ಜಾತಿ ವ್ಯವಸ್ಥೆಯಲ್ಲಿ ಬಂದಿಯಾಗಿರುವ ಭಾರತದ ಜೈಲುಗಳು!

Update: 2021-12-05 03:04 GMT

(ನಿನ್ನೆಯ ಸಂಚಿಕೆಯಿಂದ)

‘‘ಜೈಲಿನ ನಿಯಮಗಳು ಹಲವಾರಿವೆ. ಯಾವುದಾದರೂ ವಿಷಯದಲ್ಲಿ ಕೈದಿಗಳು ಮತ್ತು ಕಾನೂನು ಪ್ರತಿನಿಧಿಗಳು ಪ್ರತಿಭಟಿಸಿದರೆ ಅದನ್ನು ನಿವಾರಿಸಲು ಅಧಿಕಾರಿಗಳು ಪ್ರತಿ ಬಾರಿಯೂ ಒಂದಲ್ಲ ಒಂದು ನಿಯಮವನ್ನು ಉಲ್ಲೇಖಿಸುತ್ತಾರೆ. ಆದರೆ, ಈ ಅಧಿಕೃತ ದಾಖಲೆಗಳು ಜೈಲಿನ ಕೈದಿಗಳಿಗೆ ಬಿಡಿ, ಸಾಮಾನ್ಯ ಜನರಿಗೂ ಯಾವತ್ತೂ ಸಿಗುವುದಿಲ್ಲ. ತಿಳುವಳಿಕೆಯಿರುವ ಓರ್ವ ಕೈದಿ ತನ್ನ ಹಕ್ಕುಗಳನ್ನು ಕೇಳುವುದಕ್ಕಿಂತ ಹೆಚ್ಚಿನ ಅಪಾಯ ಬೇರೊಂದಿಲ್ಲ’’ ಎಂದು ಮಾಜಿ ಕೈದಿ ಲಲಿತಾ ಹೇಳುತ್ತಾರೆ.

ಪಶ್ಚಿಮ ಬಂಗಾಳವು ರಾಜಕೀಯ ಮತ್ತು ಪ್ರಜಾಸತ್ತಾತ್ಮಕ ಚಳವಳಿಗಳಿಗೆ ಸಂಬಂಧಿಸಿ ಬಂಧನಕ್ಕೊಳಗಾಗುವ ಕೈದಿಗಳಿಗೆ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ. ಹೀಗೆ ಮಾಡಿರುವ ಏಕೈಕ ರಾಜ್ಯ ಅದಾಗಿದೆ. ಆದರೆ ಜಾತಿ ಆಧಾರದಲ್ಲಿ ಕೆಲಸಗಳನ್ನು ವಿಂಗಡಿಸುವ ವಿಷಯದಲ್ಲಿ ಅದು ಬೇರೆ ರಾಜ್ಯಗಳಷ್ಟೇ ಪ್ರತಿಗಾಮಿ ಮತ್ತು ಅಸಾಂವಿಧಾನಿಕವಾಗಿದೆ.

ಅಲ್ಲಿನ ಜೈಲು ನಿಯಮಾವಳಿ ಪುಸ್ತಕವೂ ಉತ್ತರಪ್ರದೇಶದ ಮಾದರಿಯಲ್ಲೇ ಇದೆ. ಧಾರ್ಮಿಕ ಕಟ್ಟಳೆಗಳು ಮತ್ತು ಜಾತಿ ಆಧಾರಿತ ಗೌರವದ ವಿಷಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ಅದು ಹೇಳುತ್ತದೆ.

