ಸರಕಾರ ಶಿಫಾರಸ್ಸು ಮಾಡಿದರೆ ಬೆಂಗಳೂರಿನಲ್ಲಿ ಕ್ರಿಸ್‍ಮಸ್, ಹೊಸವರ್ಷಕ್ಕೆ 144 ಸೆಕ್ಷನ್ ಜಾರಿ: ಗೌರವ್ ಗುಪ್ತಾ
ಬೆಂಗಳೂರು, ಡಿ.17: ನಗರದಲ್ಲಿ ಕ್ರಿಸ್ ಮಸ್ ಆಚರಣೆ ಹಾಗೂ ಹೊಸ ವರ್ಷ ಆಚರಣೆ ವೇಳೆ 144 ಸೆಕ್ಷನ್ ಜಾರಿಗೆ ರಾಜ್ಯ ಸರಕಾರದ ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆಗಳು ಸಿಎಂ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲಿ ಚರ್ಚೆ ನಡೆದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಒಮೈಕ್ರಾನ್ ವೈರಸ್ ಹೆಚ್ಚುತ್ತಿರುವ ಹಿನ್ನಲೆ ಅಂತರ್‍ರಾಷ್ಟ್ರೀಯ ಪ್ರಯಾಣಿಕರಿಗೆ ನಗರದ ವಿಮಾನ ನಿಲ್ದಾಣದಲ್ಲಿಯೇ ಪ್ರತ್ಯೇಕ ಟೆಸ್ಟಿಂಗ್ ಮಾಡಲಾಗುತ್ತಿದೆ. ಒಮೈಕ್ರಾನ್ ನಿಯಂತ್ರಣಕ್ಕೆ ಪಾಲಿಕೆ ಸಿದ್ಧತೆ ಮಾಡಿಕೊಂಡಿದ್ದು, ಅಗತ್ಯವಿದ್ದರೆ ಸರಕಾರವು ಶಿಫಾರಸ್ಸು ಮಾಡಿದರೆ, ಹೊಸ ವರ್ಷ ಮತ್ತು ಕ್ರಿಸ್‍ಮಸ್‍ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಅಂತರ್ ರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ಬಂದರೂ ಪುನಃ 7 ದಿನದ ಬಳಿಕ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಅಲ್ಲಿಯವರೆಗೂ ಪ್ರತ್ಯೇಕವಾಗಿರಬೇಕು. ಸುರಕ್ಷಿತ ಅಂತರ ಪಾಲಿಸಬೇಕು. ಅಂತರ್‍ರಾಷ್ಟ್ರೀಯ ಪ್ರಯಾಣವನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲದ ಕಾರಣ, ಮಹಾರಾಷ್ಟ್ರ ಮಾದರಿಯ ಪಾಸ್ ವ್ಯವಸ್ಥೆ ನಗರದಲ್ಲಿ ಸದ್ಯಕ್ಕೆ ಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಕಡ್ಡಾಯವಾಗಿದ್ದು, ಫೋನ್‍ನಲ್ಲಿರುವ ಪ್ರಮಾಣ ಪತ್ರ ತೋರಿಸಿ ಮಾಲ್, ಪಾರ್ಕ್, ಥಿಯೇಟರ್‍ಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.