ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಪ್ರಜಾಪ್ರಭುತ್ವದ ಪತನಕ್ಕೆ ದಾರಿ

Update: 2021-12-04 19:30 GMT

ವೀರ್ ದಾಸ್ ಅಥವಾ ಮುನವ್ವರ್ ಫಾರೂಕಿಯಂತಹವರ ಅಭಿಪ್ರಾಯಗಳನ್ನು ನಾವು ಒಪ್ಪಬಹುದು, ಒಪ್ಪದಿರಬಹುದು. ಆದರೆ ವಿಭಜನವಾದಿ ಮನೋಭಾವ ಹೊಂದಿದ ಜನರ ಆಕ್ರಮಣ ಮತ್ತು ಅಸಹಿಷ್ಣುತೆಯಿಂದ ಯಾವುದೇ ತಡೆ ಎದುರಿಸದೆ ತಮ್ಮ ಕಲೆಯನ್ನು ವ್ಯಕ್ತಪಡಿಸುವ ಸಂಪೂರ್ಣ ಹಕ್ಕು ಅವರಿಗಿದೆ ಎನ್ನುವುದನ್ನು ನಾವು ಒಪ್ಪಲೇಬೇಕು. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿಯನ್ನು ಸರಕಾರ ಮತ್ತು ಸಮಾಜ ಹೊಂದಿದೆ.


ಕಾಮಿಡಿಯನ್ ಮುನವ್ವರ್ ಫಾರೂಕಿ ಬೆಂಗಳೂರಿನಲ್ಲಿ ಪರೋಪಕಾರ ನಿಧಿಯೊಂದಕ್ಕಾಗಿ ಕಾರ್ಯಕ್ರಮ ನೀಡಬೇಕಾಗಿತ್ತು. ಎಲ್ಲ ಟಿಕೆಟ್‌ಗಳು ಮಾರಾಟವಾಗಿ ದ್ದವು. ಆಗ ಸಂಘಟಕರಿಗೆ, ಈ ಕಾರ್ಯಕ್ರಮ ನಡೆಯುವುದು ಸಾಧ್ಯವಿಲ್ಲ ಎಂಬುದಾಗಿ ತಿಳಿಸಲಾಯಿತು. ಅಂತಿಮವಾಗಿ ಸಂಘಟಕರು ಆ ಕಾರ್ಯಕ್ರಮವನ್ನು ರದ್ದುಪಡಿಸಲೇಬೇಕಾಯಿತು. ಕಾರ್ಯಕ್ರಮ ಯಾಕೆ ನಡೆಯಲು ಸಾಧ್ಯವಿಲ್ಲ ಎನ್ನುವುದಕ್ಕೆ ಅವರು ಕೊಟ್ಟ ಕಾರಣ: ಈ ಕಾರ್ಯಕ್ರಮ ನಡೆದರೆ ಕಾನೂನು ಮತ್ತು ಸುವ್ಯವಸ್ಥೆಗೆ ಸಮಸ್ಯೆಯುಂಟಾಗಬಹುದು ಮತ್ತು ಫಾರೂಕಿ ಓರ್ವ ವಿವಾದಿತ ವ್ಯಕ್ತಿ.

