ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿ ಅಶ್ಲೀಲ ಸಂದೇಶ: ಬಿಂದುಗೌಡ ದೂರು
ಬೆಂಗಳೂರು, ಡಿ.14: ಖಾತೆಯನ್ನು ಹ್ಯಾಕ್ ಮಾಡಿ, ಅಶ್ಲೀಲ ಸಂದೇಶ ರವಾನಿಸುತ್ತಿರುವ ದುಷ್ಕರ್ಮಿಗಳ ವಿರುದ್ಧ ಕಾಂಗ್ರೆಸ್ ನಾಯಕಿ ಬಿಂದುಗೌಡ ಇಲ್ಲಿನ ದಕ್ಷಿಣ ವಿಭಾಗದ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು, ದಾಖಲೆ ಸಮೇತ ದೂರು ಸಲ್ಲಿಸಿದರು.ದೂರಿನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಂದುಗೌಡ, ದುಷ್ಕರ್ಮಿಗಳು ಉದ್ದೇಶ ಪೂರ್ವಕವಾಗಿಯೇ ನನ್ನ ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿ, ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಪ್ರಕಟಿಸುತ್ತಿದ್ದಾರೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದರು.
ಇನ್ನೂ, ನನ್ನ ಫೇಸ್‌ಬುಕ್ ಪುಟದಲ್ಲಿ ಐವತ್ತು ಸಾವಿರಕ್ಕೂ ಅಧಿಕ ಸಕ್ರಿಯ ನೋಡಗರಿದ್ದಾರೆ. ಸಮಾಜಮುಖಿ ಚಟುವಟಿಕೆಗಳ ಕುರಿತು ಹಾಗೂ ಬಿಜೆಪಿ ಆಡಳಿತ ನೀತಿಗಳ ವಿರುದ್ಧ ಧ್ವನಿಗೂಡಿಸುವ ಸಂದೇಶಗಳನ್ನು ಹಾಕುತ್ತಿದ್ದೇನೆ. ಇದಕ್ಕಾಗಿಯೇ ಹ್ಯಾಕ್ ಮಾಡಿರಬಹುದು ಎನ್ನುವ ಶಂಕೆಯೂ ಇದೆ ಎಂದು ಆರೋಪಿಸಿದ ಅವರು, ಈ ಸಂಬಂಧ ರಾಜ್ಯ ಮಹಿಳಾ ಆಯೋಗಗಕ್ಕೂ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.