ಪೊಲೀಸರನ್ನು ನಿಂದಿಸಿದ ವೀಡಿಯೊ ವೈರಲ್: ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ರಾಜ್ಯಪಾಲರಿಗೆ ದೂರು

Update: 2021-12-05 14:53 GMT

ಬೆಂಗಳೂರು, ಡಿ. 5: ‘ಎಂಜಲು ಕಾಸಿಗೆ ಕೈಯೊಡ್ಡಿ ಬದುಕುತ್ತಿದ್ದಿರಾ, ಪೊಲೀಸರಾಗಲು ಯೋಗ್ಯತೆ ಇಲ್ಲದಿದ್ದರೆ ಸಮವಸ್ತ್ರ ಬಿಚ್ಚಿಟ್ಟು ಮನೆಗೆ ಹೋಗಿ' ಎಂದು ಪೊಲೀಸ್ ಸಿಬ್ಬಂದಿಯನ್ನು ಶ್ವಾನಕ್ಕೆ ಹೋಲಿಕೆ ಮಾಡಿ ಹೇಳಿಕೆ ನೀಡಿ, ಅಪಮಾನ ಮಾಡಿದ ಗೃಹ ಸಚಿವರ ಮೇಲೆ ಕಾನೂನುಕ್ರಮ ಕೈಗೊಳ್ಳಬೇಕು' ಎಂದು ಕೋರಿ *ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ, ರಾಜ್ಯಪಾಲರಿಗೆ* ದೂರು ನೀಡಿದ್ದಾರೆ.

ರವಿವಾರ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್ ಅವರಿಗೆ ಈಮೇಲ್ ಮೂಲಕ ದೂರು ಸಲ್ಲಿಸಿರುವ ಹನುಮೇಗೌಡ, ‘ಪೊಲೀಸ್ ಸಿಬ್ಬಂದಿ ರಾಜ್ಯದ ಜನತೆಯ ಶಾಂತಿ-ಸುವ್ಯವಸ್ಥೆ ಕಾಪಾಡಲು ಹಗಲು-ರಾತ್ರಿಗಳ ಪರಿವೆ ಮರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಿಎಂ, ಮಂತ್ರಿ, ಹಾಗೂ ಗಣ್ಯ ವ್ಯಕ್ತಿಗಳ ಭದ್ರತೆ ಸೇರಿದಂತೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ' ಎಂದು ಗಮನ ಸೆಳೆದಿದ್ದಾರೆ.

‘ವಾಸ್ತವ ಸ್ಥಿತಿ ಹೀಗಿರುವಾಗ ರಾಜ್ಯದ ಗೌರವಕ್ಕೆ ದಕ್ಕೆ ತರುವ ರೀತಿಯಲ್ಲಿ ರೌಡಿ, ಪುಂಡ ಪೋಲಿಗಳ ಅಟ್ಟಹಾಸಕ್ಕೆ ಪುಷ್ಟಿ ನೀಡುವಂತೆ ಗೃಹ ಸಚಿವರೇ ಪ್ರಚೋದನಾತ್ಮಕ, ಕಾನೂನು ಭಂಗ, ಸರಕಾರಿ ಕೆಲಸಕ್ಕೆ ತೊಡಕು ಉಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಶಿಕ್ಷಾರ್ಹ ಅಪರಾಧ, ಕಾನೂನು ಪಾಲಿಸಿ, ಶಾಂತಿ, ಸುವ್ಯವಸ್ಥೆ ಕಾಪಾಡಬೇಕಾದ ಸಚಿವರೇ ಪೊಲೀಸ್ ಸಿಬ್ಬಂದಿ ಕರ್ತವ್ಯಕ್ಕೆ ದಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡುವುದು ಶೋಭೆತರುವುದಿಲ್ಲ. ಆದುದರಿಂದ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹನುಮೇಗೌಡ, ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News