ತೆರಿಗೆ ಪಾವತಿಸದ ಮಂತ್ರಿ ಮಾಲ್ ಗೆ ಮತ್ತೆ ಬೀಗ ಹಾಕಿದ ಬಿಬಿಎಂಪಿ ಅಧಿಕಾರಿಗಳು

Update: 2021-12-06 15:03 GMT

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸೋಮವಾರದಂದು ತೆರಿಗೆ ಪಾವತಿಸದ ಹಿನ್ನೆಲೆ ಮಂತ್ರಿ ಮಾಲ್‍ಗೆ ಮತ್ತೆ ಬೀಗ ಹಾಕಿದ್ದಾರೆ.

ಕಳೆದ ಮೂರು ವರ್ಷಗಳಿಂದ ಮಲ್ಲೇಶ್ವರಂನ ಮಂತ್ರಿಮಾಲ್ ಸುಮಾರು 27 ಕೋಟಿ ರೂ.ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಇದುವರೆಗೂ ಪಾವತಿಯನ್ನೇ ಮಾಡಿಲ್ಲ ಎಂದು ಮಾಲ್ ವಿರುದ್ಧ ಬಿಬಿಎಂಪಿ ಪಶ್ಚಿಮ ವಲಯದ ಅಧಿಕಾರಿಗಳು ಬೀಗ ಹಾಕಿ ಕ್ರಮ ಕೈಗೊಂಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ, ಪಾಲಿಗೆ ಮೂಲ ಆದಾಯವೇ ಆಸ್ತಿ ತೆರಿಗೆಯಾಗಿದೆ. ಈ ವರ್ಷ 4 ಸಾವಿರ ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಗುರಿ ಇಟ್ಟುಕೊಂಡು ಎಲ್ಲ ಬಾಕಿದಾರರಿಗೆ ನೋಟಿಸ್ ನೀಡಿ ವಸೂಲಿ ಮಾಡುತ್ತಿದೆ ಎಂದರು.

ಮಲ್ಲೇಶ್ವರದ ಮಂತ್ರಿಮಾಲ್ 2018-19ನೇ ಸಾಲಿನಿಂದ ಆಸ್ತಿ ತೆರಿಗೆ ಪಾವತಿಸದೇ ಸುಸ್ತಿದಾರನಾಗಿದೆ. ಸೆ.9 ರಂದು ಮಾಲ್‍ಗೆ ಬೀಗ ಜಡಿದು ತೆರಿಗೆ ವಸೂಲಿಗೆ ಮುಂದಾದಾಗ 5 ಕೋಟಿ ರೂ. ಡಿಡಿ ಪಾವತಿಸಿ ಅ.31ರ ಒಳಗಾಗಿ ಉಳಿದ ಹಣ ಪಾವತಿಸುವುದಾಗಿ ಗಡುವು ಪಡೆದುಕೊಂಡಿದ್ದರು.

ಇದು ಮುಗಿದು ಡಿ.5ರವರೆಗೆ ಮತ್ತೊಮ್ಮೆ ಗಡುವು ಪಡೆದುಕೊಂಡಿದ್ದರೂ ಆಗಲೂ ತೆರಿಗೆ ಪಾವತಿಸಿದ ಹಿನ್ನೆಲೆಯಲ್ಲಿ ಮಾಲ್ ಅನ್ನು ವಶಕ್ಕೆ ಪಡೆದೆವು ಎಂದರು. 

ಅಲ್ಲದೆ, ಬಿಬಿಎಂಪಿ ಕಾಯ್ದೆ ಅನ್ವಯ ಯಾವುದೇ ಆಸ್ತಿ ಮಾಲಕ ಸಮರ್ಪಕ ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿದುಕೊಂಡಲ್ಲಿ ಕಂದಾಯ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಬೇಕು. ಅದರ ನಂತರವೂ ತೆರಿಗೆ ಪಾವತಿಸುವಲ್ಲಿ ವಿಲವಾದರೆ ಚರಾಸ್ಥಿಗಳನ್ನು ವಶಕ್ಕೆ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.

ಚೆಕ್ ಬೌನ್ಸ್ ಆಗಿತ್ತು!

ಕಳೆದ ಮೂರು ತಿಂಗಳ ಹಿಂದೆ ತೆರಿಗೆ ವಸೂಲಿಗೆ ತೆರಳಿದ್ದಾಗ 2018-19ನೆ ಸಾಲಿಗೆ ತೆರಿಗೆ ಪಾವತಿಸುತ್ತೇನೆ ಎಂದು 10.43 ಕೋಟಿ ರೂ. ಚೆಕ್ ನೀಡಿದ್ದರು. ಇದನ್ನು ಬ್ಯಾಂಕ್‍ಗೆ ಸಲ್ಲಿಸಿದಾಗ ಸಾಕಷ್ಟು ಹಣವಿಲ್ಲವೆಂದು ಚೆಕ್ ಅಮಾನ್ಯವಾಗಿತ್ತು. ಈ ಕುರಿತು ಬಿಬಿಎಂಪಿನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಲಾಗಿತ್ತು.


ಎಷ್ಟು ತೆರಿಗೆ ಬಾಕಿ?

2018-19    6.77 ಕೋಟಿ ರೂ.
2019-20 6.77 ಕೋಟಿ ರೂ.
2020-21 6.77 ಕೋಟಿ ರೂ.
2020-22 6.88 ಕೋಟಿ ರೂ.
ಒಟ್ಟು ರೂ. 27.22 ಕೋಟಿ ರೂ. 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News