ರೋಗಿಗಳ ಹಕ್ಕುಗಳನ್ನು ಕಾಪಾಡಲು ವಿಫಲವಾದರೆ ಆರೋಗ್ಯ ರಕ್ಷಣೆ ಕರಡು ಮಸೂದೆ ನಿಷ್ಪ್ರಯೋಜಕವಾಗಲಿದೆ

Update: 2021-12-14 13:20 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.14: ವಿನಾಶಕಾರಿ ಕೋವಿಡ್ ಎರಡನೇ ಅಲೆಯು ಭಾರತದ ಆರೋಗ್ಯ ರಕ್ಷಣೆ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳನ್ನು ತೋರಿಸಿದ್ದು ಮಾತ್ರವಲ್ಲ,ಅದನ್ನು ಕೈಗೆಟಕಿಸಿಕೊಳ್ಳುವಲ್ಲಿ ರೋಗಿಗಳಿಗೆ ದುರ್ಬಲ ಕಾನೂನು ರಕ್ಷಣೆಯನ್ನೂ ಬೆಟ್ಟು ಮಾಡಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ತಾರತಮ್ಯ ರಹಿತ ಚಿಕಿತ್ಸೆ ಅಥವಾ ಅಧಿಕ ಶುಲ್ಕದ ವಿರುದ್ಧ ರಕ್ಷಣೆಯಂತಹ ಸ್ಪಷ್ಟವಾದ ಹಕ್ಕುಗಳಿಲ್ಲದೆ ತಮ್ಮನ್ನು ರಕ್ಷಿಸಿಕೊಳ್ಳುವ ಹೋರಾಟವನ್ನು ಜನರಿಗೇ ಬಿಡಲಾಗಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2018,ಆಗಸ್ಟ್ ನಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಶಿಫಾರಸುಗಳನ್ನೊಳಗೊಂಡಿದ್ದ ಭಾರತದ ಮೊಟ್ಟಮೊದಲ ರೋಗಿಗಳ ಹಕ್ಕುಗಳ ಸನ್ನದನ್ನು ಬಿಡುಗಡೆಗೊಳಿಸಿತ್ತು. ಇದರಲ್ಲಿ ರೋಗಿಗಳ 13 ಹಕ್ಕುಗಳನ್ನು ಪ್ರಸ್ತಾಪಿಸಲಾಗಿತ್ತು. 2019,ಜೂನ್ನಲ್ಲಿ ಸನ್ನದನ್ನು ಅಳವಡಿಸಿಕೊಳ್ಳುವಂತೆ ಕೋರಿಕೊಂಡು ರಾಜ್ಯ ಸರಕಾರಗಳಿಗೆ ಪತ್ರ ಬರೆದಿತ್ತು. ಅಲ್ಲಿಂದೀಚೆಗೆ ಎರಡು ವರ್ಷಗಳು ಕಳೆದಿವೆ,ಆದರೆ ಯಾವುದೇ ಗಮನಾರ್ಹ ಕ್ರಮವನ್ನು ಕೈಗೊಳ್ಳಲಾಗಿಲ್ಲ. 

ಸನ್ನದು ಮತ್ತು ಸಂಬಂಧಿತ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳು ರಾಜ್ಯಗಳ ವಿಷಯಗಳಾಗಿವೆ ಎಂದು ಕೇಂದ್ರ ಸರಕಾರವು ಸಂಸತ್ತಿನಲ್ಲಿ ನಿರಂತರವಾಗಿ ಪುನರುಚ್ಚರಿಸುತ್ತಲೇ ಬಂದಿದೆ. ಜುಲೈನಲ್ಲಿ ರೋಗಿಗಳ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳು ಮತ್ತು ನಿಬಂಧನೆಗಳ ಅನುಷ್ಠಾನದಲ್ಲಿ ಲೋಪವನ್ನು ಗುರುತಿಸಿದ್ದ ಭಾರತದ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಅವರು ರೋಗಿಗಳ ಹಕ್ಕುಗಳ ಸನ್ನದಿನ ಅನುಷ್ಠಾನದ ಸ್ಥಿತಿಗತಿಯ ಕುರಿತು ಕೇಂದ್ರ ಸರಕಾರಕ್ಕೆ ನೋಟಿಸನ್ನು ಹೊರಡಿಸಿದ್ದರು.

