ಸೀಕ್ವೆನ್ಸಿಂಗ್ ವರದಿ ಬರುವರೆಗೂ ಮನೆಯಲ್ಲಿರಿ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

Update: 2021-12-06 17:59 GMT

ಬೆಂಗಳೂರು, ಡಿ.6: ಕೋವಿಡ್ ಪಾಸಿಟಿವ್ ಆದ ವ್ಯಕ್ತಿಗಳು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ವರದಿ ಕೈ ಸೇರುವರೆಗೂ ಹೋಂ ಐಸೋಲೇಷನ್‍ನಲ್ಲಿ ಕಡ್ಡಾಯವಾಗಿ ಇರಬೇಕೆಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್ ಗುಪ್ತಾ ಸೂಚಿಸಿದ್ದಾರೆ.

ಸೋಮವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಾಣು ಸಂರಚನೆ ವಿಶ್ಲೇಷಣೆ (ಜಿನೋಮ್ ಸೀಕ್ವೆನ್ಸಿಂಗ್) ಪರೀಕ್ಷೆಗಾಗಿ ಕೇಂದ್ರ ಸರಕಾರ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ನಾಲ್ಕು ಲ್ಯಾಬ್‍ಗಳಿದ್ದು, ಪರೀಕ್ಷೆ ಫಲಿತಾಂಶ ಶೀಘ್ರದಲ್ಲೇ ಬರಲಿದೆ. ಅಲ್ಲಿಯವರೆಗೂ ಕೋವಿಡ್ ಪಾಸಿಟಿವ್ ವ್ಯಕ್ತಿಗಳು ಎಚ್ಚರ ವಹಿಸಬೇಕು ಎಂದರು.

ಸದ್ಯ ಒಮೈಕ್ರಾನ್ ಪತ್ತೆಯಾದ ದೇಶಗಳಿಂದ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾರ ವರದಿ ಕೋವಿಡ್ ಪಾಸಿಟಿವ್ ಬಂದರೆ, ಅಂತಹ ಮಾದರಿಯನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಒಳಪಡಿಸಲಾಗುವುದು. ಬಳಿಕ ಈ ವರದಿ ಕೈಸೇರುವರೆಗೂ ಸೋಂಕಿತರು ಎಚ್ಚರದಿಂದ ಇರಬೇಕು ಎಂದು ತಾಕೀತು ಮಾಡಿದರು.

ನಾವು ಪ್ರತಿದಿನ 15ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‍ಗೆ ಕಳಿಸುತ್ತಿದ್ದೇವೆ ಎಂದ ಅವರು, ಅಶೋಕ ಹೊಟೇಲ್‍ನಲ್ಲಿ ನಡೆದಿದ್ದ ವೈದ್ಯರ ಸಮಾವೇಶದಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ಪರೀಕ್ಷೆ ಮಾಡಲಾಗಿದೆ. ಜೊತೆಗೆ ಹೋಂ ಐಸೋಲೇಷನ್‍ನಲ್ಲಿ ಇರಲು ಸೂಚಿಸಲಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News