿಚರ್ (ಒಒಪಿಇ) ಅಥವಾ ಜನರು ಆರೋಗ್ಯಕ್ಕಾಗಿ ತಮ್ಮ ಕೈಯಿಂದ ಮಾಡುವ ವೆಚ್ಚಗಳಲ್ಲಿ ಸಾಕಷ್ಟು ಇಳಿಕೆಯಾಗಿದೆ ಎಂದು ಹೇಳಿಕೊಂಡಿದೆ.

ವಿಶ್ವದಲ್ಲಿ ಅತ್ಯಂತ ಹೆಚ್ಚಿನ ಒಒಪಿಇ ಹೊಂದಿರುವ ದೇಶಗಳಲ್ಲೊಂದು ಎಂಬ ಭಾರತದ ಕುಖ್ಯಾತಿಯ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಮತ್ತು ಇತರರು ಈ ‘ಗೆಲುವಿನ‘ ಸಂಭ್ರಮವನ್ನು ಆಚರಿಸಿದ್ದಾರೆ.

ಎನ್ಎಚ್ಎ ಪ್ರಕಾರ ಒಟ್ಟು ಆರೋಗ್ಯ ವೆಚ್ಚದಲ್ಲಿ ಒಒಪಿಇ ಪಾಲು 2013-14ರಲ್ಲಿ ಶೇ.64.2ರಷ್ಟಿತ್ತು ಮತ್ತು 2017-18ರಲ್ಲಿ ಅದು ಶೇ.48.8ಕ್ಕೆ ಇಳಿಕೆಯಾಗಿದೆ. 2016ರ ಎನ್ಎಚ್ಎಗೆ ಹೋಲಿಸಿದರೂ ಅದು ಶೇ.10ರಷ್ಟು ಕಡಿಮೆಯಾಗಿದೆ.

ಸರಕಾರಿ ಆಸ್ಪತ್ರೆಗಳಲ್ಲಿಯ ಸೇವೆಗಳ ಹೆಚ್ಚಿನ ಬಳಕೆ ಮತ್ತು ವೆಚ್ಚಗಳಲ್ಲಿ ಕಡಿತ ಒಒಪಿಇ ಇಳಿಕೆಗೆ ಕಾರಣಗಳಲ್ಲೊಂದಾಗಿದೆ ಎಂದು ಕೇಂದ್ರ ಆರೋಗ್ಯಕಾರ್ಯದರ್ಶಿ ರಾಜೇಶ್ ಭೂಷಣ ಹೇಳಿಕೊಂಡಿದ್ದಾರೆ.
ಆದರೆ ಇಲ್ಲಿ ಯಾರೂ ಹೆಚ್ಚಾಗಿ ಗಮನಿಸಿರದ ಅಂಶವೊಂದಿದೆ.

ಆರೋಗ್ಯ ಸಚಿವಾಲಯವು ಅಂದಾಜುಗಳನ್ನು ಸಿದ್ಧಗೊಳಿಸಿದ್ದ ಸಮಯದಲ್ಲಿ ಆರೋಗ್ಯ ಸೇವೆಗಳು ಮತ್ತು ಇತರ ಸಾಮಾಜಿಕ ಸೇವೆಗಳ ಬಳಕೆಯು ಕುಸಿದಿದ್ದು ಒಒಪಿಇ ಇಳಿಕೆಗೆ ಮುಖ್ಯ ಕಾರಣವಾಗಿದೆ ಎಂದು ಆರೋಗ್ಯ ಆರ್ಥಿಕ ತಜ್ಞರು ಬೆಟ್ಟುಮಾಡಿದ್ದಾರೆ.

2016, ನವಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದ ನೋಟು ನಿಷೇಧವು ಭಾರತದ ಅನೌಪಚಾರಿಕ ಕ್ಷೇತ್ರವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದ್ದು ಒಒಪಿಇ ಇಳಿಕೆಗೆ ದೂರದ ಕಾರಣವಾಗಿದೆ.
ಈ ಸಮೀಕ್ಷೆಗೆ ಸುಮಾರು ಆರು ತಿಂಗಳು ಮೊದಲು ನೋಟು ನಿಷೇಧವನ್ನು ಘೋಷಿಸಲಾಗಿತ್ತು ಮತ್ತು ಆರೋಗ್ಯ ಸೇವೆಗಳು ಸೇರಿದಂತೆ ಎಲ್ಲ ಸಾಮಾಜಿಕ ಸೇವೆಗಳ ಬಳಕೆಯು ಹೇಗೆ ಕಡಿಮೆಯಾಗಿತ್ತು ಎನ್ನುವುದನ್ನು ತೋರಿಸುವ ಸ್ಪಷ್ಟ ದತ್ತಾಂಶ ಈಗ ನಮ್ಮ ಬಳಿ ಲಭ್ಯವಿದೆ. ಇದೇ ಕಾರಣದಿಂದ ಒಒಪಿಇ ಇಳಿಕೆಯಾಗಿದೆ ಎಂದು ಹರ್ಯಾಣದ ಒ.ಪಿ.ಜಿಂದಾಲ್ ವಿವಿಯ ಆರೋಗ್ಯ ಅರ್ಥಶಾಸ್ತ್ರದ ಬೋಧಕ ಇಂದ್ರನೀಲ ಮುಖ್ಯೋಪಾಧ್ಯಾಯ ಹೇಳಿದರು.

