ಬಾಲವನದ ಕಾರಂತರ ಹೆಜ್ಜೆ ಗುರುತುಗಳು....

Update: 2021-12-09 06:57 GMT

ಪುತ್ತೂರು ಮತ್ತು ಶಿವರಾಮ ಕಾರಂತರಿಗೆ ಅವಿನಾಭಾವ ಸಂಬಂಧ. ‘ಬಾಲವನ’ ಇಂದಿಗೂ ಶಿವರಾಮ ಕಾರಂತರ ಹೆಜ್ಜೆಗುರುತುಗಳನ್ನು ಪರಿಚಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲವನದ ಶಿವರಾಮ ಕಾರಂತರನ್ನು ಪರಿಚಯಿಸುವ ದೃಷ್ಟಿಯಿಂದ ಡಾ. ಶಿವರಾಮ ಕಾರಂತರ ಬಾಲವನ ಪುತ್ತೂರು ಹಾಗೂ ಸಹಾಯಕ ಆಯುಕ್ತರ ಕಚೇರಿ ಪುತ್ತೂರು ಉಪವಿಭಾಗ ಇವರ ಪ್ರಕಾಶನದ ಮೂಲಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಬಾಲವನದಲ್ಲಿ ಭಾರ್ಗವ’ ಎನ್ನುವ ಸಂಪಾದಿತ ಕೃತಿಯನ್ನು ಹೊರತಂದಿದೆ. ಈ ಕೃತಿಯನ್ನು ಹೊರ ತರಲು ಡಾ. ಯತೀಶ್ ಉಳ್ಳಾಲ್ ಪ್ರಧಾನ ಸಂಪಾದಕರಾಗಿ ಕೆಲಸ ಮಾಡಿದ್ದಾರೆ. ಸಂಪಾದಕರಾಗಿ ಡಾ. ಸುಂದರ ಕೇನಾಜೆ ಕಾರ್ಯನಿರ್ವಹಿಸಿದ್ದಾರೆ. ಗೌರವ ಸಂಪಾದಕರಾಗಿ ಡಾ. ರಾಜೇಂದ್ರ ಕೆ. ವಿ. ಅವರು ಉಸ್ತುವಾರಿ ವಹಿಸಿದ್ದಾರೆ.

‘ಬಾಲವನದ ವಿಸ್ತಾರ ಸ್ಥಳ, ಅಲ್ಲಿರುವ ಸ್ಮಾರಕ ಹಾಗೂ ಕಲಾ ಚಟುವಟಿಕೆಯ ದಾಖಲೆಯ ಹೊರತಾಗಿ ಈ ಸ್ಥಳದ ಪರಿಕಲ್ಪನೆ ಇಲ್ಲದ ಮತ್ತು ಡಾ. ಕಾರಂತರನ್ನು ವಿಸ್ತೃತವಾಗಿ ಅರಿಯದ ಯಾರಿಗೇ ಆದರೂ ಪರಿಚಯಿಸುವ ದಾಖಲೆಯೊಂದರ ಕೊರತೆ ಬಾಲವನದಲ್ಲಿದೆ. ಕಾರಂತರು ಇರುವಾಗ ನಡೆಯುತ್ತಿದ್ದ ನೂರಾರು ಚಟುವಟಿಕೆ, ಅವರು ಬಾಲವನವನ್ನು ಬಿಟ್ಟು ಹೋದ ನಂತರವೂ ನಡೆಯುತ್ತಿದ್ದ ನೂರಾರು ಕಾರ್ಯಕ್ರಮಗಳನ್ನು ಹೊರತು ಪಡಿಸಿದರೆ, ಬಾಲವನ ತನ್ನನ್ನು ತಾನು ಪರಿಚಯಿಸಿಕೊಳ್ಳುವ ಅಗತ್ಯದಿಂದ ದೂರ ಉಳಿದಿದೆ ಎನ್ನುವುದು ಪ್ರಾಜ್ಞರ ಮಾತು. ಈ ಹಿನ್ನೆಲೆಯಲ್ಲಿ ‘ಬಾಲವನದಲ್ಲಿ ಭಾರ್ಗವ’ ಕೃತಿಯನ್ನು ಹೊರತರಲಾಗಿದೆ’ ಎಂದು ಸಂಪಾದಕ ಸುಂದರ ಕೇನಾಜೆಯವರು ಅಭಿಪ್ರಾಯ ಪಡುತ್ತಾರೆ.