ಆದಾಗ್ಯೂ ಈ ನೋಟಿಸಿಗೆ ಉತ್ತರವನ್ನು ಸಲ್ಲಿಸಲಾಗಿಲ್ಲ. ರೋಗಿಗಳ ಹಲವಾರು ಹಕ್ಕುಗಳು ಮತ್ತು ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಉಲ್ಲೇಖಿಸಲಾಗಿರುವ ಕೇಂದ್ರ ಸರಕಾರದ ಕರಡು ಆರೋಗ್ಯ ಮತ್ತು ಆರೋಗ್ಯ ರಕ್ಷಣೆ ಹಕ್ಕುಗಳ ಮಸೂದೆ, 2021ರ ಬಗ್ಗೆ ಕಳೆದ ಅಕ್ಟೋಬರ್ನಲ್ಲಿ ಹಲವಾರು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಆರೋಗ್ಯ ರಕ್ಷಣೆಯನ್ನು ಒದಗಿಸುವವರು ಮತ್ತು ರೋಗಿಗಳ ನಡುವೆ ವರ್ಗ,ಜಾತಿ,ಧರ್ಮ ಮತ್ತು ಲಿಂಗಗಳಿಗೆ ಸಂಬಂಧಿಸಿದಂತೆ ತಾರತಮ್ಯದಿಂದಾಗಿ ರೋಗಿಗಳ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವ ಯಾವುದೇ ಸದೃಢವಾದ ನಿಬಂಧನೆಗಳ ಕೊರತೆಯು ಇಲ್ಲಿಯೂ ಮುಂದುವರಿದಿದೆ ಎನ್ನುವುದನ್ನು ಆಕ್ಸ್ಫಾಮ್ ಇಂಡಿಯಾ ನಡೆಸಿರುವ ರಾಷ್ಟ್ರವ್ಯಾಪಿ ಸಮೀಕ್ಷೆಯು ತೋರಿಸಿದೆ.
 
ಶೇ.35ರಷ್ಟು ಮಹಿಳೆಯರು ಕೊಠಡಿಯಲ್ಲಿ ಇನ್ನೋರ್ವ ಮಹಿಳೆಯ ಅನುಪಸ್ಥಿತಿಯಲ್ಲಿ ಪುರುಷ ವೈದ್ಯರಿಂದ ದೈಹಿಕ ತಪಾಸಣೆಗೆ ಒಳಪಡಬೇಕಿತ್ತು ಎನ್ನುವುದನ್ನು ಸಮೀಕ್ಷೆಯು ತೋರಿಸಿದ್ದು,ಇದು ರೋಗಿಗಳ ಹಕ್ಕುಗಳ ಉಲ್ಲಂಘನೆಯಾಗಿದೆ. ಇದೇ ರೀತಿ ತಮ್ಮ ಧರ್ಮ ಅಥವಾ ಜಾತಿಯಿಂದಾಗಿ ತಾವು ಆಸ್ಪತ್ರೆಗಳಲ್ಲಿ ಆರೋಗ್ಯ ವೃತ್ತಿಪರರಿಂದ ತಾರತಮ್ಯವನ್ನು ಅನುಭವಿಸಬೇಕಾಗಿತ್ತು ಎಂದು ಸಮೀಕ್ಷೆಗೊಳಗಾದ ಶೇ.33ರಷ್ಟು ಮುಸ್ಲಿಮರು ಮತ್ತು ಶೇ.20ಕ್ಕೂ ಅಧಿಕ ದಲಿತರು ಮತ್ತು ಆದಿವಾಸಿಗಳು ನೋವು ತೋಡಿಕೊಂಡಿದ್ದಾರೆ. ಶೇ.15ರಷ್ಟು ಇತರ ಹಿಂದುಳಿದ ವರ್ಗಗಳಿಗೆ ಸೇರಿದವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪರೀಕ್ಷೆಗಳು ಮತ್ತು ರೋಗನಿರ್ಣಯ ತಪಾಸಣೆಗಳನ್ನು ನಿರ್ದಿಷ್ಟ ಕಡೆಯಲ್ಲಿಯೇ ಮಾಡಿಸುವಂತೆ ತಮಗೆ ಸೂಚಿಸಲಾಗಿತ್ತು ಎಂದು ಸಮೀಕ್ಷೆಗೊಳಪಟ್ಟವರಲ್ಲಿ ಶೇ.80 ರಷ್ಟು ಜನರು ಹೇಳಿದ್ದಾರೆ. ಈ ಪರಿಪಾಠವೂ ರೋಗಿಗಳ ಕೈಗೆಟಕುವ ಆಯ್ಕೆಯ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಇದರಿಂದಾಗಿ ಅವರು ಹೆಚ್ಚುವರಿ ಹಣವನ್ನು ವ್ಯಯಿಸಬೇಕಾಗುತ್ತದೆ.

