'ಪ್ರಾಯೋಗಿಕ ಪರೀಕ್ಷೆ'ನೆಪ: ಶಾಲೆಯಲ್ಲಿ ರಾತ್ರಿ ಉಳಿಯಲು ಹೇಳಿ 10 ನೇ ತರಗತಿಯ ಬಾಲಕಿಯರಿಗೆ ಕಿರುಕುಳ

Update: 2021-12-07 05:22 GMT

ಲಕ್ನೊ: ಸಿಬಿಎಸ್ ಇ ಪ್ರಾಯೋಗಿಕ ಪರೀಕ್ಷೆಯ ನೆಪದಲ್ಲಿ ಶಿಕ್ಷಕರು ಹಾಗೂ ಶಾಲೆಯ ಮಾಲಿಕರು 10 ನೇ ತರಗತಿಯ ಹುಡುಗಿಯರನ್ನು ಶಾಲೆಗೆ ಕರೆಸಿದ್ದಲ್ಲದೆ ರಾತ್ರಿ ಉಳಿಯಲು ಹೇಳಿ  ಅಲ್ಲಿ ಅವರಿಗೆ ನಿದ್ದೆ ಬರುವ  ಆಹಾರವನ್ನು ನೀಡಿ ಕಿರುಕುಳ ನೀಡಿರುವ ಆಘಾತಕಾರಿ ಘಟನೆಯು ನವೆಂಬರ್ 17 ರಂದು ಉತ್ತರ ಪ್ರದೇಶದ ಮುಝಾಫರ್‌ನಗರದಲ್ಲಿ ನಡೆದಿದ್ದು, ತಡವಾಗಿ ಎಫ್ ಐಆರ್ ದಾಖಲಿಸಲಾಗಿದೆ.

ಹುಡುಗಿಯರು  ಮರುದಿನ ಪುರ್ಕಾಜಿ ಪ್ರದೇಶದ ಖಾಸಗಿ ಶಾಲೆಯಿಂದ ತಮ್ಮ ಮನೆಗೆ ಮರಳಿದ್ದರು ಎಂದು India Today ವರದಿ ಮಾಡಿದೆ.

ಏನಾಯಿತು ಎಂಬುದನ್ನು ಯಾರಿಗೂ ಹೇಳಬೇಡಿ. ಹೇಳಿದರೆ ನಿಮ್ಮ ಕುಟುಂಬ ಸದಸ್ಯರನ್ನು ಕೊಲ್ಲಲಾಗುವುದು ಎಂದು ಹುಡುಗಿಯರಿಗೆ ಬೆದರಿಕೆ ಹಾಕಲಾಗಿದೆ. ಮೂಲಗಳ ಪ್ರಕಾರ ಹೆಣ್ಣುಮಕ್ಕಳು ಬಡ ಕುಟುಂಬದಿಂದ ಬಂದವರಾಗಿದ್ದಾರೆ.

ಇಬ್ಬರು ಸಂತ್ರಸ್ತ ಬಾಲಕಿಯರ ಪೋಷಕರು ಪುರ್ಕಾಝಿ ಶಾಸಕ ಪ್ರಮೋದ್ ಉತ್ವಾಲ್ ಅವರನ್ನು ಸಂಪರ್ಕಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಅವರು ತನಿಖೆಯನ್ನು ಆರಂಭಿಸಲು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಯಾದವ್ ಅವರನ್ನು ಸಂಪರ್ಕಿಸಿದ್ದರು. ಅಲ್ಲಿಯವರೆಗೆ  ಪೋಷಕರು ತಮ್ಮ ದೂರನ್ನು ಪೊಲೀಸರಿಗೆ ದಾಖಲಿಸಲು ಹಲವಾರು ಬಾರಿ ಪ್ರಯತ್ನಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಅವರು ಹೇಳಿದರು.

ಹುಡುಗಿಯರು ಓದುವ ಶಾಲೆಯ ಮಾಲಿಕರು ಹಾಗೂ  ಘಟನೆಯ ರಾತ್ರಿ ಅವರನ್ನು 'ಪ್ರಾಯೋಗಿಕ ಪರೀಕ್ಷೆ'ಗೆ ಕರೆದೊಯ್ದ ಇನ್ನೊಬ್ಬನ ವಿರುದ್ಧ ಈಗ ಎಫ್‌ಐಆರ್ ದಾಖಲಿಸಲಾಗಿದೆ.  ಶಾಲೆಯ ಮಾಲಿಕನನ್ನು ಮಾತ್ರ ಬಂಧಿಸಲಾಗಿದೆ.

ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಪುರ್ಕಾಝಿ ಠಾಣಾಧಿಕಾರಿ ವಿನೋದ್ ಕುಮಾರ್ ಸಿಂಗ್ ವಿರುದ್ಧ ಇಲಾಖಾ ವಿಚಾರಣೆಯನ್ನೂ ಆರಂಭಿಸಲಾಗಿದೆ. "ಪ್ರಕರಣದಲ್ಲಿ ಕ್ರಮ ತೆಗೆದುಕೊಳ್ಳಲು ವಿಳಂಬ ಮಾಡಿದ ಆರೋಪದ ಮೇಲೆ ಅವರನ್ನು ಪೊಲೀಸ್ ಲೈನ್‌ಗಳಿಗೆ ಕಳುಹಿಸಲಾಗಿದೆ" ಎಂದು ಅಧಿಕಾರಿಯೊಬ್ಬರು 'ಹಿಂದೂಸ್ತಾನ್ ಟೈಮ್ಸ್' ವರದಿಯಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News