ಇದಕ್ಕೂ ಮೊದಲು ಇದೇ ರೀತಿಯ ಬೆದರಿಕೆಗಳಿಂದಾಗಿ ಅವರು ತನ್ನ ಹಲವಾರು ಹಾಸ್ಯ ಕಾರ್ಯಕ್ರಮಗಳನ್ನು ರದ್ದುಪಡಿಸಬೇಕಾಗಿತ್ತು. ಈಗ ಆ ಪಟ್ಟಿಗೆ ಬೆಂಗಳೂರು ಸೇರಿದೆ.
ಅದೂ ಅಲ್ಲದೆ, ಇದಕ್ಕೂ ಮೊದಲು ಅವರನ್ನೊಮ್ಮೆ ಬಂಧಿಸಿ ಒಂದು ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿಡಲಾಗಿತ್ತು. ಅದಕ್ಕೆ ಕೊಟ್ಟ ಕಾರಣ: ಅವರು ತನ್ನ ಕಾರ್ಯಕ್ರಮದಲ್ಲಿ ಬಹುಸಂಖ್ಯಾತ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಮಾತುಗಳನ್ನು ಆಡುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಕೂಡ ಕಾರ್ಯಕ್ರಮವನ್ನು ನಿಲ್ಲಿಸಿದವರು ಇದೇ ವಾದವನ್ನು ಮುಂದಿಟ್ಟಿದ್ದಾರೆ. ಫಾರೂಕಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಮಾತುಗಳನ್ನು ಆಡುವ ಸಾಧ್ಯತೆಯಿದೆ ಎಂಬುದಾಗಿ ಕಾರ್ಯಕ್ರಮವನ್ನು ವಿರೋಧಿಸಿದ ಬಲಪಂಥೀಯ ಸಂಘಟನೆಗಳು ಆರೋಪಿಸಿದವು. ಕೊನೆಗೆ ಇದರಿಂದ ಬೇಸತ್ತ ಫಾರೂಕಿ, ಜನರನ್ನು ರಂಜಿಸುವ ತನ್ನ ಕಲೆಯನ್ನೇ ತೊರೆಯಲು ನಿರ್ಧರಿಸಿದರು. ಈ ಸಂಬಂಧ ಅವರು ಸಂದೇಶವೊಂದನ್ನು ಟ್ವಿಟರ್‌ನಲ್ಲಿ ಹಾಕಿದರು: ''ದ್ವೇಷ ಗೆದ್ದಿದೆ, ಕಲಾವಿದ ಸೋತಿದ್ದಾನೆ. ನನಗೆ ಸಾಕಾಗಿದೆ. ಗುಡ್‌ಬೈ. ಅನ್ಯಾಯ.''

ಕೆಲವೇ ದಿನಗಳ ಮೊದಲು, ಭಾರತದ ಇನ್ನೋರ್ವ ಕಾಮಿಡಿಯನ್ ವೀರ್ ದಾಸ್ ಅಮೆರಿಕದ ಕೆನಡಿ ಸೆಂಟರ್‌ನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಎದುರು 'ಟು ಇಂಡಿಯಾಸ್' (Two Indias) ಎಂಬ ಮನತಟ್ಟುವ ಕಾರ್ಯಕ್ರಮವೊಂದನ್ನು ನೀಡಿದ್ದರು. ತಾನು ವಾಸಿಸುವ ಭಾರತದಲ್ಲಿ ತಾನು ನೋಡಿರುವ ವಾಸ್ತವಿಕತೆಗಳನ್ನು ಅವರು ಆ ಕಾರ್ಯಕ್ರಮದಲ್ಲಿ ತೆರೆದಿಟ್ಟರು. ''ಹಗಲಲ್ಲಿ ಮಹಿಳೆಯರನ್ನು ಪೂಜಿಸುವ ಮತ್ತು ರಾತ್ರಿಯಲ್ಲಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವ ಭಾರತದಿಂದ ನಾನು ಬಂದಿದ್ದೇನೆ. ಸಸ್ಯಾಹಾರಿಗಳಾಗಿರುವುದಕ್ಕೆ ಹೆಮ್ಮೆ ಪಡುವ ಮತ್ತು ತರಕಾರಿಗಳನ್ನು ಬೆಳೆಯುವ ರೈತರ ಮೇಲೆ ಕಾರು ಚಲಾಯಿಸುವ ಭಾರತದಿಂದ ನಾನು ಬಂದಿದ್ದೇನೆ'' ಎಂದು ಅವರು ಹೇಳಿದರು. ಅದಕ್ಕಾಗಿ ಇಂದು ಫಾರೂಕಿಯ ಕಾರ್ಯಕ್ರಮವನ್ನು ನಿಲ್ಲಿಸಿದ ಶಕ್ತಿಗಳೇ ಅವರ ಮೇಲೆ ಮುಗಿಬಿದ್ದಿದ್ದವು.

