ಅನರ್ಹರನ್ನು ಹೊರಹಾಕಿ, ಪಿಎಚ್.ಡಿ ನಿಬಂಧನೆಗಳನ್ನು ಪಾಲನೆ ಮಾಡಿ: ಸಿಂಡಿಕೇಟ್ ಸದಸ್ಯ ಡಾ. ಸುಧಾಕರ್ ಆಗ್ರಹ

Update: 2021-12-11 17:37 GMT

ಬೆಂಗಳೂರು, ಡಿ.11: ಬೆಂಗಳೂರು ವಿಶ್ವವಿದ್ಯಾಲಯವು 2019ರಲ್ಲಿ ಹೊರಡಿಸಿದ್ದ ಪಿಎಚ್.ಡಿ ಅಧಿಸೂಚನೆ ಅನ್ವಯ ಎರಡನೇ ಸುತ್ತಿನ ಕೌನ್ಸಲಿಂಗ್‍ನಲ್ಲಿ ಅವ್ಯವಹಾರ ನಡೆದಿದೆ. ಈ ಕುರಿತು ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲು ಹತ್ತುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಅನಧಿಕೃತವಾಗಿ ಪಿಎಚ್.ಡಿ ಪ್ರವೇಶ ಪಡೆದವರನ್ನು ಹೊರ ಹಾಕಲಿ ಎಂದು ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯ ಡಾ. ಸುಧಾಕರ್ ಆಗ್ರಹಿಸಿದ್ದಾರೆ. 

ಶನಿವಾರ ಜ್ಞಾನಭಾರತಿ ಆವರಣದಲ್ಲಿ ಮಾತನಾಡಿದ ಅವರು, 2019ರಲ್ಲಿ ಹೊರಡಿಸಿರುವ ಪಿಎಚ್.ಡಿ ಅಧಿಸೂಚನೆಗೆ ಮೂರು ವರ್ಷ ಮುಗಿದರೂ, ಪಿಎಚ್.ಡಿ ಪ್ರವೇಶ ಪ್ರಕ್ರಿಯೆಯನ್ನು ಮಾತ್ರ ವಿವಿಯು ನಿಲ್ಲಿಸಿಲ್ಲ. 2019ರ ಪಿಎಚ್.ಡಿ ಅಧಿಸೂಚನೆಗೆ ಎರಡು ಸುತ್ತುಗಳಲ್ಲಿ ಪಿಎಚ್.ಡಿ ಕೌನ್ಸಲಿಂಗ್ ನಡೆಸಿದ್ದು, ಮೊದಲ ಸುತ್ತಿನಲ್ಲಿ 2016ರ ಪಿಎಚ್.ಡಿ ರೆಗ್ಯುಲೇಶನ್ ನಿಯಮಾವಳಿಗಳನ್ನು ಪಾಲಿಸಲಾಗಿದೆ. ಆದರೆ ಕೊವೀಡ್ ನೆಪ ಹೇಳಿಕೊಂಡು ಒಂದು ವರ್ಷ ತಡವಾಗಿ ನಡೆಸಿದ ಎರಡನೇ ಸುತ್ತಿನಲ್ಲಿ ಯಾವುದೇ ಪಿಎಚ್.ಡಿ ರೆಗ್ಯುಲೇಷನ್ ಅನ್ನು ಅನುಸರಿಸದೆ, ಅನರ್ಹರಿಗೆ ಪಿಎಚ್.ಡಿ ಪ್ರವೇಶವನ್ನು ನೀಡಲಾಗಿದೆ. ಇದು ಕಾನೂನುಬಾಹಿರವಾಗಿದೆ. 

ಆದುದರಿಂದ ಮುಂಬರುವ ಭವಿಷ್ಯದ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಪರಿಗಣಿಸಿ, ವಿವಿಯ ಕುಲಪತಿ ಡಾ. ವೇಣುಗೋಪಾಲ್ ಮತ್ತು ಮೌಲ್ಯಮಾಪನದ ಕುಲಸಚಿವ ಡಾ. ಜೆ.ಟಿ. ದೇವರಾಜು ಎಚ್ಚೆತ್ತುಕೊಂಡು ಸೂಕ್ತ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

2019ರ ಪಿಎಚ್.ಡಿ ಅಧಿಸೂಚನೆಯಲ್ಲಿ 2016 ಪಿಎಚ್.ಡಿ ರೆಗ್ಯುಲೇಶನ್ ಅನ್ನು ಉಲ್ಲೇಖಿಸಿದ್ದು, ಪ್ರವೇಶ ಪ್ರಕ್ರಿಯೆಯ ಎರಡನೇ ಕೌನ್ಸಿಲಿಂಗ್‍ನಲ್ಲಿ 2018ರ ಪಿಎಚ್‍ಡಿ ರೆಗ್ಯುಲೇಶನ್ ಅನ್ನು ಅನುಸರಿಸಲಾಗಿದೆ. ಆದರೆ ರೆಗ್ಯುಲೇಶನ್ ಪ್ರಕಾರ ಪಿಎಚ್‍ಡಿ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಬೇಕಾದ ವಿವಿಯ ಮೌಲ್ಯಮಾಪನ ಕುಲಸಚಿವ ಡಾ. ದೇವರಾಜು ಅದ್ಯಾವ ಅಂಕಗಳನ್ನು ಪರಿಗಣಿಸಿ ಶೇ.45ಕ್ಕೆ ಇಳಿಸಿದ್ದಾರೆ ಎಂದು ಬಹಿರಂಗಪಡಿಸಲಿ. ಏಕೆಂದರೆ ಇದು ಪಿಎಚ್‍ಡಿ ಆಕಾಂಕ್ಷಿಗಳ ಕುತೂಹಲವಾಗಿದೆ. ನನಗೆ ಎರಡನೆ ಸುತ್ತಿನ ಕೌನ್ಸಿಲಿಂಗ್‍ನಲ್ಲಿ ದಾಖಲೆಗಳನ್ನು ಪರಿಶೀಲಿಸಿ, ಸೀಟು ಹಂಚಿಕೆ ಮಾಡಿದ್ದರೂ, ನಾನು ಅನರ್ಹ ಎಂದು ಸೀಟನ್ನು ಹಿಂಪಡೆದಿದ್ದಾರೆ. ನಾನು ವಿಕಚೇತನ ಅಭ್ಯರ್ಥಿಯಾಗಿದ್ದು, ಖಾಲಿಯಿರುವ ಅಂಗವಿಕಲ ಕೋಟ ಸೀಟನ್ನು ನನಗೆ ನೀಡಿ.  

-ಶಿವಣ್ಣ, ಪಿಎಚ್‍ಡಿ ಆಕಾಂಕ್ಷಿ, ಅರ್ಥಶಾಸ್ತ್ರ ವಿಭಾಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News