ಯುವಕನ ಮೇಲೆ ಪೊಲೀಸರ ದೌರ್ಜನ್ಯ ಆರೋಪ: ಡಿಸಿಪಿಗೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಪತ್ರ
ಬೆಂಗಳೂರು, ಡಿ.3: ವರ್ತೂರಿನ ರಾಜಾರೆಡ್ಡಿ ಬಡಾವಣೆಯ ಈದ್ಗಾ ರಸ್ತೆಯ ನಿವಾಸಿ ಅಮ್ಜದ್ ಖಾನ್ ಎಂಬುವವರು ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ಸಲ್ಲಿಸಿ ತಮ್ಮ ಮಗ ಕೋಳಿ ವ್ಯಾಪಾರ ಮಾಡುತ್ತಿರುವ ಸಲ್ಮಾನ್ ಖಾನ್‍ರನ್ನು ವರ್ತೂರು ಪೊಲೀಸರು ಕಳ್ಳತನ ಆರೋಪ ಹೊರಿಸಿ ಎಫ್‍ಐಆರ್ ಇಲ್ಲದಿದ್ದರೂ ವಿಚಾರಣೆ ನೆಪದಲ್ಲಿ ಸೆಲ್‍ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ ಎಂದು ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ತಿಳಿಸಿದ್ದಾರೆ.
ಈ ಸಂಬಂಧ ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಅವರಿಗೆ ಪತ್ರ ಬರೆದಿರುವ ಅಬ್ದುಲ್ ಅಝೀಮ್, ಪೊಲೀಸರ ದೌರ್ಜನ್ಯದಿಂದ ತಮ್ಮ ಮಗ ಬಲಗೈ ಅನ್ನು ಕಳೆದುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಈ ದೂರನ್ನು ಪೊಲೀಸ್ ಉಪ ಆಯುಕ್ತರು ಪರಿಶೀಲಿಸಿ ಪೊಲೀಸ್ ಕಾರ್ಯ ನಿರ್ವಹಣೆಯ ಉಲ್ಲಂಘನೆಯಾಗಿದ್ದಲ್ಲಿ ಸಂಬಂಧಿತ ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.