ವೀರ್ ದಾಸ್‌ರ ಕಾರ್ಯಕ್ರಮಕ್ಕೆ ಟ್ವಿಟರ್‌ನಲ್ಲಿ ಬಂದ ಪ್ರತಿಕ್ರಿಯೆಯೊಂದು ಹೀಗಿದೆ: ''ವೀರ್ ದಾಸ್ ಎಂಬ ಹೆಸರಿನ ಈ ವ್ಯಕ್ತಿಯಲ್ಲಿ ನನಗೆ ಒಬ್ಬ ಭಯೋತ್ಪಾದಕ ಕಾಣಿಸುತ್ತಿದ್ದಾನೆ. ಈತ ವಿದೇಶಿ ನೆಲದಲ್ಲಿ ನಮ್ಮ ದೇಶದ ವಿರುದ್ಧ ಯುದ್ಧ ಸಾರಿದ ಸ್ಲೀಪರ್ ಸೆಲ್‌ನ ಸದಸ್ಯರ ಪೈಕಿ ಒಬ್ಬನಾಗಿದ್ದಾನೆ. ಆತನನ್ನು ತಕ್ಷಣ ಯುಎಪಿಎ ಅಡಿ ಬಂಧಿಸಬೇಕು ಹಾಗೂ ಭಯೋತ್ಪಾದಕ ಕಾನೂನಿನಡಿ ವಿಚಾರಣೆ ನಡೆಸಬೇಕು. @ಅಮಿತ್ ಶಾ @ಎಚ್‌ಎಮ್‌ಒ ಇಂಡಿಯಾ @ಮುಂಬೈ ಪೊಲೀಸ್@ಸಿಪಿಮುಂಬೈಪೊಲೀಸ್''.

ಇದು ವಿಭಜನವಾದಿ ರಾಷ್ಟ್ರೀಯತೆಯನ್ನು ಎತ್ತಿಹಿಡಿಯುವವರು ಹೇಗೆ ಯೋಚಿಸುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆಯಾಗಿದೆ.
ಪ್ರಸಕ್ತ ಸರಕಾರವನ್ನು ಮತ್ತು ಪ್ರಸಕ್ತ ಮೇಲುಗೈ ಸಾಧಿಸಿರುವ ರಾಜಕೀಯ ಸಿದ್ಧಾಂತವನ್ನು ವಿರೋಧಿಸುವುದು ತುಂಬಾ ಕಷ್ಟದ ಕೆಲಸ. ಇದನ್ನು ಫಾರೂಕಿ ತನ್ನ ಜೈಲುವಾಸದ ಅವಧಿಯಲ್ಲಿ ಹಾಗೂ ತನ್ನ ಸರಣಿ ಕಾರ್ಯಕ್ರಮಗಳ ರದ್ದತಿಯಲ್ಲಿ ಕಂಡುಕೊಂಡಿರಬಹುದು.
ಇನ್ನೋರ್ವ ಕಾಮಿಡಿಯನ್ ಕುನಾಲ್ ಕಾಮ್ರ ಸುಪ್ರೀಂ ಕೋರ್ಟನ್ನು ಟೀಕಿಸಿರುವುದಕ್ಕಾಗಿ ಅವರ ವಿರುದ್ಧ ಮೊಕದ್ದಮೆ ದಾಖಲಿಸಲು ಅಟಾರ್ನಿ ಜನರಲ್ ಅನುಮತಿ ನೀಡಿದ್ದರು. ವ್ಯಕ್ತಿಯೊಬ್ಬರಿಗೆ ಹಣ ನೀಡದೆ ವಂಚಿಸಿದ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಪ್ರಕರಣದಲ್ಲಿ ಆ್ಯಂಕರ್ ಅರ್ನಾಬ್ ಗೋಸ್ವಾಮಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಇದನ್ನು ತೀವ್ರವಾಗಿ ಪ್ರಶ್ನಿಸಿ, ಕುನಾಲ್ ನ್ಯಾಯಾಧೀಶರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಗ, ನ್ಯಾಯಾಂಗ ನಿಂದನೆಗಾಗಿ ಕುನಾಲ್ ಕಾಮ್ರರನ್ನು ವಿಚಾರಣೆಗೆ ಒಳಪಡಿಸಲು ಅಟಾರ್ನಿ ಜನರಲ್ ಅನುಮೋದನೆ ನೀಡಿದ್ದರು.

