ಬಿ.ಆರ್.ಅಂಬೇಡ್ಕರ್ 65ನೇ ಪರಿನಿರ್ವಾಣ ದಿನ: ದಸಂಸ ಬೃಹತ್ ಕಾಲ್ನಾಡಿಗೆ ಜಾಥಾ

Update: 2021-12-06 15:11 GMT

ಬೆಂಗಳೂರು, ಡಿ.6: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ದಿನಾಚರಣೆ ಅಂಗವಾಗಿ ದಲಿತ ಸಂಘರ್ಷ ಸಮಿತಿ (ಸಮತವಾದ) ನೇತೃತ್ವದಲ್ಲಿ ಬೃಹತ್ ಕಾಲ್ನಾಡಿಗೆ ಜಾಥಾ ನಡೆಸಲಾಯಿತು.

ಸೋಮವಾರ ನಗರದ ಬನ್ನಪ್ಪ ಪಾರ್ಕ್ ಮುಂಭಾಗ ದಸಂಸ ರಾಜ್ಯಾಧ್ಯಕ್ಷ ಎಚ್.ಮಾರಪ್ಪ ನೇತೃತ್ವದಲ್ಲಿ ಜಮಾಯಿಸಿದ ಹೋರಾಟಗಾರರು, ಸಂವಿಧಾನ, ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಘೋಷಣೆ ಕೂಗುತ್ತ ವಿಧಾನಸೌಧ ಮುಂಭಾಗದ ಅಂಬೇಡ್ಕರ್ ಪ್ರತಿಮೆವರೆಗೂ ಕಾಲ್ನಾಡಿಗೆ ಮೂಲಕ ತಲುಪಿಸಿ ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಮಾರಪ್ಪ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ನೀಡಿರುವ ಸಂವಿಧಾನ ವಿಶ್ವದಲ್ಲಿಯೇ ಅತಿ ಶ್ರೇಷ್ಠವಾದುದು. ಅಂತಹ ಪವಿತ್ರವಾದ ಸಂವಿಧಾನವನ್ನು ಅಭ್ಯಾಸ ಮಾಡಲಿಕ್ಕಾಗಿಯೇ ಹೊರದೇಶದವರು ಭಾರತಕ್ಕೆ ಬರುತ್ತಿದ್ದಾರೆ ಎಂದರೆ ಸಂವಿಧಾನ ಎಷ್ಟು ಬಲಶಾಲಿಯಾಗಿದೆ ಎಂಬುದನ್ನು ಅರಿಯಬೇಕು ಎಂದರು.

ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಸೀಮಿತವಾಗಿಲ್ಲ. ಅವರು ಎಲ್ಲಾ ಜಾತಿಯವರ ಉದ್ಧಾರಕ್ಕಾಗಿ ಸಂವಿಧಾನವನ್ನು ರಚಿಸಿ ದೇಶಕ್ಕೆ ನೀಡಿದ್ದಾರೆ ಎಂದ ಅವರು, ಅಂಬೇಡ್ಕರ್ ನಿಧನರಾದ ಡಿ.6ರಂದು ಮಹಾ ಪರಿನಿಬ್ಬಾಣ ಅಥವಾ ಪರಿನಿರ್ವಾಣ ದಿನವನ್ನಾಗಿ ಆಚರಿಸುವ ಮೂಲಕ ವಿಶ್ವದಾದ್ಯಂತ ವಿವಿಧ ರಾಷ್ಟ್ರಗಳಲ್ಲಿ ಅವರ ಸ್ಮರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News