ವಕೀಲೆ, ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಜೈಲಿನಿಂದ ಬಿಡುಗಡೆ

Update: 2021-12-09 19:26 GMT

ಮುಂಬೈ, ಡಿ. 9: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಯಾಗಿರುವ ವಕೀಲೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಅವರು ಮುಂಬೈಯ ಬೈಕುಲಾದ ಮಹಿಳೆಯರ ಕಾರಾಗೃಹದಿಂದ ಗುರುವಾರ ಬಿಡುಗಡೆಗೊಂಡಿದ್ದಾರೆ. ಸುಧಾ ಭಾರದ್ವಾಜ್ ಅವರನ್ನು 2018 ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ‌

ಬಾಂಬೆ ಉಚ್ಚ ನ್ಯಾಯಾಲಯ ಕಳೆದ ವಾರ ಅವರಿಗೆ ಜಾಮೀನು ಮಂಜೂರು ಮಾಡಿತ್ತು. 2018ರಲ್ಲಿ ಪುಣೆಯ ಸಮೀಪದ ಗ್ರಾಮದಲ್ಲಿ ನಡೆದ ಜಾತಿ ಹಿಂಸಾಚಾರ ಕೋರೆಗಾಂವ್ ಪ್ರಕರಣ. ಈ ಹಿಂಸಾಚಾರದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ 16 ಮಂದಿಯಲ್ಲಿ ಸುಧಾ ಭಾರದ್ವಾಜ್ ಕೂಡ ಸೇರಿದ್ದರು. 50 ಸಾವಿರ ಜಾಮೀನು ಬಾಂಡ್ ಹಾಗೂ ಒಂದು ಅಥವಾ ಹೆಚ್ಚು ಶ್ಯೂರಿಟಿಯನ್ನು ಸಲ್ಲಿಸಿದ ಬಳಿಕ ಸುಧಾ ಭಾರದ್ವಾಜ್ ಅವರನ್ನು ಬಿಡುಗಡೆ ಮಾಡಬಹುದು ಎಂದು ಎನ್ಐಎ ನ್ಯಾಯಾಲಯ ಬುಧವಾರ ತಿಳಿಸಿತ್ತು. 

ತನ್ನ ಆದೇಶದಲ್ಲಿ ಎನ್ಐಎ ನಾಯಾಲಯ, ಭಾರದ್ವಾಜ್ ಅವರು ಮೂರಕ್ಕಿಂತ ಹೆಚ್ಚು ವರ್ಷ ಜೈಲಿನಲ್ಲಿ ಇದ್ದಾರೆ ಎಂದು ಹೇಳಿತ್ತು. ಆದರೆ, ಕೇಂದ್ರ ಸಂಸ್ಥೆ ಅವರು ಸಾಕ್ಷ ನಾಶ ಮಾಡುವ ಆತಂಕ ವ್ಯಕ್ತಪಡಿಸಿತ್ತು. ವಿಚಾರಣೆಯ ಕಲಾಪದಲ್ಲಿ ಭಾಗವಹಿಸುವಂತೆ ಹಾಗೂ ಮಾಧ್ಯಮಕ್ಕೆ ಯಾವುದೇ ಹೇಳಿಕೆ ನೀಡದಂತೆ ಸುಧಾ ಭಾರದ್ವಾಜ್ ಅವರಿಗೆ ನ್ಯಾಯಾಲಯ ನಿರ್ದೇಶಿಸಿತ್ತು. ಸುಧಾ ಭಾರದ್ವಾಜ್ ಅವರನ್ನು ಪ್ರತಿನಿಧಿಸಿದ್ದ ನ್ಯಾಯವಾದಿ ಯುಗ್ ಚೌಧರಿ ಅವರು ಸುಧಾ ಭಾರದ್ವಾಜ್ ಅವರ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಬೇಡಿ ಹಾಗೂ ಅವರ ಬಯಸಿದ್ದನ್ನು ಬರೆಯಲು ಅವಕಾಶ ನೀಡಿ ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News