ಮಧುಕರ್ ಶೆಟ್ಟಿ ನೆನಪಿಗಾಗಿ ಭ್ರಷ್ಟಾಚಾರ ವಿರೋಧಿ ದಿನ ಜಾರಿಯಾಗಲಿ: ನ್ಯಾ.ಎನ್.ಕೆ.ಸುಧೀಂದ್ರರಾವ್
ಬೆಂಗಳೂರು, ಡಿ.17: ಐಪಿಎಸ್ ಅಧಿಕಾರಿ ಡಾ.ಕೆ.ಮಧುಕರ್ ಶೆಟ್ಟಿ ಅವರು ಮಾನವೀಯತೆ ಮತ್ತು ಪ್ರ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದರು. ಅವರ ನೆನಪಿಗಾಗಿ ಈ ದಿನವನ್ನು ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸುವ ಅವಶ್ಯಕತೆ ಇದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರರಾವ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಅಭಿಮಾನಿಗಳು ಹಾಗೂ ಸಹೋದ್ಯೋಗಿಗಳು ಆಯೋಜಿಸಿದ್ದ ಡಾ.ಕೆ.ಮಧುಕರ ಶೆಟ್ಟಿ ಅವರಿಗೆ ಪುಷ್ಪ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹೊಸ ವರ್ಷದ ದಿನಾಚರಣೆ, ಬ್ರದರ್ಸ್ ಡೇ, ಪರಿಸರ ದಿನ ಹೀಗೇ ಹಲವು ದಿನಾಚರಣೆಗಳನ್ನು ಆಚರಿಸುತ್ತೇವೆ. ಅದೇ ರೀತಿಯಾಗಿ ಡಾ.ಕೆ.ಮಧುಕರ್ ಶೆಟ್ಟಿ ಅವರ ನೆನಪಿಗಾಗಿ ಈ ದಿನವನ್ನು ಭ್ರಷ್ಟಾಚಾರ ವಿರೋಧಿ ದಿನವನ್ನಾಗಿ ಆಚರಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಸಮಾಜದ ಬಗ್ಗೆ ಬಹಳಷ್ಟು ಗೌರವವನ್ನಿಟ್ಟುಕೊಂಡಿದ್ದ ಮಧುಕರ್ ಶೆಟ್ಟಿ ಅವರು ಲೋಕಾಯುಕ್ತದಲ್ಲಿ ಎಸ್ಪಿ ಆಗಿದ್ದಾಗ ಸದ್ದು ಗದ್ದಲವಿಲ್ಲದೇ ಸೇವೆ ಸಲ್ಲಿಸಿದ್ದರು. ಭ್ರಷ್ಟರಿಗೆ ಶಿಕ್ಷೆ ಆಗುವತ್ತ ಗಮನ ಹರಿಸುತ್ತಿದ್ದರು. ಇಂತಹ ಅಧಿಕಾರಿಗಳು ಸಿಗುವುದೇ ಅಪರೂಪವಾಗಿದೆ ಎಂದರು.
ಜಾತಿ ಮತ್ತು ಭ್ರಷ್ಟಾಚಾರ ಇವು ಎರಡೂ ಕ್ಯಾನ್ಸರ್ ಇದ್ದ ಹಾಗೆ. ಇವುಗಳಿಗೆ ಬೇಗ ಚಿಕಿತ್ಸೆ ನೀಡದಿದ್ದರೆ ಸಮಾಜಕ್ಕೆ ಹಾನಿಯೇ ಹೆಚ್ಚು ಎಂದ ಅವರು, ಶೆಟ್ಟಿ ಅವರು ಪ್ರತಿ ಕೆಲಸವನ್ನು ಶ್ರದ್ಧೆ ಮತ್ತು ಕಾಳಜಿಯಿಂದ ಮಾಡುತ್ತಿದ್ದರು ಎಂದು ಹೇಳಿದರು.
ಐಎಎಸ್ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಮಾತನಾಡಿ, ಮಧುಕರ್ ಶೆಟ್ಟಿ ಅವರಲ್ಲಿ ಸ್ಫೂರ್ತಿದಾಯಕ ವ್ಯಕ್ತಿತ್ವವನ್ನು ಹೊಂದಿದ್ದರು. ಹಿಡಿದ ಕೆಲಸವನ್ನು ಗುರಿ ಮುಟ್ಟುವತನಕ ಅವರು ನಿಲ್ಲಿಸುತ್ತಿರಲಿಲ್ಲ ಎಂದರು.
ಐಎಸ್‍ಡಿ ವಿಭಾಗದ ಎಡಿಜಿಪಿ ಅರುಣ್ ಜೆ. ಚಕ್ರವರ್ತಿ ಮಾತನಾಡಿ, ಮಧುಕರ್ ಶೆಟ್ಟಿ ಅವರು ನ್ಯಾಷನಲ್ ಕಾಲೇಜಿನಿಂದಲೇ ನನಗೆ ಸ್ನೇಹಿತರಾಗಿದ್ದರು. ಯಾವುದೇ ವಿಷಯವನ್ನು ಆಗಲಿ ಆಳಕ್ಕೆ ಇಳಿದು ಮಾಹಿತಿಯನ್ನು ಸಂಗ್ರಹಿಸುತ್ತಿದ್ದರು. ಆ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯುತ್ತಿದ್ದರು ಎಂದು ಹೇಳಿದರು.
ಮಧುಕರ್ ಶೆಟ್ಟಿ ಅವರ ಅಭಿಮಾನಿ ವರ್ಗವೇ ಇತ್ತು. ಆ ವರ್ಗ ಸೃಷ್ಟಿಯಾಗಲು ಅವರಲ್ಲಿದ್ದ ಸರಳತೆ ಹಾಗೂ ಪ್ರಾಮಾಣಿಕತೆಯೇ ಕಾರಣ ಎಂದು ಹೇಳಿದರು.
ಐಪಿಎಸ್ ಅಧಿಕಾರಿ ಅಬ್ದುಲ್ ಅಹದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರ ಸಂಪಾದನೆಯ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಬರಹಗಳ ‘ಬೇರೆಯೇ ಮಾತು’ ಕೃತಿ ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮಧುಕರ್ ಶೆಟ್ಟಿ ಅವರ ಆಪ್ತ ಸ್ನೇಹಿತರು, ಕುಟುಂಬ ವರ್ಗದವರು ಉಪಸ್ಥಿತರಿದ್ದರು.