''ಇಂದು ಜನರು ಸುಪ್ರೀಂ ಕೋರ್ಟ್ ಮತ್ತು ಅದರ ನ್ಯಾಯಾಧೀಶ ರನ್ನು ಯಾವುದೇ ಹೆದರಿಕೆ ಮತ್ತು ನಾಚಿಕೆಯಿಲ್ಲದೆ ಟೀಕಿಸುತ್ತಾರೆ ಹಾಗೂ ಅದನ್ನು ವಾಕ್ ಸ್ವಾತಂತ್ರ್ಯ ಎಂಬುದಾಗಿ ಭಾವಿಸುತ್ತಾರೆ'' ಎಂದು ಅಟಾರ್ನಿ ಜನರಲ್ ವೇಣುಗೋಪಾಲ್ ಹೇಳಿದ್ದರು.
ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಭಾರತೀಯ ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗವಾಗಿತ್ತು. ಬಳಿಕ ಭಾರತೀಯ ಸಂವಿಧಾನದ ವಿವಿಧ ವಿಧಿಗಳು ಕೂಡ ಇದನ್ನೇ ಪ್ರಮುಖವಾಗಿ ಎತ್ತಿಹಿಡಿದಿವೆ.
ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿಹಿಡಿದಿದ್ದರು ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು. ಹಾಗಾಗಿಯೇ ಅವರು ಶ್ರೇಷ್ಠ ವ್ಯಂಗ್ಯಚಿತ್ರಕಾರ ಶಂಕರ್‌ರನ್ನು ಪ್ರಶಂಸಿಸಿದ್ದು ಮಾತ್ರವಲ್ಲ, ''ನನ್ನನ್ನು ನೀವೇನೂ ಬಿಡುವುದು ಬೇಡ'' ಎಂದಿದ್ದರು. ನೆಹರೂ ಬಗ್ಗೆ ಶಂಕರ್ ಗೌರವ ಹೊಂದಿದ್ದರು. ಅದೇ ವೇಳೆ, ಯಾವುದೇ ಭಯವಿಲ್ಲದೆ ಅವರ ಬಗ್ಗೆ ವಿಡಂಬನಾತ್ಮಕ ವ್ಯಂಗ್ಯಚಿತ್ರಗಳನ್ನೂ ರಚಿಸಿದರು.

1990ರ ದಶಕದವರೆಗೆ ನಾಯಕರನ್ನು ಮತ್ತು ಆಡಳಿತಗಾರರನ್ನು ಟೀಕಿಸುವುದು ಹಾಗೂ ಅವರ ಕುರಿತು ವ್ಯಂಗ್ಯಚಿತ್ರಗಳನ್ನು ರಚಿಸುವುದು ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುತ್ತಿರಲಿಲ್ಲ. ವಿಭಜನವಾದಿ ಕೋಮು ರಾಜಕೀಯ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೇ ಭಾರತದಲ್ಲಿ ಅಸಹಿಷ್ಣುತೆ ಬೆಳೆಯಿತು ಹಾಗೂ ಭಿನ್ನ ಅಭಿಪ್ರಾಯಗಳನ್ನು ಗೌರವಿಸುವ ಸಂಪ್ರದಾಯ ಕೊನೆಗೊಂಡಿತು.

