ಕೊಡಗಿನ ಜಲಪ್ರಳಯದ ರಾಜಕೀಯಗಳನ್ನು ತೆರೆದಿಡುವ ಕೃತಿ

Update: 2021-12-08 06:44 GMT

ಕರ್ನಾಟಕದ ಮೂಗುತಿಯೆಂದು ಕೊಡಗನ್ನು ಕರೆಯುತ್ತಾರೆ. ಮೂಗು ಇದ್ದರೆ ತಾನೇ ಮೂಗುತಿ. 2018ರಿಂದ 2020ರಲ್ಲಿ ಈ ಮೂಗುತಿಯೇ ಹರಿಯುವಂತಹ ಸನ್ನಿವೇಶ ನಿರ್ಮಾಣವಾಯಿತು. ಕೊಡಗಿನ ನೆರೆ ದೇಶಾದ್ಯಂತ ಸುದ್ದಿಯಾಯಿತು. ಮನುಷ್ಯ ಪ್ರಕೃತಿಯೊಂದಿಗೆ ನಡೆಸಿದ ಚೆಲ್ಲಾಟದ ಪರಿಣಾಮವನ್ನು ಕೊಡಗು ಅಕ್ಷರಶಃ ಉಂಡಿತು. ಈ ಜಲಪ್ರಳಯದಲ್ಲಿ ಸಂಭವಿಸಿದ ನಾಶ-ನಷ್ಟ, ಸಾವು ನೋವು, ಜನರ ಸಂಕಟಗಳು, ಜಲಪ್ರಳಯದ ಸಂಕಟದಲ್ಲಿ ನಡೆದ ರಾಜಕೀಯ, ಮನುಷ್ಯರ ಸ್ವಾರ್ಥ, ನೀಚತನ ಇವೆಲ್ಲವನ್ನು ವರದಿ ರೂಪದಲ್ಲಿ ಸಮಗ್ರವಾಗಿ ಕಟ್ಟಿಕೊಡುವ ಕೃತಿ ನೌಶಾದ್ ಜನ್ನತ್ ಅವರ ‘ಜಲ ಪ್ರಳಯ-ಅಸಲಿಯತ್ತಿನ ಅನಾವರಣ’. ಇದು ವರದಿಗಳ ಸಂಗ್ರಹವೂ ಹೌದು. ದುರಂತ ಕಾಲದ ಹತ್ತು ಹಲವು ಅಂಕಿಅಂಶಗಳು ಈ ಕೃತಿಯಲ್ಲಿ ದಾಖಲಾಗಿವೆ. ಅಷ್ಟೇ ಅಲ್ಲ ಕೆಲವೆಡೆ ನಡೆದ ಪರಿಹಾರ ರಾಜಕೀಯವನ್ನು ಆಕ್ರೋಶದಿಂದ ಮಂಡಿಸುತ್ತಾರೆ. ಸಣ್ಣ ಪುಟ್ಟ ವಿಶ್ಲೇಷಣೆಗಳೂ ಕೃತಿಯಲ್ಲಿವೆ.

ಕೊಡಗಿನ ರುದ್ರರಮಣೀಯ ಪ್ರಕೃತಿಯ ರೌದ್ರಾವತಾರವನ್ನು ಒಂದೊಂದೇ ಘಟನೆಗಳ ಮೂಲಕ ಕೃತಿ ನಿರೂಪಿಸುತ್ತಾ ಹೋಗುತ್ತದೆ. ‘ಹರೀಶ್ ರೈ ಮತ್ತು ಚಂದ್ರಾವತಿ ಜಲ ಪ್ರಳಯದಲ್ಲಿ ಕೊಚ್ಚಿ ಹೋದ ಪ್ರಕರಣ, ಜಲಪ್ರಳಯ ದುರಂತಕ್ಕೆ ತತ್ತರಿಸಿದ ಲಾರೆನ್ಸ್ ಕುಟುಂಬ, ಪ್ರಳಯದಲ್ಲಿ ಕೊಚ್ಚಿ ಹೋದ ನಾಸಿರ್‌ನ ಸುಂದರ ರಿಸಾರ್ಟ್... ಇಲ್ಲಿ ಬರುವ ಪ್ರತಿ ಹೆಸರಿಗೂ ಒಂದೊಂದು ಕತೆಗಳಿವೆ. ಪತ್ರಕರ್ತನಾಗಿ ಮಾತ್ರವಲ್ಲ, ಸಂತ್ರಸ್ತರ ನೆರವಿನಲ್ಲೂ ಸ್ವತಃ ಪಾತ್ರವಹಿಸಿರುವ ಲೇಖಕರು ತಾವು ಹತ್ತಿರದಿಂದ ಕಂಡುಂಡ ಸಂಕಟಗಳನ್ನು ಕುತೂಹಲಕಾರಿಯಾಗಿ ನಿರೂಪಿಸಿದ್ದಾರೆ. ವೈಭವದಿಂದ ಮೊದವರು ಕೊನೆಯ ಕ್ಷಣದಲ್ಲಿ ಮಕ್ಕಳ ಶಾಲಾ ಶುಲ್ಕಕ್ಕೆ ಬೇಡುವ ಸ್ಥಿತಿ ನಿರ್ಮಾಣವಾದ ಪ್ರಕರಣಗಳೂ ಇಲ್ಲಿವೆ. ಇದೇ ಸಂದರ್ಭದಲ್ಲಿ ಪ್ರಳಯ ಸಮಯದಲ್ಲಿ ಅಸೀಮ ಧೈರ್ಯವನ್ನು ಪ್ರದರ್ಶಿಸಿ, ಸಂತ್ರಸ್ತರಿಗೆ ನೆರವಾದ ಸಾಹಸ ಕತೆಗಳಿವೆ. ಸಂತ್ರಸ್ತರಿಗೆ ತನು ಮನವನ್ನು ತೆತ್ತ ಮನಸ್ಸುಗಳ ಬಗ್ಗೆಯೂ ಬರೆಯಲಾಗಿದೆ. ವಿಭಜಿಸಲ್ಪಟ್ಟ ಜಾತಿ, ಧರ್ಮಗಳನ್ನು ನೆರೆಯು ಒಂದಾಗಿಸಿದ ವಿಸ್ಮಯಗಳು ಇಲ್ಲಿವೆ. ಹಾಗೆಯೇ ಪರಿಹಾರ ಸಂದರ್ಭದಲ್ಲೂ ಜಾತಿ, ಧರ್ಮಗಳನ್ನು ತಂದು ರಾಜಕೀಯ ಮಾಡಲು ಹವಣಿಸಿದ ನೀಚರ ಬಗ್ಗೆಯೂ ವಿವರಗಳಿವೆ.

