ಬೆಂಗಳೂರು ಕೃಷಿ ವಿ.ವಿ. ಗೆ ದಕ್ಷಿಣ ಭಾರತದಲ್ಲೇ ಪ್ರಥಮ ಸ್ಥಾನ
ಬೆಂಗಳೂರು, ಡಿ.8: ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಹೊರಡಿಸಿರುವ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು 2020-21ನೇ ಸಾಲಿನಲ್ಲಿ ದಕ್ಷಿಣ ಭಾರತದಲ್ಲಿರುವ ಹಾಗೂ ರಾಜ್ಯದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ. ಅಲ್ಲದೇ ರಾಷ್ಟ್ರಮಟ್ಟದ ರಾಜ್ಯ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ 3ನೇ ಸ್ಥಾನದಲ್ಲಿದೆ ಎಂದು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಕುಲಪತಿಗಳಾದ ಡಾ: ಎಸ್. ರಾಜೇಂದ್ರಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಕೃಷಿ ಮತ್ತು ಸಂಬಂಧಿಸಿದ ವಿಶ್ವವಿದ್ಯಾನಿಲಯಗಳ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಜಾಗತಿಕ ಮಟ್ಟದಲ್ಲಿ ಉತ್ತಮ ಶ್ರೇಯಾಂಕ ಪಡೆಯುವ ನಿಟ್ಟಿನಲ್ಲಿ ಛಾಪನ್ನು ಮೂಡಿಸಲು ಶ್ರೇಯಾಂಕವನ್ನು ನೀಡುತ್ತಿದೆ. ಶ್ರೇಯಾಂಕವು ಕೃಷಿ ವಿಶ್ವವಿದ್ಯಾನಿಲಯಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಮಹತ್ತರವಾದ ಪಾತ್ರವಹಿಸುತ್ತದೆ. ಹಾಗಾಗಿ 2020-21ನೇ ಸಾಲಿನಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ರಾಷ್ಟ್ರ್ಟದ 67 ಕೃಷಿ ವಿಶ್ವವಿದ್ಯಾನಿಲಯಗಳ ಶಿಕ್ಷಣ, ಸಂಶೋಧನೆ, ವಿಸ್ತರಣೆ, ಕ್ರೀಡೆ ಮತ್ತು ಸಾಂಸದಕೃತಿಕ ಚಟುವಟಿಕೆಗಳಲ್ಲಿ ಸಾಧಿಸಿದ ಗಣನೀಯ ಸೇವೆಯನ್ನು ಮೌಲ್ಯಮಾಪನ ಮಾಡಿ ಕೃಷಿ ವಿಶ್ವವಿದ್ಯಾನಿಲಯಗಳನ್ನು ಶ್ರೇಣಿಕರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.