×
Ad

ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ: ಡಿ.20ರಂದು ಕೈಗಾರಿಕೆಗಳ ಬಂದ್‍ಗೆ ಕರೆ

Update: 2021-12-17 23:05 IST

ಬೆಂಗಳೂರು, ಡಿ.17: ಕಚ್ಚಾ ವಸ್ತುಗಳ ಬೆಲೆ ಏರಿಕೆ ಖಂಡಿಸಿ ದೇಶವ್ಯಾಪಿ ಕೈಗಾರಿಕೆಗಳನ್ನು ಬಂದ್ ಮಾಡಿ ಸೋಮವಾರ ಸಾಂಕೇತಿಕ ಪ್ರತಿಭಟನೆ ನಡೆಸಲಾಗುವುದು ಎಂದು ಪೀಣ್ಯ ಕೈಗಾರಿಕಾ ಸಂಘದ ನೂತನ ಅಧ್ಯಕ್ಷ ಮುರಳಿಕೃಷ್ಣ ಬಿ. ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಟೀಲ್ ತಯಾರಕರು ಹಾಗೂ ವರ್ತಕರ ಲಾಬಿಯಿಂದ ಕಚ್ಚಾ ಸಾಮಗ್ರಿಗಳ ಬೆಲೆ ಗಗನಮುಖಿಯಾಗಿದೆ. ಬೇಡಿಕೆ ಕಡಿಮೆ ಇದ್ದರೂ ಸ್ಟೀಲ್ ಕಂಪೆನಿಗಳು ಹತ್ತಾರು ಸಾವಿರ ಕೋಟಿ ಲಾಭಾಂಶ ಪ್ರಕಟಿಸಿವೆ ಇದೆಲ್ಲಾ ಹೇಗೆ ಸಾಧ್ಯ ಎಂದು ಹರಿಹಾಯ್ದರು.

ಕಾರ್ಯಾದೇಶವನ್ನು ಪಡೆದು ಉತ್ಪನ್ನಗಳನ್ನು ಪೂರೈಸುವ ಮೊದಲೇ ಹಲವು ಸಲ ಕೈಗಾರಿಕಾ ಕಚ್ಚಾ ವಸ್ತುಗಳ ಬೆಲೆ ಶೇ.40 ರಿಂದ 60 ರಷ್ಟು ಹೆಚ್ಚಳವಾಗುತ್ತಿವೆ. ಪರಿಣಾಮ ಕೈಗಾರಿಕೆಗಳು ವಿಪರೀತ ನಷ್ಟಕ್ಕೆ ಈಡಾಗಿದ್ದು ಮುಚ್ಚಿ ಹೋಗುವ ಆತಂಕ ಎದುರಾಗಿದೆ ಎಂದರು.

ಈ ನಿಟ್ಟಿನಲ್ಲಿ ಅಖಿಲ ಭಾರತ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಒಕ್ಕೂಟದ ಕರೆಯ ಮೇರೆಗೆ ಪೀಣ್ಯ ಸೇರಿ 170 ಕೈಗಾರಿಕೆ ಸಂಘಗಳು ಇದೇ 20 ರಂದು ಸೋಮವಾರ ದೇಶಾದ್ಯಂತ ಒಂದು ದಿನದ ಸಾಂಕೇತಿಕ ಪ್ರತಿಭಟನೆಯಲ್ಲಿ ನಡೆಸಲಿವೆ ಎಂದು ತಿಳಿಸಿದರು.

ಕಳೆದೆರಡು ವರ್ಷಗಳಿಂದ ಮಹಾಮಾರಿ ಕೊರೋನ ಹೊಡೆತಕ್ಕೆ ಅಸಂಖ್ಯ ಕೈಗಾರಿಕೆಗಳು ಮುಚ್ಚಿಹೋಗಿವೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳು ರೋಗಗ್ರಸ್ತವಾಗಿವೆ. ಹೀಗಾಗಿ, ಭಾರತೀಯ ಸ್ಟೀಲ್ ಪ್ರಾಧಿಕಾರ ಕೈಗಾರಿಕಾ ಕಚ್ಚಾ ವಸ್ತುಗಳ ಬೆಲೆಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರ ಆಮದು ಸುಂಕ ಕಡಿತಗೊಳಿಸಿ ಕಚ್ಚಾವಸ್ತುಗಳ ರಫ್ತು ರದ್ದುಗೊಳಿಸಿ ಎಂಎಸ್‍ಎಂಇ ಉಳಿವಿಗೆ ಮುಂದಾಗುವಂತೆ ಮನವಿ ಮಾಡಿದರು. ಪೀಣ್ಯ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಕಾರ್ಯ ಕಾರ್ಯನಿರ್ವಹಿಸುತ್ತಿರುವ ಸುಮಾರು 16 ಸಾವಿರ ಕೈಗಾರಿಕೆಗಳು ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುತ್ತಿರುವುದಲ್ಲದೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ವಾರ್ಷಿಕ 3200 ಕೋಟಿ ತೆರಿಗೆ ಪಾವತಿಸುತ್ತಿವೆ.

ಆ ಮೂಲಕ ರಾಜ್ಯ ಹಾಗೂ ರಾಷ್ಟ್ರ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವ ಕೈಗಾರಿಕೆಗಳ ರಕ್ಷಣೆಗೆ ಸರಕಾರ ಧಾವಿಸಿಲ್ಲ. ಹೀಗಾಗಿ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಪಿಐಎ ಹಿರಿಯ ಉಪಾಧ್ಯಕ್ಷ ಮಂಜುನಾಥ್ ಎಚ್, ಉಪಾಧ್ಯಕ್ಷ ಆರೀಫ್ ಎಚ್.ಎಂ, ಕಾರ್ಯದರ್ಶಿ ಶಿವಕುಮಾರ್ ಆರ್., ಜಂಟಿ ಕಾರ್ಯದರ್ಶಿ ಕುಮಾರ್.ಆರ್, ಖಜಾಂಚಿ ಪಾಟೀಲ್ ಡಿ.ಎಚ್, ಜಂಟಿ ಖಜಾಂಚಿ ಬಸವರಾಜು ಕೆ.ಬಿ, ಮಾಜಿ ಅಧ್ಯಕ್ಷರಾದ ಪದ್ಮನಾಭ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News