ಚಿತ್ತಗಾಂಗ್ ವಿಪ್ಲವ ವನಿತೆಯರು!

Update: 2021-12-18 09:22 GMT

ಮನೆ ಮಾರು-ಹೆತ್ತವರು- ಸಂಬಂಧಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದುಕೊಂಡು ಸಶಸ್ತ್ರ ಬಂಡಾಯಗಾರರಾಗಿ ಆಂಗ್ಲರ ಕ್ರೌರ್ಯಗಳಿಗೆ ಕ್ರೌರ್ಯದಿಂದಲೇ ಉತ್ತರಕೊಟ್ಟ ಕ್ರಾಂತಿವೀರರ ಪರಿಚಯವೇ ‘ಚಿತ್ತಗಾಂಗ್ ವಿಪ್ಲವ ವನಿತೆಯರು’. ತೆಲುಗು ಲೇಖಕಿ, ಪತ್ರಕರ್ತೆ ಶ್ರೀಮತಿ ಚೈತನ್ಯ ಪಿಂಗಳಿ ಅವರು ಈ ಕೃತಿಯನ್ನು ರಚಿಸಿದ್ದು, ಸ. ರಘುನಾಥ ಕನ್ನಡಕ್ಕಿಳಿಸಿದ್ದಾರೆ. ಇದರ ಮೂಲಕ ಕೃತಿಗೆ 2016ರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರಕಿದೆ.

ಸ್ವಾತಂತ್ರ ಹೋರಾಟವು ಅಹಿಂಸೆಯಿಂದ ಕೂಡಿತ್ತೆಂಬ ಮಾತಿಗೆ ವಿರುದ್ಧವಾಗಿ ಚಿತ್ತಗಾಂಗ್ ಹೋರಾಟವು ಸಶಸ್ತ್ರವಾಗಿ ನಡೆದು ರಕ್ತಸಿಕ್ತ ಅಧ್ಯಾಯಗಳನ್ನು ಬರೆಯಿತೆಂದು ಹೇಳಬಹುದು. ರಕ್ತ ಹೆಪ್ಪುಗಟ್ಟುವಂತಹ, ಬಿಟ್ಟ ಬಾಯಿ ಬಿಟ್ಟಂತೆಯೇ ಇದ್ದು ಮಾತೇ ಹೊರಡದಂತಹ ರೆಪ್ಪೆ ಬಡಿಯುವಷ್ಟರಲ್ಲಿ ಹೆಣವಾಗುವ ಘನಘೋರ ಸತ್ಯಗಳು ಇಲ್ಲಿವೆ. ನಾಯಕಿಯರಾಗಿ ಹತ್ತು ಜನ ಮಹಿಳೆಯರನ್ನು ಈ ಕೃತಿ ಪರಿಚಯಿಸಿದರೂ ಇವರ ಜೊತೆ ಪುರುಷರೂ ಇದ್ದು ಬ್ರಿಟಿಷರನ್ನು ದಂಗು ಬಡಿಸಿದ್ದಾರೆ. ಸ್ವಾತಂತ್ರ ಹೋರಾಟದಲ್ಲಿ ಮಹಿಳೆಯರ ಪಾತ್ರಗಳನ್ನು ಗುರುತಿಸುವಾಗ ರಾಣಿ, ಮಹಾರಾಣಿಯರನ್ನು ಉಲ್ಲೇಖಿಸಲಾಗುತ್ತದೆಯೇ ಹೊರತು, ಇತರ ಸಾಮಾನ್ಯ ಮಹಿಳೆಯರ ಪಾತ್ರವನ್ನು ನಗಣ್ಯಗೊಳಿಸಲಾಗಿದೆ. ಅದರಲ್ಲೂ ಭಗತ್ ಸಿಂಗ್ ಗೆಳೆಯರಿಗೆ ಸಿಕ್ಕಿದ ಮಹತ್ವ, ಚಿತ್ತಗಾಂಗ್ ವಿಪ್ಲವ ವನಿತೆಯರಿಗೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ, ಸ್ವಾತಂತ್ರ ಹೋರಾಟದ ಮಹಿಳಾ ಉಗ್ರವಾದಿಗಳನ್ನು ಈ ಕೃತಿ, ಕಥನ ರೂಪದಲ್ಲಿ ಪರಿಚಯಿಸುತ್ತದೆ. ಅಷ್ಟೇ ಅಲ್ಲ, ಆ ಹೋರಾಟವನ್ನು ಅತ್ಯಂತ ರೋಚಕವಾಗಿ ಕಟ್ಟಿಕೊಡುತ್ತದೆ. 20ನೇ ಶತಮಾನದ ಪ್ರೀತಿ ಲತ ವದೇದಾರ್ ಅವರ ಹೋರಾಟ, ಬಾಂಬುಗಳನ್ನು ತಯಾರಿಸಿದ ಮೊದಲ ಭಾರತೀಯ ಮಹಿಳೆ, ಕಲ್ಪನಾ ದತ್ ಬೆಳಗಿಸುವ ಬೆಳಕು, ಕರುಣಾ ಜ್ವಾಲೆಯಾಗುವ ಸುಹಾಸಿನಿ ಗಂಗೂಲಿ, ಪಂಜಾಬಿ ಸಿಂಹಿಣಿಯೆಂದೇ ಗುರುತಿಸಲ್ಪಟ್ಟ ಇಂದುಮತಿ ಸಿಂಗ್, ಪ್ರೇಮಲತ, ಸಾವಿತ್ರಿ ದೇವಿ, ಬೀನಾ ದಾಸ್, ಕಲ್ಯಾಣಿ ದಾಸ್‌ಬಿನೋದಿನಿ ಸೇನ್, ಮೃಣಾಲಿನಿ ಸೇನ್ ಈ ಎಲ್ಲ ಹೆಸರುಗಳು ಇಂದಿನ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಬಲ್ಲವುಗಳು. ಇಲ್ಲಿ ಸ್ತ್ರೀಪರ ಚಿಂತನೆಗಳಿವೆ. ಸ್ವಾತಂತ್ರ ಹೋರಾಟದಲ್ಲಿ ಈ ಮಹಿಳೆಯರ ತ್ಯಾಗ, ಸಾಹಸ, ಸಂಘಷರ್ರ್, ಸಹಿಷ್ಣು ಭಾವಗಳಿವೆ. ಆ ಮೂಲಕ ತೆಲುಗಿನ ರೋಚಕತೆಯನ್ನು ಅನುವಾದದಲ್ಲೂ ಉಳಿಸಿಕೊಂಡಿದ್ದಾರೆ.

ನವಕರ್ನಾಟಕ ಪ್ರಕಾಶನ ಪುಸ್ತಕವನ್ನು ಹೊರತಂದಿದೆ.200 ಪುಟಗಳ ಈ ಕೃತಿಯ ಮುಖಬೆಲೆ 190 ರೂಪಾಯಿ. ಆಸಕ್ತರು 080-22161900, 22161901 ದೂರವಾಣಿಯನ್ನು ಸಂಪರ್ಕಿಸಬಹುದು.

-ಕಾರುಣ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News