ಭಾರತದ ಪಿಕಾಸೊ ಎಂಬುದಾಗಿ ಕರೆಸಿಕೊಂಡಿದ್ದ ಹಾಗೂ ರಾಮಾಯಣದ ಕುರಿತು 150 ಚಿತ್ರಗಳನ್ನು ಮಾಡಿದ್ದ ಎಂ.ಎಫ್. ಹುಸೈನ್‌ರನ್ನು ಗುರಿಯಾಗಿಸಿ ಅಪಪ್ರಚಾರಗಳನ್ನು ಮಾಡಲಾಯಿತು. 1970ರ ದಶಕದಲ್ಲಿ ಅವರು ಬಿಡಿಸಿದ್ದ ನಗ್ನಚಿತ್ರಗಳ ಮೇಲೆ 2010ರ ದಶಕದಲ್ಲಿ ದಾಳಿ ನಡೆಯಿತು. ಓರ್ವ ಕಲಾವಿದನಿಗೆ ನಗ್ನತೆ ಎಂದರೆ ಪರಿಶುದ್ಧತೆ ಎಂದರ್ಥ. ಸಂದರ್ಭವನ್ನು ಹೊಂದಿಕೊಂಡು ನಗ್ನತೆಯು ಅಶ್ಲೀಲ ಮತ್ತು ಖಂಡನಾರ್ಹವೂ ಆಗಬಹುದು. ಹುಸೈನ್ ಭಾರತೀಯ ಮೌಲ್ಯಗಳೊಂದಿಗೆ ಬೆಳೆದವರು. ಹಾಗಾಗಿ, ಭಾರತೀಯ ದೇವರು ಮತ್ತು ದೇವತೆಯರನ್ನು ವ್ಯಾಪಕವಾಗಿ ಚಿತ್ರಿಸಿದರು. ಇಂದು ಫಾರೂಕಿ ಮತ್ತು ವೀರ್ ದಾಸ್‌ರ ಹಾಸ್ಯಗಳನ್ನು ವಿರೋಧಿಸುವಂತಹ ಜನರೇ ಅಂದು ಅವರ ಮೇಲೆ ಮುಗಿಬಿದ್ದಿದ್ದರು. ಅವರ ವಿರುದ್ಧ ಹಲವು ಮೊಕದ್ದಮೆಗಳು ದಾಖಲಾದವು. ಅಂತಿಮವಾಗಿ, ಅವರು ತನ್ನ ಕಲೆಯನ್ನು ಮುಂದುವರಿಸಿಕೊಂಡು ಹೋಗುವುದಕ್ಕಾಗಿ ಖತರ್‌ಗೆ ಹೋಗುವ ನಿರ್ಧಾರವನ್ನು ತೆಗೆದುಕೊಂಡರು.

ಇದಕ್ಕೂ ಮೊದಲು ನಾವು ಸಲ್ಮಾನ್ ರಶ್ದಿಯ 'ಮಿಡ್‌ನೈಟ್ಸ್ ಚಿಲ್ಡರ್ರೃನ್' ಮೇಲಿನ ನಿಷೇಧವನ್ನು ನೋಡಿದ್ದೆವು. ತಸ್ಲೀಮಾ ನಸ್ರೀನ್‌ರ ಮೇಲೆಯೂ ದಾಳಿಗಳು ನಡೆದವು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪದೇ ಪದೇ ದಾಳಿಗಳು ನಡೆಯುತ್ತಿವೆ. ಮುಖ್ಯವಾಗಿ ಕಳೆದ ಮೂರು ದಶಕಗಳಲ್ಲಿ 'ಭಾವನೆಗಳಿಗೆ ನೋವುಂಟಾಗುವ' ಪ್ರವೃತ್ತಿಯು ಶಿಖರವನ್ನು ತಲುಪಿತು. ಇದು ಡಾ. ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆಯಂತಹ ವಿಚಾರವಾದಿಗಳ ಹತ್ಯೆಗಳಲ್ಲಿ ಪ್ರಕಟಗೊಂಡಿತು.

