ಮುಂಬೈ ಕ್ರಿಕೆಟ್ ಮ್ಯೂಸಿಯಂಗೆ ಚೆಂಡು,ಜರ್ಸಿ ಉಡುಗೊರೆಯಾಗಿ ನೀಡಿದ ಎಜಾಝ್ ಪಟೇಲ್

Update: 2021-12-07 05:36 GMT
Photo: ANI

ಮುಂಬೈ: ಮುಂಬೈನಲ್ಲಿ 1988 ರಲ್ಲಿ ಜನಿಸಿದ್ದ ಎಜಾಝ್ ಪಟೇಲ್  ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಏಕಾಂಗಿಯಾಗಿ 10 ವಿಕೆಟ್‌ಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದರು. ಟೆಸ್ಟ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಗೊಂಚಲು  ಪಡೆದ ಈ ಸಾಧನೆಯನ್ನು ಈ ಹಿಂದೆ  ಅನಿಲ್ ಕುಂಬ್ಳೆ ಹಾಗೂ  ಜಿಮ್ ಲೇಕರ್ ಮಾತ್ರ ಸಾಧಿಸಿದ್ದಾರೆ.

ನ್ಯೂಝಿಲ್ಯಾಂಡಿನ ಎಡಗೈ ಸ್ಪಿನ್ನರ್ ಪಟೇಲ್ 2ನೇ ಪಂದ್ಯದಲ್ಲಿ  ಒಟ್ಟು 14 ವಿಕೆಟ್‌ಗಳನ್ನು ಪಡೆದರು. ಆದರೆ ಈ ಅಮೋಘ ಸಾಧನೆಯ ಹೊರತಾಗಿಯೂ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆಯಲು ವಿಫಲರಾದರು.  ಅವರ ಪ್ರಯತ್ನಗಳು ವ್ಯರ್ಥವಾಗಲಿಲ್ಲ ಏಕೆಂದರೆ ಅವರಿಗೆ ಎಲ್ಲಾ ಭಾರತೀಯ ಕ್ರಿಕೆಟಿಗರು ಸಹಿ ಮಾಡಿದ ಜರ್ಸಿಯನ್ನು ನೀಡಲಾಯಿತು. ಅದಕ್ಕಿಂತ ಹೆಚ್ಚಾಗಿ, ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರು ಎಜಾಝ್ ಪಟೇಲ್ ಅವರನ್ನು ಗೌರವಿಸಿದರು.

"ಎಂಸಿಎ ಅಧ್ಯಕ್ಷ ವಿಜಯ್ ಪಾಟೀಲ್ ಅವರು ಎಜಾಝ್ ಪಟೇಲ್ ಅವರಿಗೆ ಅಂಕ ಪಟ್ಟಿ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು" ಎಂದು ಎಂಸಿಎ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಸ್ಪಿನ್ನರ್ ಪಟೇಲ್ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ನ (ಎಂಸಿಎ) ಮ್ಯೂಸಿಯಂಗೆ ಪಂದ್ಯದಲ್ಲಿ ತಾನು 10 ವಿಕೆಟ್ ಗಳನ್ನು ಕಬಳಿಸಲು ಕಾರಣವಾಗಿದ್ದ ಕ್ರಿಕೆಟ್ ಚೆಂಡು ಹಾಗೂ ಜರ್ಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News