ಅದರ ನಿಯಮಾವಳಿ ಪುಸ್ತಕದಲ್ಲಿ ನಿರ್ದಿಷ್ಟ ಧಾರ್ಮಿಕ ಬೇಡಿಕೆಗಳನ್ನು ಪೂರೈಸಬೇಕು ಎಂದಿದೆ. ಜನಿವಾರ ತೊಡುವ ಬ್ರಾಹ್ಮಣರಿಗೆ ಜನಿವಾರ ನೀಡಬೇಕು ಮತ್ತು ಮುಸ್ಲಿಮರಿಗೆ ಅವರ ಆಯ್ಕೆಯ ನಿರ್ದಿಷ್ಟ ಉದ್ದದ ಪ್ಯಾಂಟ್‌ಗಳನ್ನು ಕೊಡಬೇಕು ಎಂದು ಹೇಳುತ್ತದೆ. ಅದರ ಜೊತೆಗೆ, ‘ಜೈಲು ಅಧಿಕಾರಿಯೊಬ್ಬರ ಉಪಸ್ಥಿತಿಯಲ್ಲಿ ಸೂಕ್ತ ಜಾತಿಯ ಕೈದಿಗಳು ಆಹಾರ ತಯಾರಿಸಬೇಕು ಮತ್ತು ಅದನ್ನು ಸೆಲ್‌ಗಳಿಗೆ ಒಯ್ಯಬೇಕು’ ಎಂಬುದಾಗಿ ಬರೆಯಲಾಗಿದೆ. ಅದೇ ರೀತಿ, ‘ಗುಡಿಸುವವರನ್ನು ಮೆಹ್ತಾರ್ ಅಥವಾ ಹರಿ ಜಾತಿಯಿಂದ ಆರಿಸಬೇಕು. ತಮ್ಮ ಬಿಡುವಿನ ಅವಧಿಯಲ್ಲಿ ಗುಡಿಸುವ ಕೆಲಸ ಮಾಡುವ ಚಂಡಾಲ ಅಥವಾ ಇತರ ಕೆಳ ಜಾತಿಯವರನ್ನೂ ಈ ಕೆಲಸಕ್ಕೆ ನೇಮಿಸಬಹುದಾಗಿದೆ ಅಥವಾ ಯಾರಾದರೂ ಸ್ವ ಇಚ್ಛೆಯಿಂದ ಈ ಕೆಲಸವನ್ನು ಮಾಡಲು ಮುಂದೆ ಬರಬಹುದಾಗಿದೆ’ ಎಂಬುದಾಗಿಯೂ ಪಶ್ಚಿಮ ಬಂಗಾಳದ ಜೈಲು ನಿಯಮಗಳ ಪುಸ್ತಕ ಹೇಳುತ್ತದೆ.

ಈ ನಿಯಮಗಳು ಜೈಲಿನ ನಿಯಮ ಪುಸ್ತಕದಲ್ಲಿ ಇದೆ. ಆದರೆ ಅದನ್ನು ಯಾರೂ ಪ್ರಶ್ನಿಸುತ್ತಿಲ್ಲ.

‘‘ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಜಾತಿ ಆಧಾರಿತ ವ್ಯವಸ್ಥೆಯನ್ನು ಯಾವತ್ತೂ ಪರಿಗಣಿಸಲಾಗಿಲ್ಲ’’ ಎಂದು ಆಂಧ್ರಪ್ರದೇಶದ ಮಾಜಿ ಜೈಲು ಮಹಾ ನಿರೀಕ್ಷಕ ಹಾಗೂ ವೆಲ್ಲೂರಿನಲ್ಲಿರುವ ಸರಕಾರಿ ಒಡೆತನದ ಜೈಲುಗಳು ಮತ್ತು ಆಡಳಿತ ಸುಧಾರಣಾ ಅಕಾಡಮಿಯ ಮಾಜಿ ನಿರ್ದೇಶಕ ಡಾ. ರಿಯಾಝುದ್ದೀನ್ ಅಹ್ಮದ್ ಹೇಳುತ್ತಾರೆ.

‘‘ನನ್ನ 34 ವರ್ಷಗಳ ವೃತ್ತಿ ಜೀವನದಲ್ಲಿ ಈ ವಿಷಯ ಯಾವತ್ತೂ ಚರ್ಚೆಗೆ ಬಂದಿಲ್ಲ’’ ಎಂದು ಅವರು ಹೇಳುತ್ತಾರೆ.

