ಮತಾಂತರ ನಿಷೇಧ ಕಾಯ್ದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಕ್ರೈಸ್ತ ಸಮುದಾಯದ ನಿಯೋಗ

Update: 2021-12-11 16:05 GMT

ಬೆಂಗಳೂರು, ಡಿ. 11: `ರಾಜ್ಯದಲ್ಲಿ ಕ್ರೈಸ್ತ ಸಮುದಾಯವನ್ನು ಗುರಿಯನ್ನಾಗಿಟ್ಟುಕೊಂಡು ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ `ಮತಾಂತರ ನಿಷೇಧ ಕಾಯ್ದೆ' ಯಾವುದೇ ಕಾರಣಕ್ಕೂ ಬೆಳಗಾವಿ ಅಧಿವೇಶನದಲ್ಲಿ ಯಾವುದೇ ಕಾರಣಕ್ಕೂ ಮಂಡಿಸಬಾರದು' ಎಂದು ಆಗ್ರಹಿಸಿ ಕಾಂಗ್ರೆಸ್ ಮುಖಂಡರನ್ನೊಳಗೊಂಡ ಕ್ರೈಸ್ತ ಸಮುದಾಯದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ.

ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಬಿ.ಎಲ್.ಶಂಕರ್, ಕೆ.ಇ.ರಾಧಾಕೃಷ್ಣ, ಮೇಲ್ಮನೆ ಮಾಜಿ ಸದಸ್ಯ ಐವಾನ್ ಡಿಸೋಜಾ, ಎನ್‍ಆರ್‍ಐ ಉಪಾಧ್ಯಕ್ಷ ಆರತಿ ಕೃಷ್ಣ, ಮಾಜಿ ಶಾಸಕ ಜೆ.ಆರ್.ಲೋಬೋ ಹಾಗೂ ಕ್ರೈಸ್ತ ಸಮುದಾಯದ ರೂನಾಲ್ಡ್ ಕೊಲಾಸೊ ನೇತೃತ್ವದ ನಿಯೋಗ ರೇಸ್ ಕೋರ್ಸ್ ರಸ್ತೆಯಲ್ಲಿನ ಸಿಎಂ ನಿವಾಸದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಖುದ್ದು ಭೇಟಿ ಮಾಡಿ ಸಮಾಲೋಚನೆ ನಡೆಸಿತು. 

`ರಾಜ್ಯದಲ್ಲಿ ಹತ್ತು ವರ್ಷಗಳಲ್ಲಿ ಕ್ರೈಸ್ತ ಸಮುದಾಯದ ಅನುಪಾತದಲ್ಲಿ ಕಡಿಮೆಯಾಗಿದೆ. ವಾಸ್ತವ ಸಂಗತಿ ಹೀಗಿದ್ದರೂ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕ್ರೈಸ್ತ ಸಮುದಾಯದ ಪ್ರಾರ್ಥನಾ ಮಂದಿರಗಳು, ಫಾದರ್‍ಗಳಿಗೆ ಕಿರುಕುಳ ನೀಡಲಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಬಲವಂತದ ಮತಾಂತರವನ್ನು ಮಾಡುತ್ತಿಲ್ಲ. ಆದರೂ, ಕ್ರೈಸ್ತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇನ್ನೂ ಉದ್ದೇಶಿತ ಕಾನೂನು ಜಾರಿಗೆ ಬಂದರೆ ರಾಜ್ಯದಲ್ಲಿ ಕ್ರೈಸ್ತರ ಪರಿಸ್ಥಿತಿ ಏನಾಗಬಹುದು?' ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಗಟ್ಟಬೇಕು. ಮತಾಂತರ ನಿಷೇಧ ಕಾಯ್ದೆ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಬಾರದು. ಸಮಾಜದಲ್ಲಿ ಕ್ರೈಸ್ತ ಸಮುದಾಯದ ಭಯ, ಆತಂಕವಿಲ್ಲದೆ ಗೌರವಯುತವಾಗಿ ಬದುಕುವ ವಾತಾವರಣ ನಿರ್ಮಿಸಬೇಕು. ಒಂದು ವೇಳೆ ಯಾವುದೇ ಪ್ರದೇಶದಲ್ಲಿ ಆಮಿಷವೊಡ್ಡಿ ಬಲವಂತದ ಮತಾಂತರ ಮಾಡುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ. ಆದರೆ, ಅಮಾಯಕ ಕ್ರೈಸ್ತರನ್ನು ಗುರಿ ಮಾಡುವುದು ಸರಿಯಲ್ಲ ಎಂದು ಮುಖಂಡರು ಆಕ್ಷೇಪಿಸಿದ್ದಾರೆ.

ರಾಜ್ಯದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕ್ರೈಸ್ತ ಸಮುದಾಯದ ಮೇಲೆ ಹಲ್ಲೆ, ದೌರ್ಜನ್ಯಕ್ಕೆ ಅವಕಾಶ ನೀಡುವುದಿಲ್ಲ. ಅವರಿಗೆ ರಕ್ಷಣೆ ನೀಡಲು ಸರಕಾರ ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.

`ರಾಜ್ಯದಲ್ಲಿ ಬಲವಂತದ ಮತಾಂತರ ನಿಷೇಧ ಕಾನೂನು ಜಾರಿಯಲ್ಲಿದೆ. ಹೀಗಿರುವ ಮತ್ತೊಂದು ಕಾನೂನು ರೂಪಿಸಲು ಸರಕಾರ ಮುಂದಾಗಿದೆ. ಆದರೆ, ಕಾಯ್ದೆ ಜಾರಿಗೆ ಮೊದಲೇ ಕ್ರೈಸ್ತ ಸಮಯದಾಯವನ್ನು ಗುರಿಯನ್ನಾಗಿಟ್ಟುಕೊಂಡು ಹಲ್ಲೆ, ದೌರ್ಜನ್ಯ, ಕಿರುಕುಳ ಮಿತಿ ಮೀರಿವೆ. ಹೀಗಾಗಿ ಸರಕಾರ ಕ್ರೈಸ್ತ ಸಮುದಾಯದ ರಕ್ಷಣೆಗೆ ಆಸ್ಥೆ ವಹಿಸಬೇಕು. ಆಮಿಷದ ಮತಾಂತರವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಅಂತಹ ಪ್ರಕರಣಗಳಿದ್ದರೆ ಕ್ರಮ ಕೈಗೊಳ್ಳುವುದು ಬಿಟ್ಟು, ಸಮುದಾಯದ ವಿರುದ್ಧ ಅಪಪ್ರಚಾರ ಸರಿಯಲ್ಲ'

-ಐವಾನ್ ಡಿಸೋಜ ವಿಧಾನ ಪರಿಷತ್ ಮಾಜಿ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News