ಅನಧಿಕೃತ ಕಟ್ಟಡಗಳ ಒತ್ತುವರಿ ತೆರವು: ವರ್ಷದೊಳಗೆ ಮೇಲ್ಮನವಿ ಇತ್ಯರ್ಥಪಡಿಸಿ: ಹೈಕೋರ್ಟ್
Update: 2021-12-17 00:26 IST
ಬೆಂಗಳೂರು, ಡಿ.16: ನಗರದಲ್ಲಿರುವ ಅನಧಿಕೃತ ಕಟ್ಟಡಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಬಿಬಿಎಂಪಿ ಹೊರಡಿಸಿರುವ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗಳನ್ನು ವರ್ಷದೊಳಗೆ ಇತ್ಯರ್ಥಪಡಿಸುವಂತೆ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಕೋರಮಂಗಲದ ಶಿವಪ್ರಸಾದ್ ನಾವಡ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಕೆಎಂಸಿ ಕಾಯ್ದೆ-1976ರ ಸೆಕ್ಷನ್ 321 ಅಥವಾ ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 248ರ ಅನುಸಾರ ಅನಧಿಕೃತ ಕಟ್ಟಡ ತೆರವಿಗೆ ನೀಡಿರುವ ನೋಟಿಸ್‍ಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಗಳನ್ನು ನ್ಯಾಯಮಂಡಳಿ 9 ತಿಂಗಳಿಂದ 1 ವರ್ಷದೊಳಗೆ ಇತ್ಯರ್ಥಪಡಿಸಬೇಕು.
ವಿಳಂಬ ಮಾಡಿ, ಪ್ರಕರಣವನ್ನು ಬಾಕಿ ಉಳಿಸುವುದು ಸರಿಯಲ್ಲ. ಶೀಘ್ರ ಮೇಲ್ಮನವಿಗಳನ್ನು ಇತ್ಯರ್ಥಪಡಿಸಬೇಕು ಎಂದು ಹೇಳಿದೆ.