‘‘ಜೈಲಿನ ಅಧಿಕಾರಿಗಳು ಜೈಲಿನಿಂದ ಹೊರಗಿರುವ ಅದೇ ಜಾತಿ ಆಧಾರಿತ ವ್ಯವಸ್ಥೆಯ ಉತ್ಪನ್ನಗಳು. ಜೈಲಿನ ನಿಯಮ ಪುಸ್ತಕಗಳು ಏನೇ ಹೇಳಿದರೂ, ಕೈದಿಗಳ ಘನತೆ ಮತ್ತು ಸಮಾನತೆಯನ್ನು ಕಾಯ್ದುಕೊಳ್ಳುವ ಸಂಪೂರ್ಣ ಅಧಿಕಾರ ಜೈಲಿನ ಅಧಿಕಾರಿಗಳಿಗಿದೆ’’ ಎಂದು ಅಹ್ಮದ್ ಅಭಿಪ್ರಾಯಪಡುತ್ತಾರೆ.

ದಿಲ್ಲಿಯ ವಕೀಲೆ ಹಾಗೂ ಭಾರತೀಯ ಜಾತಿ ವ್ಯವಸ್ಥೆಯ ವಿರೋಧಿಯಾಗಿರುವ ದಿಶಾ ವಾಡೇಕರ್, ಜೈಲಿನ ಕಾನೂನುಗಳನ್ನು ಪ್ರತಿಗಾಮಿ ‘ಮನುವಿನ ಕಾನೂನು’ಗಳಿಗೆ ಹೋಲಿಸುತ್ತಾರೆ.

‘‘ಜೈಲಿನ ವ್ಯವಸ್ಥೆಯು ಮನುವಿನ ನಿಯಮಗಳ ಪ್ರತಿರೂಪವಾಗಿದೆ. ‘ಕಾನೂನಿನ ಎದುರು ಎಲ್ಲರೂ ಸಮಾನರು’ ಮತ್ತು ‘ಕಾನೂನಿನ ರಕ್ಷಣೆ’ ಎಂಬ ಆಶಯಗಳಿಗೆ ಅನುಗುಣವಾಗಿ ನಿಯಮಗಳನ್ನು ರೂಪಿಸುವಲ್ಲಿ ಜೈಲು ವ್ಯವಸ್ಥೆ ವಿಫಲವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಅದು ಅನ್ಯಾಯದ ಆಧಾರದಲ್ಲಿ ರಚನೆಗೊಂಡ ಮನುವಿನ ಕಾನೂನುಗಳನ್ನು ಅನುಸರಿಸುತ್ತದೆ. ಜಾತಿ ಆಧಾರಿತ ನ್ಯಾಯ ವ್ಯವಸ್ಥೆಗೆ ರಾಜ್ಯಗಳು ಜೋತುಬಿದ್ದಿವೆ ಹಾಗೂ ಜಾತಿ ವ್ಯವಸ್ಥೆಯಲ್ಲಿ ವ್ಯಕ್ತಿಯ ಸ್ಥಾನವನ್ನು ಪರಿಗಣಿಸಿ ಶಿಕ್ಷೆ ಮತ್ತು ಕೆಲಸವನ್ನು ನಿರ್ಧರಿಸುತ್ತದೆ’’ ಎಂದು ವಾಡೇಕರ್ ಹೇಳುತ್ತಾರೆ.

ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಭಾರತದ ಬಹುತೇಕ ಎಲ್ಲ ರಾಜ್ಯಗಳು ತಮ್ಮ ಜೈಲು ನಿಯಮಗಳ ಪುಸ್ತಕವನ್ನು 1894ರ ಜೈಲು ಕಾಯ್ದೆಯ ಆಧಾರದಲ್ಲಿ ರೂಪಿಸಿವೆ.