ಮುಖ್ಯೋಪಾಧ್ಯಾಯರ ಅಭಿಪ್ರಾಯವನ್ನೇ ಪ್ರತಿಧ್ವನಿಸಿದ ಪಬ್ಲಿಕ್ ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾ (ಪಿಎಚ್ಎಫ್ಐ)ದ ನಿರ್ದೇಶಕ (ಆರೋಗ್ಯ ಅರ್ಥಶಾಸ್ತ್ರ,ಹಣಕಾಸು ಮತ್ತು ನೀತಿ) ಶಕ್ತಿವೇಲ್ ಸೆಲ್ವರಾಜ್ ಅವರು, ಒಒಪಿಇ ಇಳಿಕೆಯನ್ನು ‘ಕರಕುಶಲತೆ ’ ಎಂದು ಬಣ್ಣಿಸಿದರು.

ಅದು ಒಂದು ವರ್ಷದಲ್ಲಿ ಸಾಧ್ಯವಾಗುತ್ತದೆ ಎಂದು ನೀವು ನಿರೀಕ್ಷಿಸುವಂತಿಲ್ಲ ಎಂದು ಹೇಳಿದ ಸೆಲ್ವರಾಜ್, ನಂತರದ ವರ್ಷಗಳಲ್ಲಿ ಒಒಪಿಇ ಏರಿಕೆಯಾದರೆ ಅಚ್ಚರಿಯೇನಿಲ್ಲ, ಏಕೆಂದರೆ ಆ ಸಮಯದಲ್ಲಿ ನೋಟು ನಿಷೇಧ ಸಂದರ್ಭದಲ್ಲಿಯ ಅಥವಾ ಅದಕ್ಕೂ ಮೊದಲಿನ ಮಟ್ಟದಲ್ಲಿ ಆರೋಗ್ಯ ಸೇವೆಗಳನ್ನು ಬಳಸಲು ಜನರು ಆರಂಭಿಸಿರುತ್ತಾರೆ ಎಂದರು.

ಈಗಿನ ಎನ್ಎಚ್ಎಗೆ ಮೊದಲಿನ ಮೂರು ವರ್ಷಗಳ (2014-15ರಿಂದ 2016-17) ಎನ್ಎಚ್ಎ ಅಂದಾಜುಗಳಂತೆ ಒಒಪಿಇ ಪ್ರತಿ ವರ್ಷ ಸುಮಾರು ಶೇ.3ರಷ್ಟು ಇಳಿಕೆಯಾಗಿದೆ.

ಒಒಪಿಇ ದೇಶದ ಒಟ್ಟು ಆರೋಗ್ಯ ವೆಚ್ಚಗಳ ಶೇ.15-ಶೇ.20ಕ್ಕಿಂತ ಹೆಚ್ಚಿರಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ವರದಿಗಳಲ್ಲಿ ಹೇಳಿದ್ದಾರೆ. ಭಾರತದಲ್ಲಿ ಅದು ಸುಮಾರು ಶೇ.50ರಷ್ಟಿದೆ. ಉಳಿದ ಶೇ.50 ಕೇಂದ್ರ ಮತ್ತು ರಾಜ್ಯ ಸಂಪನ್ಮೂಲಗಳು,ಆರೋಗ್ಯ ಯೋಜನೆಗಳು,ನಗರ ಸ್ಥಳೀಯ ಸಂಸ್ಥೆಗಳು ಮತ್ತು ಆರೋಗ್ಯ ವಿಮೆ ಯೋಜನೆಗಳಿಂದ ಬರುತ್ತದೆ.

ಒಒಪಿಇಗಳು ಕಳೆದೊಂದು ದಶಕದಲ್ಲಿ ಭಾರತದ 55 ಮಿ-63 ಮಿ.ಜನರನ್ನು ಬಡತನಕ್ಕೆ ತಳ್ಳಿವೆ. ದೇಶದಲ್ಲಿಯ ಕುಟುಂಬಗಳು ಆರೋಗ್ಯಕ್ಕಾಗಿ ತಮ್ಮ ಆದಾಯದ ಶೇ.10ರಿಂದ ಶೇ.40ರಷ್ಟನ್ನು ವೆಚ್ಚ ಮಾಡುತ್ತಿವೆ ಎಂದು ಪಿಎಚ್ಎಫ್ಐ ಅಧ್ಯಕ್ಷ ಕೆ.ಶ್ರೀಕಾಂತ ರೆಡ್ಡಿ ಅವರು ತನ್ನ 2019ರ ಕೃತಿ ‘ಮೇಕ್ಹೆಲ್ತ್ ಇನ್ ಇಂಡಿಯಾ’ದಲ್ಲಿ ಬೆಟ್ಟು ಮಾಡಿದ್ದಾರೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News