ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಕೆರೆಗಳು ಸರಕಾರದಿಂದಲೇ ಒತ್ತುವರಿ

Update: 2021-12-04 17:21 GMT

ಬೆಂಗಳೂರು, ಡಿ.4: ಬಿಬಿಎಂಪಿ ವ್ಯಾಪ್ತಿಯ 204 ಕೆರೆಗಳ ಪೈಕಿ 131 ಕೆರೆಗಳು ಒತ್ತುವರಿಯಾಗಿದ್ದು, ಬಹುತೇಕ ಕೆರೆಯ ಭೂಮಿಯನ್ನು ಸರಕಾರವೇ ಒತ್ತುವರಿ ಮಾಡಿಕೊಂಡಿದೆ. 20 ಕೆರೆಗಳು ಒತ್ತುವರಿಯಿಂದ ಮುಕ್ತವಾಗಿವೆ ಎಂದು ಕೆರೆಗಳ ಒತ್ತುವರಿ ವಿವರದ ದಾಖಲೆಯಲ್ಲಿ ಸ್ಪಷ್ಟವಾಗಿದೆ ತಿಳಿದು ಬಂದಿದೆ.

ಕೇಂದ್ರ ಕಾರಾಗೃಹ, ತಹಶೀಲ್ದಾರ್ ಕಚೇರಿ, ರಸ್ತೆಗಳು, ಆಸ್ಪತ್ರೆಗಳು, ಸರಕಾರಿ ವಸತಿ ಬಡಾವಣೆಗಳು, ಕೊಳಚೆ ಪ್ರದೇಶಗಳು ಮತ್ತು ಕಾರ್ಖಾನೆಗಳಿಗಾಗಿ ಕೆರೆಗಳನ್ನು ಸರಕಾರವೇ ಒತ್ತುವರಿ ಮಾಡಿಕೊಡಿವೆ. ಈ ಕುರಿತು ದಾಖಲೆ ಬಿಡುಗಡೆಯಾಗಿದ್ದು, 131 ಕೆರೆಗಳನ್ನು ವಿವಿಧ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿರುವುದು ದೃಢವಾಗಿದೆ. ಒತ್ತುವರಿಯಾದ ಕೆರೆಗಳ 325 ಎಕರೆ ಸರಕಾರಿ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿದ್ದು, 249 ಎಕರೆ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದುವರೆಗೆ ಯಲಹಂಕ, ಆರ್‍ಆರ್ ನಗರ, ಮಹದೇವಪುರ, ದಾಸರಹಳ್ಳಿ ಮತ್ತು ಬೊಮ್ಮನಹಳ್ಳಿ ವಲಯದ ಹಲಸೂರು ಕೆರೆ ಸೇರಿ 38 ಎಕರೆ ಕೆರೆಯ ಒತ್ತುವರಿಯನ್ನು ಬಿಬಿಎಂಪಿ ತೆರವು ಮಾಡಿದೆ ಎನ್ನಲಾಗಿದೆ.

ಹೆಬ್ಬಾಳ ಕೆರೆ ಮತ್ತು ವೆಂಕೋಗಿರಾವ್ ಕೆರೆಯ 28 ಎಕರೆ ಒತ್ತುವರಿಯಾಗಿದ್ದು, ಬಿಡಿಎ ಲೇಔಟ್ ಮತ್ತು ರಸ್ತೆಗಳು ಮತ್ತು ಸ್ಮಶಾನದಂತಹ ಸರಕಾರಿ ಘಟಕಗಳಿಂದ ಒತ್ತುವರಿಯಾಗಿವೆ. ಕೌಡೇನಹಳ್ಳಿ ಕೆರೆಯಲ್ಲಿ ಸುಮಾರು 58 ಎಕರೆ ಒತ್ತುವರಿಯಾಗಿದೆ. ಕೆರೆಯನ್ನು ಖಾಸಗಿ ಶಾಲೆಗಳು, ಕಾಲೇಜುಗಳು ಹೆಚ್ಚಾಗಿ ಒತ್ತುವರಿ ಮಾಡಿಕೊಂಡಿವೆ ಎಂಬ ಆರೋಪ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News