2016ರಲ್ಲಿ ‘ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವೆಲಪ್‌ಮೆಂಟ್’ (ಬಿಪಿಆರ್‌ಡಿ) ಮಾದರಿ ಜೈಲು ನಿಯಮ ಪುಸ್ತಕವೊಂದನ್ನು ಹೊರತಂದಿತು. ಮಹಿಳಾ ಕೈದಿಗಳನ್ನು ನೋಡಿಕೊಳ್ಳುವುದಕ್ಕೆ ಸಂಬಂಧಿಸಿದ ವಿಶ್ವ ಸಂಸ್ಥೆಯ ನಿಯಮಗಳು (ಯುಎನ್ ಬ್ಯಾಂಕಾಕ್ ನಿಯಮಗಳು) ಮತ್ತು ಕೈದಿಗಳನ್ನು ನಡೆಸಿಕೊಳ್ಳುವುದಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಕನಿಷ್ಠ ಮಾನದಂಡಗಳಿಗೆ (ಮಂಡೇಲಾ ನಿಯಮಗಳು) ಅನುಗುಣವಾಗಿ ಮಾದರಿ ಜೈಲು ನಿಯಮಗಳನ್ನು ರೂಪಿಸಲಾಗಿತ್ತು. ಜನಾಂಗ, ಬಣ್ಣ, ಲಿಂಗ, ಭಾಷೆ, ಧರ್ಮ, ರಾಜಕೀಯ ಅಥವಾ ಇತರ ಅಭಿಪ್ರಾಯ, ರಾಷ್ಟ್ರೀಯ ಅಥವಾ ಸಾಮಾಜಿಕ ಮೂಲ, ಆಸ್ತಿ, ಹುಟ್ಟು ಅಥವಾ ಇತರ ಯಾವುದೇ ಸ್ಥಾನಮಾನದ ಆಧಾರದಲ್ಲಿ ಕೈದಿಗಳ ನಡುವೆ ತಾರತಮ್ಯ ಮಾಡುವ ಪದ್ಧತಿಯನ್ನು ಕೈಬಿಡುವಂತೆ ವಿಶ್ವಸಂಸ್ಥೆಯ ಈ ಎರಡು ನಿರ್ಣಯಗಳು ಕರೆ ನೀಡುತ್ತವೆ. ‘ಜೈಲುಗಳಲ್ಲಿ ಯಾರೂ ಬಲವಂತದ ಅಥವಾ ಕಡ್ಡಾಯ ಕೆಲಸವನ್ನು ಮಾಡಬೇಕಾಗಿಲ್ಲ’ ಎಂಬುದಾಗಿ ವಿಶ್ವಸಂಸ್ಥೆಯು ಮಂಡಿಸಿದ 1977ರ ಅಂತರ್‌ರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಡಂಬಡಿಕೆಯು ಸ್ಪಷ್ಟವಾಗಿ ಹೇಳುತ್ತದೆ.

ಬದಲಾವಣೆಗೆ ತವಕವಿಲ್ಲ?

ಜೈಲು ರಾಜ್ಯ ವಿಷಯವಾಗಿರುವುದರಿಂದ ಮಾದರಿ ಜೈಲು ನಿಯಮಗಳಲ್ಲಿ ಸೂಚಿಸಲಾಗಿರುವ ಬದಲಾವಣೆಗಳನ್ನು ಜಾರಿಗೆ ತರುವುದು ರಾಜ್ಯ ಸರಕಾರಗಳ ಜವಾಬ್ದಾರಿಯಾಗಿದೆ. ವಿವಿಧ ರಾಜ್ಯಗಳಲ್ಲಿ ಈಗ ಚಾಲ್ತಿಯಲ್ಲಿರುವ ಜೈಲು ನಿಯಮ ಪುಸ್ತಕಗಳಲ್ಲಿ ಸಮಸ್ಯೆಯಿದೆ ಎನ್ನುವುದನ್ನು ಅಂಗೀಕರಿಸಿರುವ ಮಾದರಿ ಜೈಲು ನಿಯಮಾವಳಿಯು, ಅಡುಗೆ ಕೋಣೆ ಅಥವಾ ಅಡುಗೆಯ ಉಸ್ತುವಾರಿಯನ್ನು ಜಾತಿ ಅಥವಾ ಧರ್ಮದ ಆಧಾರದಲ್ಲಿ ನಿರ್ವಹಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಹೇಳುತ್ತದೆ. ಅದೇ ರೀತಿ, ಕೈದಿಯೊಬ್ಬನ ಜಾತಿ ಅಥವಾ ಧರ್ಮದ ಆಧಾರದಲ್ಲಿ ಕೈದಿಗಳಿಗೆ ವಿಶೇಷ ಸ್ಥಾನಮಾನ ನೀಡುವುದನ್ನೂ ಅದು ನಿಷೇಧಿಸುತ್ತದೆ. ಜಾತಿ ಅಥವಾ ಧರ್ಮದ ಆಧಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮಾದರಿ ನಿಯಮಾವಳಿಯು ಶಿಕ್ಷಾರ್ಹ ಅಪರಾಧವನ್ನಾಗಿ ಘೋಷಿಸಿದೆ. ಆದರೆ, ಮಾದರಿ ಜೈಲು ನಿಯಮಾವಳಿಯ ಅನುಷ್ಠಾನವೇ ನಡೆದಿಲ್ಲ.

