ಇನ್ನಷ್ಟು ಇಂಗ್ಲಿಷ್ ಕಲಿಯಲು ಪ್ರಚೋದಿಸುವ ‘ನೊ ಮೋರ್ ಇಂಗ್ಲಿಷ್’

Update: 2021-12-13 05:49 GMT

ನೋಮೋರ್ ಇಂಗ್ಲಿಷ್’ ಕೃತಿಯ ಶೀರ್ಷಿಕೆಯಿಂದ ಕೆಲವು ವಿದ್ಯಾರ್ಥಿಗಳು ಮೋಸ ಹೋಗಿ ಸದ್ಯ ಇನ್ನು ಇಂಗ್ಲಿಷ್ ಎನ್ನುವ ತರಲೆ ಇಲ್ಲ ಎಂದು ‘ನೋ ಮೋರ್’ ಘೋಷಣೆ ಕೂಗುವ ಮೊದಲು ಅದು ‘Know More English' ಅಂದರೆ ಇಂಗ್ಲಿಷ್ ಬಗ್ಗೆ ಇನ್ನೂ ಹೆಚ್ಚು ಅರಿಯಿರಿ ಎಂದು ಹೇಳುವ ಕೃತಿಯಿದು ಎಂದು ಹೇಳಿಬಿಡುವುದು ಸೂಕ್ತ. ಇಂಗ್ಲಿಷ್ ಭಾಷೆಯ ಬಗ್ಗೆ ನಾವು ಭಾರತೀಯರು ಶತಮಾನಗಳಿಂದ ವಿರೋಧಾಭಾಸದ ಧೋರಣೆಯನ್ನು ಹೊಂದಿದ್ದೇವೆ. ಒಂದು ಕಡೆ ಅದು ಅಧಿಕಾರದ ಭಾಷೆ, ಅವಕಾಶಗಳ ಭಾಷೆ ಮತ್ತು ಸಮಾಜದಲ್ಲಿ ಹೆಗ್ಗಳಿಕೆ ತರುವ ಭಾಷೆ ಎಂದು ಅದನ್ನು ಬಯಸುತ್ತೇವೆ. ಇನ್ನೊಂದು ಕಡೆ ಅದು ಕನ್ನಡದ ಸ್ಥಾನವನ್ನು ಕಸಿದುಕೊಳ್ಳುತ್ತಿದೆ, ಸಮಾಜದಲ್ಲಿ ಇನ್ನೊಂದು ಪ್ರಬಲವಾದ ಜಾತಿ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ, ಅದು ಕಲಿಕೆಯ ಮಾಧ್ಯಮವಾಗಿರಬಾರದು ಎಂದು ತಿರಸ್ಕರಿಸುತ್ತೇವೆ. ಈ ಇಬ್ಬಂದಿತನದಿಂದಾಗಿ ಇಂಗ್ಲಿಷ್ ಕಲಿಯುವುದರಲ್ಲಿ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅನೇಕ ವಿದ್ವಾಂಸರು, ಬರಹಗಾರರು ಇಂಗ್ಲಿಷ್ ಈಗ ಭಾರತೀಯ ಭಾಷೆಗಳಲ್ಲಿ ಒಂದು ಎಂದು ಹೇಳುತ್ತಿದ್ದಾರೆ.

ಈ ಕೃತಿಯು ತುಂಬಾ ಲವಲವಿಕೆ ಹಾಗೂ ಆಕರ್ಷಕ ಶೈಲಿಯನ್ನು ಬಳಸಿಕೊಂಡು ಇಂಗ್ಲಿಷ್ ಭಾಷೆಯ ಕೆಲವು ವಿಶಿಷ್ಟ ಸಂಗತಿಗಳ ಬಗ್ಗೆ ವಿವರಗಳನ್ನು ನೀಡುತ್ತದೆ. ವಿಶೇಷವಾಗಿ ಇಂಗ್ಲೆಂಡ್ ತನ್ನ ವಸಾಹತುಶಾಹಿ ಪ್ರಾಬಲ್ಯದಿಂದ ಜಗತ್ತಿನ ಅನೇಕ ಸಮಾಜಗಳ ಸಂಪರ್ಕವನ್ನು ಪಡೆಯಿತು. ಹೀಗಾಗಿ ಇಂಗ್ಲಿಷ್ ಭಾಷೆಯ ಅನೇಕ ಪದಗಳ ಹಿಂದೆ ಕುತೂಹಲಕಾರಿ ಚರಿತ್ರೆ ಇದೆ. ಇಂಥ ಅನೇಕ ಮಾಹಿತಿಗಳು ಈ ಕೃತಿಯಲ್ಲಿವೆ. ಹಗುರವಾಗಿ, ಆಕರ್ಷಕವಾಗಿ ಉಪಯುಕ್ತವಾದ ಮಾಹಿತಿಯನ್ನು ಇಂಗ್ಲಿಷ್ ಬಗ್ಗೆ ನೀಡುತ್ತದೆ. ಇಂಗ್ಲಿಷ್ ಕಲಿಯುವವರಿಗೆ ಮಾತ್ರವಲ್ಲ, ಭಾಷೆಗಳ ಬಗ್ಗೆ ಕುತೂಹಲವಿರುವ ಎಲ್ಲರೂ ಈ ಕೃತಿಯನ್ನು ಖುಷಿಯಿಂದ ಓದಬಹುದು. ಸಾವನ್ನಾ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 224. ಮುಖಬೆಲೆ 225 ರೂ. ಆಸಕ್ತರು 90363 12786 ಮತ್ತು 80412 29757 ದೂರವಾಣಿಯನ್ನು ಸಂಪರ್ಕಿಸಬಹುದು.

- ಪ್ರೊ. ರಾಜೇಂದ್ರ ಚೆನ್ನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News