ಪೊಲೀಸರಿಂದ ಕಾಸು, ಕಾರು ಬೇಡಿಕೆ ಆರೋಪ: ಇನ್‌ಸ್ಪೆಕ್ಟರ್ ಸೇರಿ ಹಲವರ ವಿರುದ್ಧ ದೂರು

Update: 2021-12-07 17:55 GMT

ಬೆಂಗಳೂರು, ಡಿ.7: ಪ್ರಕರಣವೊಂದರ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಆರೋಪಿ ಹೆಸರು ಕೈಬಿಡಲು ಹಣ ಮತ್ತು ಕಾರು ನೀಡುವಂತೆ ಬೇಡಿಕೆಯಿಟ್ಟಿದ್ದ ಆರೋಪದಡಿ ಇಲ್ಲಿನ ಕೆಆರ್ ಪುರ ಇನ್‌ಸ್ಪೆಕ್ಟರ್ ಅಂಬರೀಶ್ ಸೇರಿದಂತೆ ಹಲವರ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ.

ಜಾನ್ ಮೋಸನ್ ಎಂಬುವರು ದೂರು ನೀಡಿದ್ದು, ಕೆಆರ್‌ಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಂಬರೀಶ್, ಪಿಎಸ್ಸೈ ರಂಜಿತ್, ಸಿಬ್ಬಂದಿಗಳಾದ ಸಿದ್ದು, ಸುರೇಶ್, ಮೂರ್ತಿ ಎಂಬವರ ವಿರುದ್ಧ ಎಸಿಬಿಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಜಾನ್ ಮೋಸನ್ ಮೇಲೆ ಗಂಭೀರ ಆರೋಪಗಳಿದ್ದು, ಈ ಸಂಬಂಧ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಹೆಸರು ರದ್ದುಗೊಳಿಸಿ ಪೊಲೀಸರು 15ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಜೊತೆಗೆ, ಕಾರು ಉಡುಗೊರೆಯಾಗಿ ನೀಡುವಂತೆ ಹೇಳಿದ್ದರು ಎನ್ನಲಾಗಿದೆ.

ತದನಂತರ, ಪೊಲೀಸರಿಗೆ ಬೆದರಿ ಕಾರು ಮತ್ತು 6.5 ಲಕ್ಷ ರೂ. ನೀಡಿದರೂ, ಪೊಲೀಸರು ಬಾಕಿ ಹಣ ನೀಡುವಂತೆ ಪಟ್ಟುಹಿಡಿದಿದ್ದರು. ಇದರಿಂದ ಬೇಸತ್ತ ಜಾನ್ ಮೋಸನ್, ಎಸಿಬಿಗೆ ಕೆಲ ದಾಖಲೆಗಳನ್ನು ಉಲ್ಲೇಖಿಸಿ ದೂರು ಸಲ್ಲಿಸಿ, ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News