ಜೈಲು ಪುಸ್ತಕಗಳಿಂದ ಅಮಾನವೀಯ ಹಾಗೂ ಅಸಾಂವಿಧಾನಿಕ ಪದ್ಧತಿಗಳನ್ನು ರಾಜ್ಯಗಳ ಜೈಲು ಇಲಾಖೆಗಳು ತೆಗೆದುಹಾಕಿಲ್ಲವೆಂದಲ್ಲ. ಗೋವಾ ಈ ಕೆಲಸವನ್ನು ಮಾಡಿದೆ. ಅದೇ ರೀತಿ, ದಿಲ್ಲಿ, ಮಹಾರಾಷ್ಟ್ರ ಮತ್ತು ಒಡಿಶಾಗಳಲ್ಲೂ ಇದು ನಡೆದಿದೆ. ಜೈಲುಗಳನ್ನು ನಡೆಸುವುದಕ್ಕೂ ಜಾತಿಗೂ ಸಂಬಂಧವಿಲ್ಲ ಎಂದು ಈ ರಾಜ್ಯಗಳು ಹೇಳಿವೆ. ಕಳೆದ ಹಲವು ವರ್ಷಗಳಲ್ಲಿ, ಶಿಕ್ಷೆಯಾಗಿ ಕೈಕೋಳ ತೊಡಿಸುವುದು ಮತ್ತು ಛಡಿಯೇಟು ನೀಡುವುದು ನಿಂತಿದೆ. ಕೆಲವು ರಾಜ್ಯಗಳ ಜೈಲುಗಳಲ್ಲಿ ಜಾತಿ ಆಧಾರಿತವಾಗಿ ಕೆಲಸಗಳ ವಿಂಗಡಣೆಯನ್ನೂ ನಿಲ್ಲಿಸಲಾಗಿದೆ.

ಆದರೆ, ಈ ಕ್ರಮಗಳು ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಿವೆಯೇ? ‘‘ಇಲ್ಲ’’ ಎಂದು ಮಾಜಿ ಕೈದಿ ಲಲಿತಾ ಹೇಳುತ್ತಾರೆ. 2010 ಮತ್ತು 2017ರ ನಡುವಿನ ಅವಧಿಯಲ್ಲಿ ಲಲಿತಾ ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಹಲವು ಮೊಕದ್ದಮೆಗಳನ್ನು ಎದುರಿಸಿದರು. ಅವರ ಜೈಲುವಾಸದ ಹೆಚ್ಚಿನ ಅವಧಿಯು ಬೈಕುಲಾ ಮಹಿಳಾ ಕಾರಾಗೃಹದಲ್ಲಿ ಸಾಗಿದರೆ, ಅವರನ್ನು ಆಗಾಗ ಇತರ ಜೈಲುಗಳಿಗೂ ಕರೆದುಕೊಂಡು ಹೋಗಲಾಯಿತು. ಪ್ರಯಾಣದ ಅವಧಿಯಲ್ಲಿ ಅವರು ಇತರ ಕೈದಿಗಳನ್ನು ಮತ್ತು ಜೈಲು ಅಧಿಕಾರಿಗಳನ್ನು ಭೇಟಿಯಾದರು. ಇದು ಅವರಿಗೆ ಜೈಲು ವ್ಯವಸ್ಥೆಯಲ್ಲಿ ಬೇರೂರಿರುವ ಕ್ಯಾನ್ಸರ್‌ನಂತಹ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ನೆರವಾಯಿತು.

