×
Ad

ಬೆಂಗಳೂರು: ಓಲಾ ಕ್ಯಾಬ್ ಚಾಲಕನ ಅಸಭ್ಯ ವರ್ತನೆ; ಯುವತಿಯ ಆರೋಪ

Update: 2021-12-04 18:17 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.4: ಓಲಾ ಕ್ಯಾಬ್ ಚಾಲಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಎದುರು ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ.

ಈ ಸಂಬಂಧ ಸಂತ್ರಸ್ತೆ ಸಾಮಾಜಿಕ ಜಾಲತಾಣ ಟ್ವೀಟರ್ ಮೂಲಕ ಘಟನೆ ಬಗ್ಗೆ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗುರುವಾರ ತಡರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದೆ. ಕ್ಯಾಬ್‍ನಲ್ಲಿ ಹೋಗುವಾಗ ಚಾಲಕ ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿದ. ಆಗ ನಾನು ಕೊಂಚ ಧೈರ್ಯ ಮಾಡಿ ಕಿರುಚಾಡಿದ್ದರಿಂದ ಕ್ಯಾಬ್ ನಿಲ್ಲಿಸಿದ.

ಬಳಿಕ ನಾನು ಕೆಳಗೆ ಇಳಿದುಕೊಂಡು ಮತ್ತೊಂದು ಕ್ಯಾಬ್‍ನಲ್ಲಿ ಮನೆಗೆ ತೆರಳಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆಯರು ಸುರಕ್ಷತೆಯ ದೃಷ್ಟಿಯಿಂದ ಒಂಟಿಯಾಗಿ ಕ್ಯಾಬ್‍ಗಳಲ್ಲಿ ತೆರಳುವಾಗ ಪರಿಚಿತರ ಸಂಪರ್ಕದಲ್ಲಿರಬೇಕು. ಪ್ರಯಾಣವನ್ನು ಟ್ರ್ಯಾಕ್ ಮಾಡಲು ಲೈವ್ ಲೊಕೇಶನ್ ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ಘಟನೆ ಸಂಬಂಧ ಓಲಾ ಕಂಪೆನಿಗೆ ದೂರು ನೀಡಿದ್ದೆ. ಇದಾದ ಬಳಿಕ ಓಲಾ ಕಂಪೆನಿ ಚಾಲಕನನ್ನು ಕೆಲಸದಿಂದ ತೆಗೆದಿದೆ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ ಎಂದು ಆಕೆ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್, ಈ ಘಟನೆ ಬಗ್ಗೆ ಕ್ಷಮೆ ಇರಲಿ. ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಅಸಭ್ಯ ವರ್ತನೆ ತೋರಿದ  ಚಾಲಕನ ಬಂಧನಕ್ಕೆ ಕೇಂದ್ರ ವಿಭಾಗದ ಡಿಸಿಪಿಗೆ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News