ನಾನೇನು ತಿನ್ನಬೇಕೆಂದು ನೀವು ಹೇಗೆ ನಿರ್ಧರಿಸುತ್ತೀರಿ?: ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಗೆ ಹೈಕೋರ್ಟ್ ತರಾಟೆ

Update: 2021-12-10 05:17 GMT
ಸಾಂದರ್ಭಿಕ ಚಿತ್ರ

ಅಹ್ಮದಾಬಾದ್: ಮಾಂಸಾಹಾರ ಮಾರಾಟ ಮಾಡುವುದಕ್ಕೆ ಕೌನ್ಸಿಲರುಗಳು ವ್ಯಕ್ತಪಡಿಸಿದ ವಿರೋಧದ ನಂತರ ತಮ್ಮ ತಳ್ಳುಗಾಡಿಗಳನ್ನು ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ವಶಪಡಿಸಿಕೊಂಡಿದ್ದನ್ನು ಪ್ರಶ್ನಿಸಿ 25 ಬೀದಿಬದಿ ಮಾರಾಟಗಾರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ಗುಜರಾತ್ ಹೈಕೋರ್ಟ್, ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್  ಕ್ರಮವನ್ನು ಖಂಡಿಸಿತಲ್ಲದೆ ಸಂಬಂಧಿತರು ತಮ್ಮ  ವಸ್ತುಗಳನ್ನು ವಾಪಸ್ ನೀಡುವಂತೆ ಕೋರಿ 24 ಗಂಟೆಗಳೊಳಗೆ ಮನವಿ ಸಲ್ಲಿಸಿದರೆ ಆದಷ್ಟು ಬೇಗ ಪ್ರಕರಣ ಇತ್ಯರ್ಥ ಪಡಿಸಬೇಕು ಎಂದು ಸೂಚಿಸಿದೆ ಎಂದು indianexpress ವರದಿ ಮಾಡಿದೆ.

"ಮುನಿಸಿಪಲ್ ಕಾರ್ಪೊರೇಷನ್‌ಗೆ ಏನು ಸಮಸ್ಯೆಯಾಗಿದೆ? ನಿಮಗೆ ಮಾಂಸಾಹಾರ ಇಷ್ಟವಿಲ್ಲವೇ, ಅದು ನಿಮ್ಮ ಸಮಸ್ಯೆ. ನಾನು ಹೊರಗೆ ಏನು ತಿನ್ನುತ್ತೇನೆ ಎಂದು ನೀವು ಹೇಗೆ ನಿರ್ಧರಿಸಬಹುದು. ನಾನು ಮನೆಯ ಹೊರಗೆ ಏನು ತಿನ್ನಬೇಕೆಂದು ನೀವು ನಾಳೆ ನಿರ್ಧರಿಸಬಹುದು. ಮಧುಮೇಹ ಸಮಸ್ಯೆಗೆ ಕಾರಣವಾಗುತ್ತದೆಯೆಂದು ನಾಳೆ ನಾನು ಕಬ್ಬಿನ ಜ್ಯೂಸ್ ಕುಡಿಯಬಾರದೆಂದು ಅವರು ಹೇಳಬಹುದು,. ಅಥವಾ ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಹೇಳಬಹುದು. ಏನು ಮಾಡುತ್ತಿದ್ದೀರಿ ಎಂದು ಆಯುಕ್ತರನ್ನು ಕರೆದು ವಿಚಾರಿಸಿ,'' ಎಂದು  ನ್ಯಾಯಾಲಯ ಸರಕಾರಿ ವಕೀಲರನ್ನುದ್ದೇಶಿಸಿ ಹೇಳಿದೆ.

ಯಾವುದೇ ಅಧಿಕೃತ ಆದೇಶವಿಲ್ಲದೆ ತಮ್ಮ ಕಕ್ಷಿಗಾರರ ತಳ್ಳುಗಾಡಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಹ್ಮದಾಬಾದ್, ವಡೋದರಾ, ಸೂರತ್, ಭಾವ್ನಗರ್, ಜುನಾಗಢ್ ಸ್ಥಳೀಯಾಡಳಿತಗಳು ತೆಗೆದುಕೊಂಡ ಕ್ರಮದ ಫಲವಿದು. ಕಳೆದ ತಿಂಗಳು ರಾಜಕೋಟ್ ಮೇಯರ್ ಕೂಡ ಪ್ರತಿಕ್ರಿಯಿಸಿ ಮಾಂಸಾಹಾರ ಮಾರಾಟ ಮಾಡುವ ತಳ್ಳುಗಾಡಿಗಳು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಹೇಳಿದ್ದರು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ವಕೀಲೆ ಛಾಯಾ ಪ್ರತಿಕ್ತಿಯಿಸಿ ತಪ್ಪು ಅಭಿಪ್ರಾಯದಿಂದ ದೂರು ಸಲ್ಲಿಸಲಾಗಿದೆ. ರಸ್ತೆಯಲ್ಲಿ ಅಡ್ಡಿಯಾಗುತ್ತದೆ ಎಂದು ತಳ್ಳುಗಾಡಿಗಳನ್ನು ವಶಪಡಿಸಿಕೊಳ್ಳಲಾಗಿದೆ, ಎಲ್ಲಾ ಮಾಂಸಾಹಾರ ಮಾರಾಟ ಮಾಡುವ ತಳ್ಳುಗಾಡಿಗಳ ವಿರುದ್ಧ ಅಭಿಯಾನವಿಲ್ಲ ಎಂದು ಹೇಳಿದರಲ್ಲದೆ ರಸ್ತೆಗೆ ಅಡ್ಡಿಯಾಗುತ್ತಿರುವ ಕುರಿತಾದ ಫೋಟೋಗಳನ್ನೂ ಹಾಜರುಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News