ಕಾರಂತರನ್ನು ಬೇರೆ ಬೇರೆ ನೆಲೆಗಳಲ್ಲಿ ಇಲ್ಲಿ ಕಟ್ಟಿಕೊಡಲಾಗಿದೆ. ಬಾಲವನದ ಆಡಳಿತ ವರ್ಗ ಬಾಲವನದ ಕುರಿತಂತೆ ಪ್ರತ್ಯೇಕವಾಗಿ ಬರೆಯುತ್ತಾರೆ. ಬಾಲವನದಲ್ಲಿ ಬಾಲ್ಯವನ್ನು ಕಳೆದ ಪೊ. ಮಾಲವಿಕಾ ಕಪೂರ, ಡಾ. ಉಲ್ಲಾಸ ಕಾರಂತ, ಕ್ಷಮಾರಾವ್ ಅವರ ನೆನಪುಗಳೂ ಇಲ್ಲಿವೆ. ಬಾಲವನದೊಳಗಿನ ಜೀವ ವೈವಿಧ್ಯ, ಭೌತಿಕ ಪರಿಸರ, ಸಾಂಸ್ಕೃತಿಕ ಚಟುವಟಿಕೆಗಳು, ಕಲೆ, ಈಜುಕೊಳ, ಬಾಲವನದ ಪ್ರಗತಿಯ ಹಾದಿಯನ್ನು ಕೆಲವರು ಹಂಚಿಕೊಂಡಿದ್ದಾರೆ. ಕಾರಂತರ ವಿಚಾರಗಳ ಅಧ್ಯಾಯ ಹಲವು ಪ್ರಮುಖ ಲೇಖಕರ ಗಂಭೀರ ಬರಹಗಳನ್ನು ಒಳಗೊಂಡಿವೆ. ತಾಳ್ತಜೆ ವಸಂತಕುಮಾರ್, ಅಮೃತ ಸೋಮೇಶ್ವರ, ಡಾ. ಪ್ರಭಾಕರ ಜೋಶಿ, ರಾಧಾಕೃಷ್ಣ ಕಲ್ಚಾರ್, ನಾಗೇಶ್ ಹೆಗಡೆ, ಪುರುಷೋತ್ತಮ ಬಿಳಿಮಲೆ, ಲಕ್ಷ್ಮೀಶ ತೋಳ್ಪಾಡಿ, ಪ್ರಭಾಕರ ಶಿಶಿಲ, ಐಕೆ ಬೊಳುವಾರು, ನರೇಂದ್ರ ರೈ ದೇರ್ಲ, ವೈದೇಹಿ, ಡಾ. ಜಯಪ್ರಕಾಶ ಮಾವಿನ ಕುಳಿ ಮೊದಲಾದವರು ಕಾರಂತರು ಕೈಯಾಡಿಸಿದ ವಿವಿಧ ಕ್ಷೇತ್ರಗಳ ಬಗ್ಗೆ ಬರೆದಿದ್ದಾರೆ.

ಪಡಾರು ಮಹಾಬಲೇಶ್ವರ ಭಟ್, ಸುಬ್ರಾಯ ಚೊಕ್ಕಾಡಿ, ಡಾ. ಬಿ.ಎ. ವಿವೇಕ ರೈ, ಪಾಲ್ತಾಡಿ ರಾಮಕೃಷ್ಣ ಆಚಾರ್, ಮಾಲಿನಿ ಮಲ್ಯ ಮೊದಲಾದವರು ಕಾರಂತರ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಬೊಳುವಾರು ಮುಹಮದ್ ಕುಂಞಿ ಅವರ ಕಾರಂತರ ಎರಡು ಮುಖ, ಜಯಂತ ಕಾಯ್ಕಿಣಿಯವರ ‘ಬಾಲವನದ ಕೊಂಬೆಯಲ್ಲಿ ಒಂಟಿ ಜೋಕಾಲಿ’ ಬಾಲಸುಬ್ರಹ್ಮಣ್ಯ ಕಂಜರ್ಪಣೆಯವರ ‘ಕಾರಂತರೆಂಬ ಹಸಿರು ಬೆಟ್ಟ’, ದೇರಾಜೆಯವರ ‘ಶಿವರಾಮ ಕಾರಂತ ಎಂಬ ಬೆರಗು’ ಲೇಖನಗಳು ಕಾರಂತರನ್ನು ಭಿನ್ನವಾಗಿ ಕಟ್ಟಿಕೊಡುತ್ತದೆ. ಕೃತಿಯಲ್ಲಿ ಬಾಲವನಕ್ಕೆ ಸಂಬಂಧಪಟ್ಟ ಸುಂದರ ಛಾಯಾ ಚಿತ್ರಗಳೂ ಇವೆ.

ಕೃತಿ: ಬಾಲವನದಲ್ಲಿ ಭಾರ್ಗವ

ಸಂಪಾದಕರು: ಡಾ. ಸುಂದರ ಕೇನಾಜೆ

ಪುಟಗಳು: 274

ಬೆಲೆ: 250 ರೂಪಾಯಿ.

ಪ್ರಕಾಶನ: ಡಾ. ಶಿವರಾಮ ಕಾರಂತರ ಬಾಲವನ ಪುತ್ತೂರು ಹಾಗೂ ಸಹಾಯಕ ಆಯುಕ್ತರ ಕಚೇರಿ ಪುತ್ತೂರು, ಉಪವಿಭಾಗ, ದ.ಕ. ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News