ಲಲಿತಾ ಜೈಲಿನಲ್ಲಿ ಉಗ್ರ ಹೋರಾಟಗಾರ್ತಿಯಾಗಿದ್ದರು. ಅವರು ತನಗಾಗಿ ಹಾಗೂ ತನ್ನ ಸಹ ಕೈದಿಗಳ ಮೂಲಭೂತ ಹಕ್ಕುಗಳಿಗಾಗಿ ಹೋರಾಡಿದರು. ಆಹಾರದ ಗುಣಮಟ್ಟವನ್ನು ಹೆಚ್ಚಿಸಬೇಕು ಹಾಗೂ ಕೋಳಿ ಮತ್ತು ಮಾಂಸ ಪೂರೈಕೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿ ಮಹಿಳಾ ಕೈದಿಗಳು ಅವರ ನೇತೃತ್ವದಲ್ಲಿ ಬಂಡೆದ್ದರು.

‘‘ಜೈಲಿನ ನಿಯಮಗಳು ಹಲವಾರಿವೆ. ಯಾವುದಾದರೂ ವಿಷಯದಲ್ಲಿ ಕೈದಿಗಳು ಮತ್ತು ಕಾನೂನು ಪ್ರತಿನಿಧಿಗಳು ಪ್ರತಿಭಟಿಸಿದರೆ ಅದನ್ನು ನಿವಾರಿಸಲು ಅಧಿಕಾರಿಗಳು ಪ್ರತಿ ಬಾರಿಯೂ ಒಂದಲ್ಲ ಒಂದು ನಿಯಮವನ್ನು ಉಲ್ಲೇಖಿಸುತ್ತಾರೆ. ಆದರೆ, ಈ ಅಧಿಕೃತ ದಾಖಲೆಗಳು ಜೈಲಿನ ಕೈದಿಗಳಿಗೆ ಬಿಡಿ, ಸಾಮಾನ್ಯ ಜನರಿಗೂ ಯಾವತ್ತೂ ಸಿಗುವುದಿಲ್ಲ. ತಿಳುವಳಿಕೆಯಿರುವ ಓರ್ವ ಕೈದಿ ತನ್ನ ಹಕ್ಕುಗಳನ್ನು ಕೇಳುವುದಕ್ಕಿಂತ ಹೆಚ್ಚಿನ ಅಪಾಯ ಬೇರೊಂದಿಲ್ಲ’’ ಎಂದು ಲಲಿತಾ ಹೇಳುತ್ತಾರೆ.

ಲಲಿತಾರ ಮಾತುಗಳನ್ನು ಅಹ್ಮದ್ ಒಪ್ಪುತ್ತಾರೆ. ಪರಿಷ್ಕೃತ ಜೈಲು ನಿಯಮಾವಳಿಗಳು ಯಾಕೆ ಸಿಗುತ್ತಿಲ್ಲ ಎನ್ನುವುದಕ್ಕೆ ವೆಲ್ಲೂರಿನಲ್ಲಿರುವ ಅಕಾಡಮಿ ಆಫ್ ಪ್ರಿಸನ್ಸ್ ಆ್ಯಂಡ್ ಕರೆಕ್ಷನಲ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಪ್ರೊಫೆಸರ್ ಆಗಿರುವ ಬೆಲೂಯ ಇಮಾನುಯೆಲ್ ಹೀಗೆ ವಿವರಣೆ ನೀಡುತ್ತಾರೆ: ‘‘ನಿಯಮಾವಳಿಗಳ ಪುಸ್ತಕಕ್ಕೆ ತರಲಾಗುವ ಬದಲಾವಣೆಗಳು ಪುಸ್ರಕದಲ್ಲಿ ಕಾಣಿಸಿಕೊಳ್ಳಲು ಸರಾಸರಿ ಕನಿಷ್ಠ 15 ವರ್ಷಗಳು ತಗಲುತ್ತವೆ’’.

