ಗೋವಾ ಬಿಜೆಪಿಗೆ ಶಾಕ್ : ಪಕ್ಷಕ್ಕೆ ರಾಜೀನಾಮೆ ನೀಡಿ ಆಮ್ ಆದ್ಮಿ ಪಾರ್ಟಿ ಸೇರಿದ ಶಾಸಕಿ

Update: 2021-12-17 01:41 GMT

ಪಣಜಿ: ಗೋವಾದ ಮಾಜಿ ಸಚಿವೆ ಮತ್ತು ಎರಡು ಬಾರಿಯ ಶಾಸಕಿ ಅಲಿನಾ ಸಲ್ದಾನಾ ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಮ್ ಆದ್ಮಿ ಪಾರ್ಟಿ ಸೇರಿದ್ದಾರೆ. ಇದು ರಾಜ್ಯ ಬಿಜೆಪಿ ಪಾಲಿಗೆ ಆಘಾತಕಾರಿ ಬೆಳವಣಿಗೆಯಾಗಿದೆ.

ಪ್ರಸಕ್ತ ವಿಧಾನಸಭಾ ಅವಧಿಯಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಮೊದಲ ಶಾಸಕಿ ಇವರಾಗಿದ್ದಾರೆ. ಈ ಬೆಳವಣಿಗೆಗೆ ಕ್ಷಿಪ್ರವಾಗಿ ಸ್ಪಂದಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಸದಾನಂದ ಶೇಟ್ ತಾನಾವಡೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಸಲ್ದಾನಾ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದಾರೆ. "ಶಾಸಕಿ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಲಾಗುವುದು" ಎಂದು ಪ್ರಕಟಿಸಿದ್ದಾರೆ.

ರವಿವಾರ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಕಾರ್ಯಕ್ರಮವಿದ್ದು, ಈ ಸಂಬಂಧ ಕಾರ್ಯಯೋಜನೆಗಳನ್ನು ರೂಪಿಸಲು ಬುಧವಾರ ಸಂಜೆ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದ ಸಲ್ಡಾನಾ, ಸ್ಪೀಕರ್ ಕಚೇರಿಗೆ ಯಾವುದೇ ಮಾಹಿತಿ ನೀಡದೇ ತಮ್ಮ ರಾಜೀನಾಮೆ ಪತ್ರವನ್ನು ಶಾಸಕಾಂಗ ಕಾರ್ಯದರ್ಶಿಗಳಿಗೆ ನೀಡಿದ್ದಾರೆ. ಸ್ಪೀಕರ್ ರಾಜೇಶ್ ಪಠಾಣ್‌ ಕರ್ ಇನ್ನೂ ರಾಜೀನಾಮೆಯನ್ನು ಸ್ವೀಕರಿಸಿಲ್ಲ.

"ಮೌಲಿಕ ಕಾರಣಕ್ಕಾಗಿ ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷ ಬಹುಶಃ ಎಲ್ಲ ತತ್ವಗಳನ್ನು ಮರೆತಿದೆ ಹಾಗೂ ರಾಜ್ಯದ ಸ್ಥಿತಿ ದಯನೀಯವಾಗಿದೆ. ಪಕ್ಷಕ್ಕೆ ಯಾರು ಬರುತ್ತಿದ್ದಾರೆ ಹಾಗೂ ಪಕ್ಷದಿಂದ ಯಾರು ಹೊರಹೋಗುತ್ತಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ" ಎಂದು ಸಲ್ದಾನಾ ಹೇಳಿದ್ದಾರೆ.

ಮೊಲ್ಲೆಮ್ ಜೀವವೈವಿಧ್ಯ ತಾಣದ ಮೂಲಕ ಹಾದು ಹೋಗುವ ಮೂರು ಪ್ರಮುಖ ಯೋಜನೆಗಳನ್ನು ಹಾಗೂ ತಮ್ಮ ಕ್ಷೇತ್ರದ ಮೂಲಕ ಹಾದು ಹೋಗುವ ರೈಲು ಹಳಿ ದ್ವಿಗುಣ ಯೋಜನೆಯನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಸಲ್ದಾನಾ ಮುಂಚೂಣಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News