ಸಂವಿಧಾನದ ಆಶಯಕ್ಕೆ ಧಕ್ಕೆಯಾದರೆ ಸರಕಾರದ ಕಾನೂನು ತಿಪ್ಪೆಗೆ ಎಸೆಯಬಹುದು: ನ್ಯಾಯವಾದಿ ಬಿ.ಟಿ.ವೆಂಕಟೇಶ್

Update: 2021-12-05 18:10 GMT

ಬೆಂಗಳೂರು, ಡಿ. 6: ‘ಆಡಳಿತ ನಡೆಸುವ ಸರಕಾರಗಳು ಜಾರಿಗೆ ತರುವ ಕಾನೂನುಗಳಿಂದ ಸಂವಿಧಾನದ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದರೆ, ಅದನ್ನು ತಿಪ್ಪೆಗೆ ಎಸೆಯುವ ಅಧಿಕಾರ ಸುಪ್ರಿಂ ಕೋರ್ಟಿಗೆ ಇದೆ' ಎಂದು ಹಿರಿಯ ನ್ಯಾಯವಾದಿ ಬಿ.ಟಿ.ವೆಂಕಟೇಶ್ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಕ್ವಿನ್ಸ್‍ರಸ್ತೆಯ ಕೃಷಿ ಭವನ ಸಭಾಂಗಣದಲ್ಲಿ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಆಯೋಜಿಸಿದ್ದ ‘ಭಾರತದಲ್ಲಿ ದಾಳಿಗೊಳಗಾದ ಕ್ರೈಸ್ತರು’ ಕುರಿತ ಸತ್ಯಶೋಧನಾ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಸರಕಾರಗಳು ಕಾನೂನುಗಳನ್ನು ಜಾರಿಗೊಳಿಸಬಹುದು. ಆದರೆ, ಸಂವಿಧಾನದ ಆಶಯ, ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುವ ಅಂಶ ಬೆಳಕಿಗೆ ಬಂದರೆ, ಅದನ್ನು ತಿಪ್ಪೆಗೆ ಎಸೆಯುವ ಅಧಿಕಾರಿ ಸುಪ್ರೀಂ ಕೋರ್ಟಿಗೆ ಇದೆ. ಇದನ್ನು ಆಡಳಿತ ವರ್ಗ ಮರೆಯಬಾರದು' ಎಂದು ಬಿ.ಟಿ.ವೆಂಕಟೇಶ್ ಇದೇ ವೇಳೆ ನುಡಿದರು. 

‘ರಾಜ್ಯ ಸರಕಾರ ಜಾರಿಗೆ ಹೊರಟಿರುವ ಮತಾಂತರ ತಡೆ ಕಾನೂನು ಅನಗತ್ಯ. ಏಕೆಂದರೆ ಯಾರು, ಯಾವುದೇ ಧರ್ಮ ಸ್ವೀಕಾರ ಮಾಡುವ ಅಥವಾ ಅದನ್ನು ಬಿಟ್ಟು ಇರುವ ಮೂಲಭೂತ ಹಕ್ಕು ಸಂವಿಧಾನ ನೀಡಿದೆ. ಹೀಗಿರುವಾಗ ಸಂವಿಧಾನ ವಿರೋಧಿ ನಡೆ ಸಹಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ' ಎಂದು ಅವರು ನುಡಿದರು.

‘ಮುಸ್ಲಿಮ್, ದಲಿತ, ಕ್ರೈಸ್ತರು ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಲ್ಲೆ, ದೌರ್ಜನ್ಯವೆಸುವ ಕೃತ್ಯಗಳು ನಿರಂತರ ನಡೆಯುತ್ತಿವೆ.ಇದನ್ನು ಪುಂಡ ಪೋಕರಿಗಳೇ ಮಾಡುತ್ತಿದ್ದು, ಇವರಿಗೆ ಆಡಳಿತ ವರ್ಗ, ರಾಜಕೀಯ ಬಲ ನೀಡಲಾಗುತ್ತಿದೆ' ಎಂದು ವೆಂಕಟೇಶ್ ಇದೇ ವೇಳೆ ಆರೋಪಿಸಿದರು.