‘‘ಪ್ರತಿ ಬಾರಿ ರಾಜ್ಯವು ಜೈಲು ನಿಯಮಾವಳಿ ಪುಸ್ತಕಕ್ಕೆ ತಿದ್ದುಪಡಿ ತಂದಾಗಲೂ ಅದನ್ನು ಅಧಿಕಾರಿಗಳ ಮಟ್ಟದಲ್ಲಿ ಮಾತ್ರ ಪ್ರಸ್ತಾಪಿಸಲಾಗುತ್ತದೆ. 15 ವರ್ಷಗಳಿಗೆ ಒಮ್ಮೆ ಪುಸ್ತಕವನ್ನು ಮರುಮುದ್ರಿಸಲಾಗುತ್ತಿದ್ದು, ಆಗಷ್ಟೇ ತಿದ್ದುಪಡಿಯು ಪುಸ್ತಕದಲ್ಲಿ ಕಾಣಿಸಿಕೊಳ್ಳುತ್ತದೆ. ಎಲ್ಲ ತಿದ್ದುಪಡಿಗಳನ್ನು ಒಂದೇ ಸ್ಥಳದಲ್ಲಿ ಕಾಣುವುದು ಅಸಂಭವ’’ ಎಂದು ಇಮಾನುಯೆಲ್ ಹೇಳುತ್ತಾರೆ.

ಪರಿಷ್ಕೃತ ಜೈಲು ನಿಯಮಾವಳಿಗಳನ್ನು ಪಡೆಯಲು ಕೈದಿಗಳ ಹಕ್ಕುಗಳಿಗಾಗಿ ಹಲವು ದಶಕಗಳಿಂದ ಹೋರಾಡುತ್ತಿರುವ ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ (ಸಿಎಚ್‌ಆರ್‌ಐ) ತುಂಬಾ ಸಮಯದಿಂದ ಪ್ರಯತ್ನಿಸುತ್ತಿದೆ. ಆದರೆ ಅದು ತನ್ನ ಪ್ರಯತ್ನಗಳಲ್ಲಿ ಯಶಸ್ವಿಯಾಗಿಲ್ಲ. ಕೇವಲ 10 ರಾಜ್ಯಗಳ ಜೈಲು ನಿಯಮಗಳು ಮತ್ತು ನಿಯಮಾವಳಿಗಳ ಪುಸ್ತಕವು ರಾಜ್ಯ ಜೈಲುಗಳ ವೆಬ್‌ಸೈಟ್‌ಗಳಲ್ಲಿವೆ. ಇತರ ರಾಜ್ಯಗಳ ಪರಿಷ್ಕೃತ ನಿಯಮಗಳನ್ನು ಪಡೆಯುವುದು ಅತ್ಯಂತ ಕಷ್ಟಕರ. ನಮ್ಮ ಅನುಭವದಲ್ಲಿ ಹೇಳುವುದಾದರೆ ಜೈಲಿನ ನಿಯಮಗಳ ಪುಸ್ತಕಗಳನ್ನು ಪಡೆಯುವುದು ಕೈದಿಗಳಿಗೂ ಕಷ್ಟ. ವಾಸ್ತವವಾಗಿ, ಎಲ್ಲ ಜೈಲು ಗ್ರಂಥಾಲಯಗಳಲ್ಲಿ ಜೈಲಿನ ನಿಯಮಗಳ ಪ್ರತಿಯೊಂದು ಇರಬೇಕು’’ ಎಂದು ಸಿಎಚ್‌ಆರ್‌ಐಯಲ್ಲಿ ಹಿರಿಯ ಪ್ರೋಗ್ರಾಮ್ ಆಫೀಸರ್ ಆಗಿರುವ ಸುಗಂಧ ಶಂಕರ್ ಹೇಳುತ್ತಾರೆ.

‘‘ಜೈಲಿನ ವ್ಯವಸ್ಥೆಯು ಮನುವಿನ ನಿಯಮಗಳ ಪ್ರತಿರೂಪವಾಗಿದೆ. ‘ಕಾನೂನಿನ ಎದುರು ಎಲ್ಲರೂ ಸಮಾನರು’ ಮತ್ತು ‘ಕಾನೂನಿನ ರಕ್ಷಣೆ’ ಎಂಬ ಆಶಯಗಳಿಗೆ ಅನುಗುಣವಾಗಿ ನಿಯಮಗಳನ್ನು ರೂಪಿಸುವಲ್ಲಿ ಜೈಲು ವ್ಯವಸ್ಥೆ ವಿಫಲವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಅದು ಅನ್ಯಾಯದ ಆಧಾರದಲ್ಲಿ ರಚನೆಗೊಂಡ ಮನುವಿನ ಕಾನೂನುಗಳನ್ನು ಅನುಸರಿಸುತ್ತದೆ. ಜಾತಿ ಆಧಾರಿತ ನ್ಯಾಯ ವ್ಯವಸ್ಥೆಗೆ ರಾಜ್ಯಗಳು ಜೋತುಬಿದ್ದಿವೆ ಹಾಗೂ ಜಾತಿ ವ್ಯವಸ್ಥೆಯಲ್ಲಿ ವ್ಯಕ್ತಿಯ ಸ್ಥಾನವನ್ನು ಪರಿಗಣಿಸಿ ಶಿಕ್ಷೆ ಮತ್ತು ಕೆಲಸವನ್ನು ನಿರ್ಧರಿಸುತ್ತದೆ’’

