ಫರೀದ್‌ಕೋಟ್: 17 ರ ಹರೆಯದ ಅಂತರ್‌ರಾಷ್ಟ್ರೀಯ ಶೂಟರ್ ಆತ್ಮಹತ್ಯೆ

Update: 2021-12-10 13:04 GMT
Photo:Twitter/ @capt_amarinder

 ಹೊಸದಿಲ್ಲಿ, ಡಿ.10: ಹದಿನೇಳರ ಹರೆಯದ ಅಂತರ್‌ರಾಷ್ಟ್ರೀಯ ಮಟ್ಟದ ಶೂಟರ್‌ವೊಬ್ಬರು ಗುರುವಾರ ಬೆಳಗ್ಗೆ ಪಂಜಾಬ್‌ನ ಫರೀದ್‌ಕೋಟ್ ನಲ್ಲಿರುವ ತನ್ನ ಮನೆಯೊಳಗೆ ಪರವಾನಗಿ ಇರುವ ತನ್ನ ಪಿಸ್ತೂಲ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೈದಿರುವ ಘಟನೆ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಯುವ ಶೂಟರ್ ರನ್ನು ಖುಷ್ ಸೀರತ್ ಕೌರ್ ಸಂಧು ಎಂದು ಗುರುತಿಸಲಾಗಿದೆ. ಸಂಧು ಹಲವಾರು ರಾಷ್ಟ್ರೀಯ ಪದಕಗಳನ್ನು ಜಯಿಸಿದ್ದರು. ಆದರೆ, ಇತ್ತೀಚೆಗೆ ಕೊನೆಗೊಂಡಿರುವ 64ನೇ ಆವೃತ್ತಿಯ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಪ್ರದರ್ಶನದಿಂದ ನಿರಾಸೆಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 "ಫರೀದ್‌ಕೋಟ್ ನ ಹರಿಂದರ್ ನಗರದ ಗಾಲಿ ನಂ.4ರಲ್ಲಿ 17ರ ಹದಿಹರೆಯದ ಕ್ರೀಡಾಪಟುವೊಬ್ಬರು ತನ್ನ ಮನೆಯೊಳಗೆ ಸ್ವತಃ ಗುಂಡಿಟ್ಟುಕೊಂಡು ಸಾವನ್ನಪ್ಪಿರುವ ಕುರಿತು ಕಂಟ್ರೋಲ್ ರೂಮ್‌ನಿಂದ ನಾವು ಕರೆ ಸ್ವೀಕರಿಸಿದ್ದೆವು. ಘಟನಾ ಸ್ಥಳಕ್ಕೆ ತಲುಪಿದಾಗ 17ರ ಹರೆಯದ ಖುಷ್ ಸೀರತ್ ಕೌರ್ ಸಂಧು ಮೃತದೇಹವನ್ನು ನಾವು ಪತ್ತೆ ಹಚ್ಚಿದೆವು. ಸಂಧು ಪಿಸ್ತೂಲ್‌ನಿಂದ ಗುಂಡಿಟ್ಟುಕೊಂಡಿದ್ದರು. ತಲೆಗೆ ಆಗಿರುವ ಗಾಯದಿಂದ ಮೃತಪಟ್ಟಿದ್ದರು. ಈ ವಾರ ದಿಲ್ಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಪ್ರದರ್ಶನದಿಂದ ಆಕೆ ನಿರಾಸೆಗೊಂಡಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದೇವೆ. ಘಟನೆಯ ಕುರಿತು ತನಿಖೆ ಆರಂಭಿಸಿದ್ದೇವೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ'' ಎಂದು ಫರೀದ್‌ಕೋಟ್ ಸಿಟಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹರಿಂದರ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News