ಆದಾಯ ಮತ್ತು ಸಂಪತ್ತಿನ ಜಾಗತಿಕ ಅಸಮಾನತೆಗಳನ್ನು ಹೆಚ್ಚಿಸಿದ ಕೋವಿಡ್: ವರದಿ

Update: 2021-12-07 17:42 GMT

ಹೊಸದಿಲ್ಲಿ,ಡಿ.7: ಆದಾಯ ಮತ್ತು ಸಂಪತ್ತಿನ ಜಾಗತಿಕ ಅಸಮಾನತೆಗಳು ಹೇಗೆ ಉಳಿದುಕೊಂಡಿವೆ ಮತ್ತು ಕೋವಿಡ್ ಸಾಂಕ್ರಾಮಿಕವು ಅವುಗಳನ್ನು ಹೇಗೆ ಹೆಚ್ಚಿಸಿದೆ ಎನ್ನುವುದನ್ನು ವರ್ಲ್ಡ್ ಇನ್ಈಕ್ವಲಿಟಿ ಲ್ಯಾಬ್ ಮಂಗಳವಾರ ಬಿಡುಗಡೆಗೊಳಿಸಿರುವ ವರದಿಯು ಪ್ರಮುಖವಾಗಿ ಬಿಂಬಿಸಿದೆ.

ಕೋವಿಡ್ ಬಿಕ್ಕಟ್ಟು ಅತ್ಯಂತ ಶ್ರೀಮಂತರು ಮತ್ತು ಇತರರ ನಡುವಿನ ಅಸಮಾನತೆಗಳನ್ನು ಉಲ್ಬಣಗೊಳಿಸಿದೆ. ಆದಾಗ್ಯೂ ಶ್ರೀಮಂತ ರಾಷ್ಟ್ರಗಳಲ್ಲಿ ಸರಕಾರದ ಹಸ್ತಕ್ಷೇಪವು ಬಡತನದಲ್ಲಿ ಬೃಹತ್ ಏರಿಕೆಯನ್ನು ತಡೆದಿದೆ,ಆದರೆ ಬಡ ರಾಷ್ಟ್ರಗಳಲ್ಲಿ ಹೀಗಾಗಿಲ್ಲ. ಇದು ಬಡತನದ ವಿರುದ್ಧ ಹೋರಾಟದಲ್ಲಿ ಸಾಮಾಜಿಕ ಸ್ಥಿತಿಗಳ ಮಹತ್ವವನ್ನು ತೋರಿಸುತ್ತದೆ ಎಂದು ವಿಶ್ವ ಅಸಮಾನತೆ ವರದಿ 2022ರ ಅಗ್ರ ಲೇಖಕ ಲುಕಾಸ್ ಚಾನ್ಸೆಲ್ ಅವರು ಹೇಳಿದ್ದಾರೆ.

ಪ್ರಪಂಚದಾದ್ಯಂತದಿಂದ ತೀರ ಇತ್ತೀಚಿನ ಅಸಮಾನತೆ ದತ್ತಾಂಶಗಳನ್ನು ಸಂಚಯಿಸುವುದು ವರದಿಯ ಮುಖ್ಯ ಉದ್ದೇಶವಾಗಿದೆ. ಇದು ಯಾವಾಗಲೂ ಸುಲಭವಲ್ಲ,ಏಕೆಂದರೆ ಭಾರತ ಸೇರಿದಂತೆ ಕೆಲವು ದೇಶಗಳು ವಿಶ್ವಾಸಾರ್ಹ ಮಾಹಿತಿಯ ಲಭ್ಯತೆಯನ್ನು ಕಷ್ಟಕರವಾಗಿಸಿವೆ. ಕಳೆದ ಮೂರು ವರ್ಷಗಳಲ್ಲಿ ಭಾರತ ಸರಕಾರವು ಬಿಡುಗಡೆಗೊಳಿಸಿರುವ ಅಸಮಾನತೆ ದತ್ತಾಂಶಗಳ ಗುಣಮಟ್ಟವು ಗಂಭೀರವಾಗಿ ಹದಗೆಟ್ಟಿದೆ ಮತ್ತು ಇದು ಇತ್ತೀಚಿನ ಅಸಮಾನತೆ ಬದಲಾವಣೆಗಳನ್ನು ನಿರ್ಣಯಿಸುವುದನ್ನು ವಿಶೇಷ ಕಷ್ಟಕರವಾಗಿಸಿದೆ ಎಂದು ವರದಿಯು ಬೆಟ್ಟು ಮಾಡಿದೆ.

