ರಾಯಣ್ಣ ಮೂರ್ತಿ ಭಗ್ನ: ಕಿಡಿಗೇಡಿಗಳ ಗಡಿಪಾರಿಗೆ ಆಗ್ರಹ
ಬೆಂಗಳೂರು: ಸ್ವಾತಂತ್ರ್ಯ ಯೋಧ, ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿದ ಅವರು, ಮೊನ್ನೆ ರಾಜ್ಯದ ಭಾವುಟ ಸುಟ್ಟರು. ಈಗ ರಾಯಣ್ಣನ ಪ್ರತಿಮೆ ಭಗ್ನ ಮಾಡಿದ್ದಾರೆ. ನಮ್ಮ ಸ್ವಂತ ನೆಲದಲ್ಲೇ ನಮ್ಮ ದೇಶ ಪ್ರೇಮಿಗಳಿಗೆ ಭದ್ರತೆ ಇಲ್ಲವೆಂದರೆ ಏನರ್ಥ? ಬೆಳಗಾವಿ ಇರುವುದು ಕರ್ನಾಟಕದಲ್ಲೋ ಮಹಾರಾಷ್ಟ್ರದಲ್ಲೋ? ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಮತಬ್ಯಾಂಕ್‌ಗಳಿಗಾಗಿ ಆ ಪುಂಡರಿಗೆ ಸಲುಗೆ ಕೊಟ್ಟ ಪರಿಣಾಮ ಇವೆಲ್ಲವನ್ನೂ ನಾವು ಅನುಭವಿಸಬೇಕಾಗಿದೆ. ಅವರಿಗೆ ಈಗಲೇ ಸರಿಯಾಗಿ ಪಾಠ ಕಲಿಸಿದಿದ್ದರೆ ಮುಂದೆ ಅನುಭವಿಸಬೇಕಿರುವುದು ಸಾಕಷ್ಟಿದೆ. ಬಿಜೆಪಿಯ 25 ಸಂಸದರು ಇದರ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ, ದೂರದೃಷ್ಟಿಯ ಕೊರತೆಗಳನ್ನು ಮುಚ್ಚಿಕೊಳ್ಳಲು ಪ್ರತಿಮೆ ಧ್ವಂಸ, ಬಾವುಟ ಸುಡುವಂತಹ ಹೀನ ಕೃತ್ಯಗಳಲ್ಲಿ ತಮ್ಮ ಪುಂಡ ಕಾರ್ಯಕರ್ತರನ್ನು ತೊಡಗಿಸಿ ಪರ-ವಿರೋಧದ ಉಯಿಲೆಬ್ಬಿಸಿ ರಾಜ್ಯದ ನೆಮ್ಮದಿ ಕದಡುವ ಮೂಲಕ ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಮುಂದಾಗಿವೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಕೃಷಿ ಸಮಸ್ಯೆಗಳು, ನಿರುದ್ಯೋಗ, ಆರೋಗ್ಯ ಸಮಸ್ಯೆಗಳು, ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಬಲ್ಲ ಇಚ್ಛಾಶಕ್ತಿ, ಯೋಗ್ಯತೆ ಮತ್ತು ದೂರದೃಷ್ಟಿ ಬಿಜೆಪಿ ಪಕ್ಷಗಳ ಅಯೋಗ್ಯ ರಾಜಕಾರಣಿಗಳು ರಾಜ್ಯವನ್ನು ಧರ್ಮ ಮತ್ತು ಭಾಷೆಯ ಹೆಸರಲ್ಲಿ ಹೊತ್ತಿ ಉರಿಸಲು ಮುಂದಾಗಿದ್ದಾರೆಂದು ಆರೋಪಿಸಿದ ತಾಹಿರ್ ಹುಸೇನ್ ಇನ್ನು ಮುಂದೆ ಇಂತಹ ಹೀನ ಘಟನೆ ಜರುಗದಂತೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸುವ ಮೂಲಕ ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.