ಕೋವಿಡ್ ನೂತನ ಮಾರ್ಗಸೂಚಿ; ನಾಳೆ ಸಚಿವ ಸಂಪುಟದಲ್ಲಿ ತೀರ್ಮಾನ: ಸಿಎಂ ಬೊಮ್ಮಾಯಿ

Update: 2021-12-08 05:58 GMT

ಬೆಂಗಳೂರು, ಡಿ.8: ಕೋವಿಡ್ ಬಗ್ಗೆ ಡಿ.9ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಆರ್.ಟಿ.ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಇಂದು ಮಾತನಾಡಿದ ಮುಖ್ಯಮಂತ್ರಿ, ಒಮೈಕ್ರಾನ್ ಮತ್ತು ಕೋವಿಡ್ 3ನೇ ಅಲೆ ಬಗ್ಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ನಾಳೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

 ನವೆಂಬರ್ ತಿಂಗಳ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳಿಂದ ಅನೌಪಚಾರಿಕವಾಗಿ ಮಾಹಿತಿ ಪಡೆಯುತ್ತೇನೆ. ಆ ಬಗ್ಗೆ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹೊಸ ಮಾರ್ಗಸೂಚಿ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಕೆಲವು ಜಿಲ್ಲೆಗಳಲ್ಲಿ ಮಾತ್ರ ಒಮೈಕ್ರಾನ್ ಸೋಂಕು ಪತ್ತೆಯಾಗಿದೆ. ಹೆಚ್ಚಿನ ಜಿಲ್ಲೆಗೆಳಲ್ಲಿ ನಿಯಂತ್ರಣದಲ್ಲಿದೆ. ಆದರೆ ಮಾರ್ಗಸೂಚಿ ತರುವುದಿದ್ದರೆ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ತರಬೇಕಾಗುತ್ತದೆ. ಕೇಂದ್ರ ಸರಕಾರದಿಂದಲೂ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇವೆಲ್ಲವನ್ನು ಪರಾಮರ್ಶಿಸಿ ಡಿಸೆಂಬರ್, ಜನವರಿ ವರೆಗೆ ನಿಯಂತ್ರಣಕ್ಕೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದ ಮುಖ್ಯಮಂತ್ರಿ, ಶಾಲೆಗಳಿಗೆ ಸಂಬಂಧಿಸಿಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಕೋವಿಡ್-19 ಸಂಬಂಧಿಸಿ ಸಭೆ

ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್-19 ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಭೆ ನಡೆಯಿತು.

ಸಭೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹಣಕಾಸು ಇಲಾಖೆ ಎಸಿ.ಎಸ್. ಐ.ಎಸ್.ಎನ್.ಪ್ರಸಾದ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ ಗಿರಿನಾಥ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News