ಸರಕಾರಿ ಗೌರವಗಳೊಂದಿಗೆ ಶಿವರಾಂ ಅಂತ್ಯಕ್ರಿಯೆ: ಸಿಎಂ ಬಸವರಾಜ ಬೊಮ್ಮಾಯಿ

Update: 2021-12-04 13:44 GMT

ಬೆಂಗಳೂರು, ಡಿ.4: ಅನಾರೋಗ್ಯದಿಂದ ನಿಧನರಾದ ಹಿರಿಯ ಕಲಾವಿದ ಶಿವರಾಂ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ಶನಿವಾರ ಶಿವರಾಂ ಅವರ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವರಾಂ ಅವರು ರಾಜ್ಯದ ಕಲಾಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಕಲಾರಂಗಕ್ಕೆ ಅವರ ಅಗಲಿಕೆ ತುಂಬಲಾರದ ನಷ್ಟ. ಅವರು ಮಾಡಿದ ಎಲ್ಲ ಪಾತ್ರಗಳನ್ನು ನೈಜವಾಗಿ ಅಭಿನಯಿಸಿ, ಜೀವ ತುಂಬಿದ್ದರು. ಅವರು ಮುಖ್ಯ ನಟರ ಸರಿಸಮಾನವಾಗಿ ನಟನೆ ಮಾಡುತ್ತಿದ್ದರು ಎಂದು ನುಡಿದರು.

ಉಪಾಸನೆಯಂತಹ ಚಿತ್ರಗಳ ನಿರ್ಮಾಪಕರಾಗಿ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದರು. ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಸೇರಿದಂತೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿ ಅವರ ಚಿತ್ರಗಳಲ್ಲಿ ನಟಿಸಿದ್ದರು. 

ಅವರ ಬದುಕು ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ಆಧ್ಯಾತ್ಮಿಕ ಚಿಂತನೆ ಹಾಗೂ ದೈವಭಕ್ತಿ ಅವರಲ್ಲಿತ್ತು ಎಂದರು.

ಶಿವರಾಂ ನಿಧನಕ್ಕೆ ಗಣ್ಯರ ಸಂತಾಪ

ನಿನ್ನೆ ಆಸ್ಪತ್ರೆಗೆ ಬಂದು ನೋಡಿದಾಗ, ಶಿವರಾಮಣ್ಣ ಚೇತರಿಸಿಕೊಳ್ಳುತ್ತಾರೆ ಎನ್ನುವ ಭರವಸೆ ಇತ್ತು. ಇವತ್ತು ಸುದ್ದಿ ಕೇಳಿದಾಗ ಆಘಾತವಾಯಿತು. ಒಂದು ತಿಂಗಳ ಹಿಂದೆ ಅಪ್ಪು. ಇದೀಗ ಶಿವರಾಮಣ್ಣ. ಶಿವರಾಮಣ್ಣ ನಮ್ಮ ಕುಟುಂಬದ ಸದಸ್ಯರೇ ಆಗಿದ್ದರು.

-ಶಿವರಾಜ್‍ಕುಮಾರ್, ನಟ

ಹಿರಿಯ ನಟ ಶಿವರಾಂ ಅವರ ನಿಧನದಿಂದ ದುಃಖಿತನಾಗಿದ್ದೇನೆ. ದಶಕಗಳ ಕಾಲ ತಮ್ಮ ಅಮೋಘ ನಟನೆಯ ಮೂಲಕ ಕಲಾಸೇವೆಗೈದ ಶಿವರಾಂ ಅವರ ನೆನಪು ನಮ್ಮೊಂದಿಗೆ ಸದಾ ಜೀವಂತವಾಗಿರಲಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ.

-ಸಿದ್ದರಾಮಯ್ಯ, ವಿಪಕ್ಷ ನಾಯಕ 

ಕನ್ನಡ ಸಿನಿಮಾಗೆ ದೊಡ್ಡ ನಷ್ಟ. ಶಿವರಾಮಣ್ಣ ಅವರ ನಿಧನದಿಂದ ತುಂಬ ಬೇಸರವಾಯಿತು. ಅವರೊಬ್ಬರು ಐಕಾನ್. 
-ಅನಿಲ್ ಕುಂಬ್ಳೆ, ಕ್ರಿಕೆಟ್ ಆಟಗಾರ

ನಟ ಶಿವರಾಂ ಅವರು ನಿಧನರಾದ ಸುದ್ದಿ ತಿಳಿದು ದಿಗ್ಭ್ರಮೆ ಆಯಿತು. ನಮ್ಮ ಚಿತ್ರರಂಗದ ಎಲ್ಲ ಆಗುಹೋಗುಗಳಿಗೆ ಸದಾ ಮಿಡಿಯುತ್ತಿದ್ದ ಅವರ ಅಗಲಿಕೆ ನನಗೆ ಬಹಳ ದುಃಖವುಂಟು ಮಾಡಿದೆ.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಶಿವರಾಂ ಅವರು ಬರೀ ಕಲಾವಿದರಾಗಿರಲಿಲ್ಲ. ಚಿತ್ರ ನಿರ್ಮಾಣದ ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ಚಿತ್ರ ನಿರ್ಮಾಣದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ನಿಧನ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ.

-ಸುನೀಲ್ ಕುಮಾರ್, ಸಚಿವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News