 ಸರಕಾರದ ಬೆಂಬಲದ ಕೊರತೆ ಮತ್ತು ಕಲ್ಯಾಣ ಯೋಜನೆಗಳನ್ನು ಕೈಬಿಟ್ಟಿರುವುದು ಪ್ರಪಂಚದಲ್ಲಿ ಅಸಮಾನತೆಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ ಎಂದು ವರದಿಯು ಹೇಳಿದೆ. ಇದು ಭಾರತದ ಪಾಲಿಗೂ ನಿಜವಾಗಿದೆ ಎಂದು ಆರ್ಥಿಕ ತಜ್ಞರಾದ ಅಭಿಜಿತ್ ಬ್ಯಾನರ್ಜಿ ಮತ್ತು ಎಶ್ತರ್ ಡುಫ್ಲೊ ಅವರು ವರದಿಯ ಮುನ್ನುಡಿಯಲ್ಲಿ ಬೆಟ್ಟು ಮಾಡಿದ್ದಾರೆ. ಖಾಸಗಿ ಕ್ಷೇತ್ರದ ನೇತೃತ್ವದ ಬೆಳವಣಿಗೆಗೆ ಅವಕಾಶ ಕಲ್ಪಿಸಲು ಚೀನಾ ಮತ್ತು ಭಾರತದಂತಹ ದೇಶಗಳು ಸರಕಾರಿ ನಿಯಂತ್ರಣವನ್ನು ಸಡಿಲಗೊಳಿಸಿದಾಗ ಅಸಮಾನತೆಯ ಬಗ್ಗೆ ಚಿಂತಿಸದಿರಿ ಎಂದು ಸಮರ್ಥಿಸಿಕೊಳ್ಳಲು ಅವೇ ಸಿದ್ಧಾಂತಗಳನ್ನು ಹರಿಬಿಡಲಾಗುತ್ತದೆ. ಈ ವರದಿಯ ಆಧಾರದಲ್ಲಿ ಹೇಳುವುದಾದರೆ ಪರಿಣಾಮವಾಗಿ ಭಾರತವು ಇಂದು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚಿನ ಅಸಮಾನತೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲೊಂದಾಗಿದೆ ಮತ್ತು ಚೀನಾ ಶೀಘ್ರವೇ ಆ ಸಾಲಿಗೆ ಸೇರುವ ಅಪಾಯದಲ್ಲಿದೆ ಎಂದು ಬ್ಯಾನರ್ಜಿ ಮತ್ತು ಡುಫ್ಲೊ ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ.
 ‌
ಜಗತ್ತಿನ ಜನಸಂಖ್ಯೆಯ ಅರ್ಧದಷ್ಟು ಕಡುಬಡವರು ಯಾವುದೇ ಸಂಪತ್ತನ್ನು ಹೊಂದಿರುವುದಿಲ್ಲ,ಒಟ್ಟು ಸಂಪತ್ತಿನ ಶೇ.2ರಷ್ಟು ಹೊಂದಿದ್ದರೆ ಅದೇ ದೊಡ್ಡದು. ಇದಕ್ಕೆ ವ್ಯತಿರಿಕ್ತವಾಗಿ ಜಾಗತಿಕ ಜನಸಂಖ್ಯೆಯ ಶೇ.10ರಷ್ಟು ಅತ್ಯಂತ ಶ್ರೀಮಂತರು ಒಟ್ಟು ಸಂಪತ್ತಿನ ಶೇ.76ರಷ್ಟನ್ನು ಹೊಂದಿದ್ದಾರೆ. 1995ರಿಂದ ಬಿಲಿಯನೇರ್‌ಗಳ ಜಾಗತಿಕ ಸಂಪತ್ತಿನಲ್ಲಿ ಶೇ.1ರಿಂದ ಶೇ.3ಕ್ಕೂ ಅಧಿಕ ಏರಿಕೆಯಾಗಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಏರಿಕೆ ಇನ್ನಷ್ಟು ಹೆಚ್ಚಾಗಿದೆ. ವಾಸ್ತವದಲ್ಲಿ 2020 ಜಾಗತಿಕ ಬಿಲಿಯನೇರ್ಗಳ ಸಂಪತ್ತಿನ ಪಾಲಿನ ತೀವ್ರ ಹೆಚ್ಚಳವನ್ನು ದಾಖಲಿಸಿದೆ ಎಂದು ವರದಿಯು ತಿಳಿಸಿದೆ.

ನಿರಂತರ ಮತ್ತು ಹೆಚ್ಚುತ್ತಿರುವ ಬಡತನವು ಅನಿವಾರ್ಯವೇನಲ್ಲ ಎಂದು ಬೆಟ್ಟು ಮಾಡಿರುವ ವರದಿಯು,ವಾಸ್ತವದಲ್ಲಿ ಅದು ರಾಜಕೀಯ ಆಯ್ಕೆಯಾಗಿದೆ. ಅಸಮಾನತೆಗಳನ್ನು ತಗ್ಗಿಸಲು ತೆಗೆದುಕೊಳ್ಳಬಹುದಾದ ಹಲವಾರು ಕ್ರಮಗಳಿವೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News