‘ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಹಿರಂಗವಾಗಿ ಬಲಪಂಥೀಯರ ಕೃತ್ಯಗಳನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ವ್ಯಕ್ತಿಯೇ ಅವರ ನೆರವಿಗೆ ನಿಲ್ಲುವುದು ಸೂಕ್ತವಲ್ಲ' ಎಂದು ಟೀಕಿಸಿದ ಅವರು, ‘ಪಟ್ಟಭದ್ರ ಶಕ್ತಿಗಳ ಸಂಖ್ಯೆ ಕಡಿಮೆ ಇದ್ದರೂ, ಅವರ ಕೃತ್ಯ, ಚಟುವಟಿಕೆಗಳಿಗೆ ರಾಜಕಾರಣಿಗಳು ಬಹಿರಂಗವಾಗಿ ನೆರವಿಗೆ ಬರುತ್ತಾರೆ' ಎಂದರು.

‘ದೇಶದೆಲ್ಲೆಡೆ 51 ಜನರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಿದೆ. ಈ ಪೈಕಿ ಹಲವರು ಕೋರ್ಟಿಗೆ ಅಲೆಯಲು ತಮ್ಮ ಮನೆ ಮಠಗಳನ್ನು ಮಾರಾಟ ಮಾಡಿಕೊಂಡಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಅಸೋಸಿಯೇಶನ್ ಫಾರ್ ಪ್ರೊಟಿಕ್ಷನ್ ಆಫ್ ಸಿವಿಲ್ ರೈಟ್ಸ್(ಎಪಿಸಿಆರ್) ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಮಹಾಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ.ಪೀಟರ್ ಮಚಾದೋ ಮಾತನಾಡಿ, ‘ಒಬ್ಬರು ಯಾವುದೇ ಧರ್ಮವನ್ನು ಆಚರಿಸಲು ಸಂವಿಧಾನ ಹಕ್ಕು ನೀಡಿದೆ. ಹೀಗಿರುವಾಗ ಮತಾಂತರ ನಿಷೇಧ ಕಾಯ್ದೆಯ ಅಗತ್ಯವಾದರೂ ಏನು' ಎಂದು ಪ್ರಶ್ನಿಸಿದರು. 

‘ಯಾವುದೋ ಒಂದೆರಡು ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು, ಇಡೀ ಕ್ರೈಸ್ತ ಸಮುದಾಯವನ್ನು ದೂರುವುದು ಸರಿಯಲ್ಲ.ಇದನ್ನು ರಾಜ್ಯ ಸರಕಾರ ಅರಿತು ತನ್ನ ನಿಲುವು ಬದಲಾವಣೆ ಮಾಡಿಕೊಳ್ಳಬೇಕು' ಎಂದು ಅವರು ಒತ್ತಾಯಿಸಿದರು.

ಎಪಿಸಿಆರ್ ಅಧ್ಯಕ್ಷ ಪಿ.ಉಸ್ಮಾನ್ ಮಾತನಾಡಿ, ‘ಇದೇ ವರ್ಷದಲ್ಲಿ ದೇಶದೆಲ್ಲೆಡೆ ಕ್ರೈಸ್ತರ ಮೇಲೆ ದಾಳಿ ನಡೆಸಿರುವ 305 ಪ್ರಕರಣಗಳು ವರದಿಯಾಗಿವೆ.ಇದನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು.ಜೊತೆಗೆ, ಸೂಕ್ತ ಭದ್ರತೆ ಒದಗಿಸಬೇಕು' ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಎಪಿಸಿಆರ್ ಸಂಸ್ಥಾಪಕ ಸದಸ್ಯ ಎಂ.ಖಾಝೀ, ಪ್ರಧಾನ ಕಾರ್ಯದರ್ಶಿ ಎಸ್.ಮುಹಮ್ಮದ್ ನಿಯಾಝ್ ಸೇರಿದಂತೆ ಪ್ರಮುಖರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News