ಖಾಸಗಿ ಆಸ್ಪತ್ರೆಗಳು ನೀಡುವ ಬಿಲ್ಗಳು ಮತ್ತು ರೇಟ್ ಕಾರ್ಡ್ಗಳಲ್ಲಿ ಪಾರದರ್ಶಕತೆಯ ಕೊರತೆಯು ವೆಚ್ಚಗಳು ಹೆಚ್ಚಲು ಇನ್ನೊಂದು ಕಾರಣವಾಗಿದೆ. ಚಿಕಿತ್ಸೆ ಆರಂಭಿಸುವುದಕ್ಕೆ ಮುನ್ನ ತಮಗೆ ಚಿಕಿತ್ಸೆಯ ಅಂದಾಜು ವೆಚ್ಚದ ಬಗ್ಗೆ ತಿಳಿಸಿರಲಿಲ್ಲ ಎಂದು ಶೆ.58ರಷ್ಟು ಮತ್ತು ತಾವು ಕೋರಿಕೊಂಡಿದ್ದರೂ ತಮಗೆ ಕೇಸ್ ಪೇಪರ್ಗಳು ಮತ್ತು ಇತರ ದಾಖಲೆಗಳನ್ನು ನಿರಾಕರಿಸಲಾಗಿತ್ತು ಎಂದು ಶೇ.31ರಷ್ಟು ಜನರು ಹೇಳಿದ್ದಾರೆ.
 
ಸಾಂಕ್ರಾಮಿಕದ ಅವಧಿಯು ಖಾಸಗಿ ಆಸ್ಪತ್ರೆಗಳು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಬಿಲ್ಗಳನ್ನು ಪಾವತಿಸದ್ದಕ್ಕೆ ಮೃತ ಶರೀರಗಳನ್ನು ‘ಒತ್ತೆ’ಯಾಗಿ ಇರಿಸಿಕೊಂಡಿದ್ದ ಹಲವಾರು ಪ್ರಕರಣಗಳಿಗೆ ಸಾಕ್ಷಿಯಾಗಿತ್ತು. ಇದು ಬಡವರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರಿತ್ತು ಎನ್ನುವುದನ್ನು ಸಮೀಕ್ಷೆಯು ತೋರಿಸಿದೆ. ಮೃತಪಟ್ಟಿದ್ದ ತಮ್ಮ ಸಂಬಂಧಿಗಳ ಶವಗಳನ್ನು ತಮಗೆ ಹಸ್ತಾಂತರಿಸಲು ಆಸ್ಪತ್ರೆಗಳು ನಿರಾಕರಿಸಿದ್ದವು ಎಂದು ಶೇ.19ರಷ್ಟು ಜನರು ತಿಳಿಸಿದ್ದಾರೆ.
 
ಸರಕಾರವು ಪ್ರಸ್ತಾವಿಸಿರುವ ಆರೋಗ್ಯ ರಕ್ಷಣೆ ಕರಡು ಮಸೂದೆ ಸ್ವಾಗತಾರ್ಹ ಕ್ರಮವಾಗಿದೆ. ಆದರೆ,ಆರೋಗ್ಯ ಸಚಿವಾಲಯದ ಹಾಲಿ ನಿಯಮಗಳು ಮತ್ತು ನಿಬಂಧನೆಗಳು ರೋಗಿಗಳ ಹಕ್ಕುಗಳನ್ನು ರಕ್ಷಿಸುತ್ತವೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವುದು ಮಹತ್ವದ್ದಾಗಿದೆ. ಇದನ್ನು ಮಾಡದಿದ್ದರೆ ಹೊಸ ಮಸೂದೆಯು ನಿಷ್ಪರಿಣಾಮಕಾರಿಯಾಗುವದು ಮಾತ್ರವಲ್ಲ,ದೇಶದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸುವ ಅಪಾಯವೂ ಇದೆ.

Scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News