ಮುನ್ನುಡಿಯಲ್ಲಿ ನಾಗೇಶ್ ಕಾಲೂರು ಹೀಗೆ ಹೇಳುತ್ತಾರೆ ‘‘ಇದು 2018ರ ಜಲಪ್ರಳಯದ ಇತಿಹಾಸವನ್ನು ದಾಖಲೀಕರಣ ಮಾಡುವ ಆಕರ ಸಾಮಗ್ರಿ ಯಾಗಿಯೂ ಮುಂದಿನ ದಿನಗಳಲ್ಲಿ ಉಳಿದುಕೊಳ್ಳಬಹುದು, ಉಳಿದುಕೊಳ್ಳುತ್ತದೆ’’. ಹಾಗೆಯೇ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಒಂದಕ್ಕೊಂದು ಪೂರಕವಾಗಿರಲು ಸಾಧ್ಯವಿಲ್ಲ ಎನ್ನುವುದಕ್ಕೆ ಕೊಡಗು’’ ನೆರೆ ಒಂದು ಉದಾಹರಣೆ ಎಂದು ಅಭಿಪ್ರಾಯ ಪಡುತ್ತಾರೆ. ‘‘ಈ ಪ್ರಾಕೃತಿಕ ವಿಕೋಪಕ್ಕೆ ಅಧಿಕ ಮಳೆಯೇ ಕಾರಣ ಎಂದು ತಜ್ಞರ ಸಮಿತಿ ‘ಕಾಗಕ್ಕ ಗುಬ್ಬಕ್ಕ’ ಕಥೆ ಹೇಳಿ, ಮೂಲ ವಿಚಾರವನ್ನೇ ಮುಚ್ಚಿಟ್ಟಿತ್ತು. ಯಾರದೋ ತಪ್ಪಿಗೆ ಯಾರ್ಯಾರೋ ಜೀವ ತೆರಬೇಕಾಯಿತು. ಗದ್ದೆ ತೋಟಗಳು ನಾಶವಾದವು. ಸತ್ತವ

ಕುಟುಂಬಕ್ಕೆ ಸರಕಾರ ಒಂದಷ್ಟು ಪರಿಹಾರ ಕೊಟ್ಟಿತು. ಮನೆ ಕಳೆದುಕೊಂಡವರಿಗೆ ಮನೆ ಕೊಡುವ ವಿಚಾರವಾಗಿ ರಾಜಕೀಯ ಮೇಲಾಟಗಳಾದವು. ಸೂತಕದ ಜಿಲ್ಲೆಯಲ್ಲಿ ಉಂಡೂ ಹೋದವರು, ಕೊಂಡೂ ಹೋದವರು ಅದೆಷ್ಟೋ ಜನ...’’ ಎನ್ನುವುದು ನಾಗೇಶ್ ಅವರ ಒಡಲಾಳದ ಮಾತು. ‘ನಮ್ಮ ಕೊಡಗು ಪ್ರಕಾಶನ’ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 241. ಮುಖಬೆಲೆ 200 ರೂ. ಆಸಕ್ತರು 85469 71717 ದೂರವಾಣಿಯನ್ನು ಸಂಪರ್ಕಿಸಬಹುದು.

ಕೃತಿ: ಜಲ ಪ್ರಳಯ

ಅಸಲಿಯತ್ತಿನ ಅನಾವರಣ

ಲೇಖಕರು: ನೌಶಾದ್ ಜನ್ನತ್

ಪುಟಗಳು: 241

ಮುಖಬೆಲೆ: 200 ರೂ. ಪ್ರಕಾಶಕರು: ನಮ್ಮ ಕೊಡಗು ಚಾರಿಟೆಬಲ್ ಟ್ರಸ್ಟ್ ಬಿ. ಎಂ. ರಸ್ತೆ, ಕುಶಾಲನಗರ, ಕೊಡಗು

-ಕಾರುಣ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News