ಭೂ ಪರಭಾರೆ ನಿಷೇಧ ಕಾಯ್ದೆಗೆ ತಿದ್ದುಪಡಿ ತನ್ನಿ ತಂದು ದಲಿತರ ಭೂಮಿ ರಕ್ಷಿಸುವಂತೆ ಆಗ್ರಹಿಸಿ ಧರಣಿ

Update: 2021-12-07 17:44 GMT

ಬೆಂಗಳೂರು, ಡಿ.7: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆಗೆ ರಾಜ್ಯ ಸರಕಾರ ಕೂಡಲೇ ಸಮಗ್ರ ತಿದ್ದುಪಡಿ ತಂದು ದಲಿತರ ಭೂಮಿ ರಕ್ಷಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಮಂಗಳವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಮಾಯಿಸಿದ ಹೋರಾಟಗಾರರು, ಭೂಮಿ ನಮ್ಮ ಹಕ್ಕು, ಅದನ್ನು ರಕ್ಷಿಸಿಕೊಳ್ಳಲು ಪಿಟಿಸಿಎಲ್ ಕಾಯ್ದೆಯನ್ನು ಸಂರಕ್ಷಿಸಿ ಬಲಗೊಳಿಸಬೇಕಿದೆ ಎಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ದೇಶಕ್ಕೆ ಸ್ವಾತಂತ್ರ‍್ಯ ಬಂದು 73 ವರ್ಷ ಕಳೆದರೂ ದಲಿತರಿಗೆ ಇನ್ನೂ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಶೋಷಿತ ಸಮುದಾಯಗಳಿಗೆ ಇಂದಿಗೂ ಭೂಮಿ ಗಗನ ಕುಸುಮವಾಗಿದೆ. ದಲಿತರ ಬಳಿ ಇರುವ ಅಲ್ಪ ಸ್ವಲ್ಪ ಭೂಮಿ ಕಬಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ನಮ್ಮ ಹೋರಾಟವು ನಿರಂತರ ನಡೆಯುತ್ತಿದೆ. ಈ ಹಿಂದಿನ ಮೂರು ಮುಖ್ಯಮಂತ್ರಿಗಳು ಈ ನಮ್ಮ ಬೇಡಿಕೆಯನ್ನು ಈಡೇರಿಸುವ ಬಾಯಿ ಮಾತಿನ ಒಪ್ಪಿಗೆ ನೀಡಿದರೇ ಹೊರತು ಜಾರಿಗೆ ತರಲಿಲ್ಲ. ಸದ್ಯ ಬಸವರಾಜ ಬೊಮ್ಮಾಯಿ ಅವರು ತಿದ್ದುಪಡಿ ಮಸೂದೆಯ ಕರಡನ್ನು ಸಚಿವ ಸಂಪುಟವು ಅನುಮೋದಿಸಲು ಮುಂದಾಗಿರುವುದು ಅಭಿನಂದನಾರ್ಹ ಎಂದರು.

ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಈ ಮಸೂದೆ ಅಂಗೀಕರಿಸಲು ಕಡತವನ್ನು ಸೂಕ್ತ ಶಿಫಾರಸ್ಸಿನ ಟಿಪ್ಪಣಿಯೊಂದಿಗೆ ಸಚಿವ ಸಂಪುಟ ಅನುಮೋದನೆಗಾಗಿ ಮಂಡಿಸಲು ಆದೇಶಿಸಬೇಕಾಗಿದೆ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News