-ದಿಲ್ಲಿಯ ವಕೀಲೆ ದಿಶಾ ವಾಡೇಕರ್

► ಹಣದ ಅವಶ್ಯಕತೆಗಾಗಿ ಕೆಳದರ್ಜೆಯ ಕೆಲಸ

ವ್ಯಕ್ತಿಯೊಬ್ಬರನ್ನು ಬಂಧಿಸಿದಾಗ ಹೆಚ್ಚಿನ ಸಂದರ್ಭಗಳಲ್ಲಿ ಬಾಹ್ಯ ಜಗತ್ತು ಪೊಲೀಸರಿಗೆ ಹೆದರಿ ಅವರೊಂದಿಗಿನ ಸಂಪರ್ಕವನ್ನು ಕಡಿದುಕೊಳ್ಳುತ್ತದೆ. ಮುಂಬೈ ರೀವಿ ರೋಡ್ ಪ್ರದೇಶದ ಮನೆಗೆಲಸದ ಮಹಿಳೆ 33 ವರ್ಷದ ನೂರ್‌ಜಹಾನ್ ಮಂಡಲ್‌ರನ್ನು ಪೊಲೀಸರು ಬಂಧಿಸಿದಾಗ ನಾಲ್ಕು ತಿಂಗಳುಗಳ ಕಾಲ ಅವರನ್ನು ಭೇಟಿಯಾಗಲು ಯಾರೂ ಹೋಗಲಿಲ್ಲ.

‘‘ನನ್ನನ್ನು ಸಂಪರ್ಕಿಸಲು ಅಥವಾ ನನಗೆ ಮನಿಯಾರ್ಡರ್ ಕಳುಹಿಸಲು ನನ್ನ ಕುಟುಂಬ ಸದಸ್ಯರು ತುಂಬಾ ಹೆದರಿದ್ದರು. ಹಸಿವಾದಾಗ ತಿಂಡಿ ಖರೀದಿಸಲೂ ನನ್ನಲ್ಲಿ ಹಣವಿರಲಿಲ್ಲ. ನನ್ನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಾನು ಸಂಪೂರ್ಣವಾಗಿ ಜೈಲಿನಲ್ಲಿನ ಕೆಳ ದರ್ಜೆಯ ಕೆಲಸಗಳನ್ನೇ ಅವಲಂಬಿಸಿದ್ದೆ’’ ಎಂದು ಪಶ್ಚಿಮ ಬಂಗಾಳದ ಪಟ್ಟಣವೊಂದರ ಮುಸ್ಲಿಮ್ ಮಹಿಳೆ ಮಂಡಲ್ ಹೇಳಿದ್ದಾರೆ.

ಭಾರತೀಯ ಜೈಲುಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿ-ಅಂಶಗಳು ಹೇಳುತ್ತವೆ. ಆದರೆ, ಕೆಲವು ಜಾತಿ ವಿರೋಧಿ ಸಂಘಟನೆಗಳು ಮತ್ತು ಅಳಗುಮಣಿ ಮತ್ತು ರಾಜ ಅವರಂತಹ ಕೆಲವು ವಕೀಲರನ್ನು ಹೊರತುಪಡಿಸಿದರೆ ಹೆಚ್ಚಿನ ಮಾನವಹಕ್ಕು ಸಂಘಟನೆಗಳು ಈ ವಿಷಯವನ್ನು ಉಪೇಕ್ಷಿಸಿವೆ.

Writer - ಸುಕನ್ಯಾ ಶಾಂತ

contributor

Editor - ಸುಕನ್ಯಾ ಶಾಂತ

contributor

Similar News