ಬಿಜೆಪಿಯು ಕಾಶ್ಮೀರಿ ಪಂಡಿತರನ್ನು ಮತ ಬ್ಯಾಂಕ್ ಆಗಿ ಬಳಸಿದೆ: ಫಾರೂಖ್ ಅಬ್ದುಲ್ಲಾ

Update: 2021-12-11 13:00 GMT

ಹೊಸದಿಲ್ಲಿ: ಬಿಜೆಪಿಯು ಕಾಶ್ಮೀರಿ ಪಂಡಿತರನ್ನು ಮತ ಬ್ಯಾಂಕ್ ಆಗಿ ಬಳಸಿದೆಯೇ ಹೊರತು ಅವರಿಗಾಗಿ ಏನನ್ನೂ ಮಾಡಿಲ್ಲ ಎಂದು  ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.

ತೊಂಬತ್ತರ ದಶಕದಲ್ಲಿ ಕಾಶ್ಮೀರಿ ಪಂಡಿತರು ಕಾಶ್ಮೀರ ಕಣಿವೆಯಿಂದ ವಲಸೆ ಹೋದಾಗ ಅವರ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಾಗದೇ ಇರುವುದಕ್ಕೆ ಫಾರೂಕ್ ಅಬ್ದುಲ್ಲಾ ಅವರು ಕಾಶ್ಮೀರಿ ಪಂಡಿತ ಸಮುದಾಯದ ಕ್ಷಮೆಯನ್ನೂ ಯಾಚಿಸಿದ್ದಾರೆ. "ನ್ಯಾಷನಲ್ ಕಾನ್ಫರೆನ್ಸ್ ಆಡಳಿತದ ವೇಳೆ ಪಂಡಿತರು ಕಣಿವೆಗೆ ಮರಳಿ ಬರುವಂತೆ ಮಾಡಲು ನಾವು ಬಹಳಷ್ಟು ಶ್ರಮಿಸಿದೆವು ಆದರೆ ಕೆಲ ಶಕ್ತಿಗಳು ಪಂಡಿತರ ಹತ್ಯೆಗಳನ್ನು ನಡೆಸಿ ಇಡೀ ಪ್ರಕ್ರಿಯೆಗೆ ಅಡ್ಡಿಯಾದವು" ಎಂದು ಅವರು ಹೇಳಿದರು.

"ಕೆಲ ಶಕ್ತಿಗಳು ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಂ ಸಮುದಾಯದ ನಡುವೆ ಒಡಕು ಸೃಷ್ಟಿಸಲು ಯತ್ನಿಸಿದವು.  ಮುಸ್ಲಿಮರಲ್ಲ, ಬದಲು ಕೆಲ ಸ್ವಹಿತಾಸಕ್ತಿಯ ಜನರಿಂದ ಪಂಡಿತರು ಕಾಶ್ಮೀರದಿಂದ ವಲಸೆ ಹೋಗಬೇಕಾಯಿತು. ಪಂಡಿತರನ್ನು ಹೊರ ಹಾಕಿದರೆ ಅವರಿಗೆ ಕಾಶ್ಮೀರ ದಕ್ಕುತ್ತದೆಯೆಂಬುದು ಆ ಶಕ್ತಿಗಳ ಉದ್ದೇಶವಾಗಿತ್ತು. ಆದರೆ ಅವರು ಯಶಸ್ವಿಯಾಗುವುದಿಲ್ಲ. ಕಾಶ್ಮೀರಿ ಪಂಡಿತರಿಗೆ ಆಶ್ರಯ ನೀಡಿದ ಜಮ್ಮುವಿನ ಜನರನ್ನು ಅಭಿನಂದಿಸುತ್ತೇನೆ" ಎಂದು ಫಾರೂಖ್ ಹೇಳಿದರು.

ಕಾಶ್ಮೀರಿ ಪಂಡಿತರಿಗೆ ರಾಜಕೀಯ ಮೀಸಲಾತಿ ಒದಗಿಸಬೇಕು, ಕಾಶ್ಮೀರಿ ಹಿಂದು ದೇವಳ ರಕ್ಷಣೆ ಮಸೂದೆ  ಜಾರಿಯಾಗಬೇಕು ಮತ್ತು ವಾಪಸಾಗುವ ಕಾಶ್ಮೀರಿ ಪಂಡಿತರಿಗೆ ಸೂಕ್ತ ಪುನರ್ವಸತಿ ಒದಗಿಸಬೇಕೆಂಬ ಕುರಿತು ನ್ಯಾಷನಲ್ ಕಾನ್ಫರೆನ್ಸ್ ಅಲ್ಪಸಂಖ್ಯಾತ ಘಟಕ ಮೂರು ನಿರ್ಣಯಗಳನ್ನು ಅಂಗೀಕರಿಸಿದ ಬೆನ್ನಿಗೆ ಫಾರೂಖ್ ಅಬ್ದುಲ್ಲಾ ಅವರ ಹೇಳಿಕೆಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News