ದಾಭೋಲ್ಕರ್‌ರ 'ಅಂಧ ಶ್ರದ್ಧೆ ನಿರ್ಮೂಲನಾ ಸಮಿತಿ'ಯು ಹಳ್ಳಿಗಳಲ್ಲಿ ಬೇರೂರಿದ್ದ ಮೂಢನಂಬಿಕೆಗಳನ್ನು ಹೋಗಲಾಡಿಸಲು ಆಂದೋಲನಗಳನ್ನು ನಡೆಸುತ್ತಿತ್ತು. ಪನ್ಸಾರೆಯು ಕೋಮು ಸಾಮರಸ್ಯಕ್ಕಾಗಿ ಹೋರಾಡುತ್ತಿದ್ದರು. ಶಿವಾಜಿಯು ಮುಸ್ಲಿಮ್ ವಿರೋಧಿಯಾಗಿರಲಿಲ್ಲ, ಆದರೆ ಜನರ ಹಿತವನ್ನು ಗಮನದಲ್ಲಿರಿಸಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬುದಾಗಿ ಅವರು ಪ್ರತಿಪಾದಿಸುತ್ತಿದ್ದರು. 26/11ರ ದಾಳಿಯಲ್ಲಿ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆಯನ್ನು ಉದ್ದೇಶಪೂರ್ವಕವಾಗಿ ಕೊಂದಿರಬಹುದು ಎಂಬುದಾಗಿಯೂ ಅವರು ಹೇಳುತ್ತಿದ್ದರು. ಅದು ಭಯೋತ್ಪಾದಕ ದಾಳಿಯಾಗಿತ್ತಾದರೂ, ಇತರ ಹಲವು ಅಂಶಗಳೂ ಅದರಲ್ಲಿ ಸೇರಿರುವ ಸಾಧ್ಯತೆಯಿದೆ ಎನ್ನುತ್ತಿದ್ದರು.
ಡಾ. ಎಂ.ಎಂ. ಕಲಬುರಗಿ ಬ್ರಾಹ್ಮಣೀಯ ಸಿದ್ಧಾಂತಗಳನ್ನು ವಿರೋಧಿಸುತ್ತಿದ್ದರು ಹಾಗೂ ಬಸವಣ್ಣನವರ ಬೋಧನೆಗಳನ್ನು ಎತ್ತಿಹಿಡಿದಿದ್ದರು. ನಿರ್ಭೀತ ಪತ್ರಕರ್ತೆ ಗೌರಿ ಲಂಕೇಶ್ ಧರ್ಮದ ಆಧಾರದಲ್ಲಿ ನಡೆಸುವ ರಾಜಕೀಯದ ಬದ್ಧ ವಿರೋಧಿಯಾಗಿದ್ದರು. ಈ ಎಲ್ಲ ವಿಚಾರವಾದಿಗಳು ಮತ್ತು ಅಂಧಶ್ರದ್ಧೆ ಮತ್ತು ಕೋಮುವಾದದ ಟೀಕಾಕಾರರು ಅಸಹಿಷ್ಣು ಗುಂಪುಗಳ ಕೋಪಕ್ಕೆ ಗುರಿಯಾಗಬೇಕಾಯಿತು ಹಾಗೂ ಅದಕ್ಕಾಗಿ ಅವರು ತಮ್ಮ ಪ್ರಾಣವನ್ನೇ ಬಲಿ ಕೊಡಬೇಕಾಯಿತು.

