ಪ್ರಧಾನಿ ಭೇಟಿ ಹಿನ್ನೆಲೆ ರಸ್ತೆ ಗುಂಡಿ ಮುಚ್ಚಿದ ಬಿಬಿಎಂಪಿ: ತಮ್ಮ ಬಡವಾಣೆಗೆ ಮೋದಿಗೆ ಆಹ್ವಾನಿಸಿದ ಟ್ವಿಟರಿಗರು

Update: 2021-12-04 17:59 GMT

ಬೆಂಗಳೂರು, ಡಿ.4: ನಗರಕ್ಕೆ ನಾಳೆ(ಡಿ.6) ನಾಗರಬಾವಿಯಲ್ಲಿರುವ ಡಾ. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಕಾಲೇಜು ಉದ್ಘಾಟನೆಯ ಸಲುವಾಗಿ ನಗರಕ್ಕೆ ಆಗಮಿಸಲಿದ್ದಾರೆ. ಆದುದರಿಂದ ಬಿಬಿಎಂಪಿಯು ಪ್ರಧಾನಿ ಬಂದು-ಹೋಗುವ ರಸ್ತೆಯನ್ನು ಮಾತ್ರ ಗುಂಡಿ ಮುಕ್ತಗೊಳಿಸಿದೆ. ಇದನ್ನು ಖಂಡಿಸಿ ನಗರದ ನಿವಾಸಿಗಳು ಪಾಲಿಕೆಯ ವಿರುದ್ಧ ಟ್ವಿಟರ್ ಅಭಿಯಾನವನ್ನು ಆರಂಭಿಸಿದ್ದಾರೆ. 

ನ್ಯಾಯಾಲಯ ಹಲವಾರು ಬಾರಿ ರಸ್ತೆಗುಂಡಿಗಳನ್ನು ಮುಚ್ಚುವಂತೆ ಪಾಲಿಕೆಗೆ ನಿರ್ದೇಶನವನ್ನು ನೀಡಿದೆ. ಆದರೂ ನಗರದ ಯಾವ ರಸ್ತೆಗಳು ಸಹ ಗುಂಡಿ ಮುಕ್ತವಾಗಿಲ್ಲ. ಈಗ ಏಕಾಏಕಿ ಪ್ರಧಾನಿ ಬರುವ ರಸ್ತೆಯನ್ನು ಮಾತ್ರ ಗುಂಡಿ ಮುಕ್ತಗೊಳಿಸಿದೆ ಎಂದು ಟ್ವಿಟರ್‍ನಲ್ಲಿ ಆರೋಪಿಸಿದ ನಿವಾಸಿಗಳು ಮೋದಿಯನ್ನು ತಮ್ಮ ಬಡಾವಣೆಗಳಿಗೆ ಬಂದು ಹೋಗುವಂತೆ ಆಹ್ವಾನ ನೀಡಿದ್ದಾರೆ. 

ನಗರದ ನಿವಾಸಿ ದೀಪಕ್ ಕೃಷ್ಣಪ್ಪ, `ನಗರದ ಬಹುತೇಕ ರಸ್ತೆಗಳು ಹಾಳಾಗಿವೆ. ಆದರೆ ಪ್ರಧಾನಿಗಳು ಪ್ರಯಾಣ ಮಾಡುವ ರಸ್ತೆಗಳು ಮಾತ್ರ ನವೀಕರಣಗೊಂಡಿವೆ. ಆದುದರಿಂದ ಪ್ರಧಾನಿಗಳು ನಗರದ ಎಲ್ಲಾ ರಸ್ತೆಗಳಲ್ಲಿ ಪ್ರಯಾಣ ಮಾಡಿದರೆ, ಆ ರಸ್ತೆಗಳೆಲ್ಲವೂ ಗುಂಡಿಮುಕ್ತವಾಗಬಹುದು’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

`ಮೋದಿ ಬರುವ ರಸ್ತೆ ಈಗ ನವೀಕರಣಗೊಂಡಿರಬಹುದು. ಆದರೆ, ಪ್ರಧಾನಿಯ ನಿರ್ಗಮನದ ಮರುದಿನವೆ ಪಾಲಿಕೆಯು ಆ ರಸ್ತೆಗೆ ಜೆಸಿಬಿಗಳನ್ನು ಕಳುಹಿಸಿ, ಕಾಮಗಾರಿ ನೆಪದಲ್ಲಿ ರಸ್ತೆಯನ್ನು ಹಾಳು ಮಾಡುತ್ತದೆ. ನಗರದಲ್ಲಿ ಬಹುತೇಕ ರಸ್ತೆಗಳು ಪ್ರತಿನಿತ್ಯ ಕಾಮಗಾರಿ ನೆಪದಲ್ಲಿ ಹಾಳಾಗುತ್ತಿವೆ’ ಎಂದು ಅಮರ್ ನಾಥ್ ಬಿ.ಎಂ. ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News