ಸರಕಾರದ ಟೀಕಾಕಾರರನ್ನು ನೇರವಾಗಿ ರಾಷ್ಟ್ರವಿರೋಧಿಗಳು ಎಂಬುದಾಗಿ ಬಿಂಬಿಸಿ ಅವರನ್ನು ಖಳರನ್ನಾಗಿ ಬಿಂಬಿಸುವ ಹಾಗೂ ಶಿಕ್ಷಿಸುವ ಮಸಲತ್ತುಗಳು ನಡೆಯುತ್ತಿವೆ. ಸಲ್ಮಾನ್ ರಶ್ದಿಯ ಪುಸ್ತಕ ನಿಷೇಧದಿಂದ ಹಿಡಿದು ಇಂದಿನ ಕಾಲದವರೆಗೆ ಅಸಹಿಷ್ಣುತೆ ವಿವಿಧ ರೂಪಗಳಲ್ಲಿ ತಾಂಡವವಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದೂ ಅಲ್ಲದೆ, ಮುನವ್ವರ್ ಫಾರೂಕಿಯ ವಿಷಯದಲ್ಲಿ ಮುಸ್ಲಿಮ್ ವಿರೋಧಿ ಭಾವನೆಯೂ ಸಾಕಷ್ಟು ಪ್ರಮಾಣದಲ್ಲಿ ಬೆರೆತಿರುವುದನ್ನು ನಾವು ಗಮನಿಸಿದ್ದೇವೆ. ಮುನವ್ವರ್ ಮೂಲತಃ ರಾಜಕೀಯ ವಿಷಯಗಳ ಮೇಲೆ ಹಾಸ್ಯ ಮಾಡುವುದಿಲ್ಲ. ಹಾಸ್ಯದ ನಡುವೆ ಅಲ್ಲಲ್ಲಿ ಕೆಲವು ರಾಜಕೀಯ ವಿಷಯಗಳು ಬರುತ್ತವೆ. ಅವರು ಜನರನ್ನು ನಗಿಸಲು ಹಿಂದೂ ದೇವರುಗಳು ಮತ್ತು ದೇವತೆಗಳನ್ನು ಬಳಸುವುದಿಲ್ಲ.
ಫಾರೂಕಿ ತನ್ನ ಕಲೆಗೆ ವಿದಾಯ ಹೇಳಿರುವುದು ಸಮಾಜದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಸಂಕೇತ. ಅಸಹಿಷ್ಣುತೆಯನ್ನು ಉಳಿಸಿಕೊಳ್ಳಲು ಸರಕಾರಗಳು ಮುಂದಾಗುತ್ತವೆ ಹಾಗೂ ವಿಭಜನವಾದಿ ರಾಷ್ಟ್ರೀಯವಾದಿಗಳ ಬೆದರಿಕೆಗಳು ಮತ್ತು ಬೇಡಿಕೆಗಳಿಗೆ ಅವು ಸುಲಭವಾಗಿ ಶರಣಾಗುತ್ತವೆ. ಇದು ಅಸಹಿಷ್ಣುತೆಯು ಸರ್ವವ್ಯಾಪಿಯಾಗಿರುವುದನ್ನಷ್ಟೇ ಸೂಚಿಸುತ್ತದೆ.
ಸರಕಾರಗಳ ಈ ರೀತಿಯ ಮನೋಭಾವಗಳು ಪ್ರಜಾಪ್ರಭುತ್ವದ ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗುತ್ತವೆ. 'ಎಕನಾಮಿಕ್ ಇಂಟಲಿಜನ್ಸ್ ಯೂನಿಟ್'ನ ಪ್ರಕಾರ, ಪ್ರಜಾಪ್ರಭುತ್ವ ಸೂಚ್ಯಂಕ ರ್ಯಾಂಕಿಂಗ್‌ನಲ್ಲಿ 2020 ಡಿಸೆಂಬರ್‌ನಲ್ಲಿ ಭಾರತ ಎರಡು ಸ್ಥಾನಗಳನ್ನು ಕಳೆದುಕೊಂಡು 53ಕ್ಕೆ ಕುಸಿದಿದೆ.

ಪ್ರಜಾಸತ್ತಾತ್ಮಕ ಸ್ವಾತಂತ್ರ್ಯದ ಮಾನದಂಡದಲ್ಲಿ ಭಾರತವು ಇನ್ನಷ್ಟು ಕುಸಿಯುವುದನ್ನು ತಡೆಯಬೇಕಾದ ಅಗತ್ಯ ಇಂದು ನಮ್ಮೆಲ್ಲರ ಮುಂದಿದೆ.
ವೀರ್ ದಾಸ್ ಅಥವಾ ಮುನವ್ವರ್ ಫಾರೂಕಿಯಂತಹವರ ಅಭಿಪ್ರಾಯಗಳನ್ನು ನಾವು ಒಪ್ಪಬಹುದು, ಒಪ್ಪದಿರಬಹುದು. ಆದರೆ ವಿಭಜನವಾದಿ ಮನೋಭಾವ ಹೊಂದಿದ ಜನರ ಆಕ್ರಮಣ ಮತ್ತು ಅಸಹಿಷ್ಣುತೆಯಿಂದ ಯಾವುದೇ ತಡೆ ಎದುರಿಸದೆ ತಮ್ಮ ಕಲೆಯನ್ನು ವ್ಯಕ್ತಪಡಿಸುವ ಸಂಪೂರ್ಣ ಹಕ್ಕು ಅವರಿಗಿದೆ ಎನ್ನುವುದನ್ನು ನಾವು ಒಪ್ಪಲೇಬೇಕು. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿಯನ್ನು ಸರಕಾರ ಮತ್ತು ಸಮಾಜ ಹೊಂದಿದೆ.

Writer - ಡಾ. ರಾಮ್ ಪುನಿಯಾನಿ

contributor

Editor - ಡಾ. ರಾಮ್ ಪುನಿಯಾನಿ

contributor

Similar News