×
Ad

ಅಮೃತಸರ; ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ ಆರೋಪ: ಯುವಕನ ಥಳಿಸಿ ಹತ್ಯೆ

Update: 2021-12-19 07:46 IST

ಅಮೃತಸರ: ಇಲ್ಲಿನ ಸ್ವರ್ಣಮಂದಿರದಲ್ಲಿ 'ರೆರ್ಹಸ್ ಸಹಿಬ್’ ಹಾಡುವ ವೇಳೆ ಗರ್ಭಗುಡಿ ಪ್ರವೇಶಿಸಿದ ಯುವಕನನ್ನು ಸಂಗತ್ ಮತ್ತು ಸೇವಾದಾರರು ಥಳಿಸಿ ಹತ್ಯೆ ಮಾಡಿದ್ದಾರೆ ಎನ್ನಲಾದ ಘಟನೆ ಶನಿವಾರ ಸಂಜೆ ನಡೆದಿದೆ.

'ರುಮಾಲಾ ಸಾಹಿಬ್’ ಏರಿದ ಯುವಕ ಶ್ರೀ ಗುರುಗ್ರಂಥ ಸಾಹಿಬ್ ಮುಂದೆ ಇರಿಸಿದ್ದ ಖಡ್ಗವನ್ನು ಕೈಗೆತ್ತಿಕೊಂಡ ವೇಳೆ ಯುವಕನನ್ನು ಎಳೆದೊಯ್ದು ಥಳಿಸಿ ಹತ್ಯೆ ಮಾಡಲಾಯಿತು ಎಂದು ತಿಳಿದುಬಂದಿದೆ. ಡಿಸಿಪಿ ಪರ್ಮೀಂದ್ರ ಸಿಂಗ್ ಭಂಡಲ್, ಯುವಕನ ಹತ್ಯೆಯನ್ನು ದೃಢಪಡಿಸಿದ್ದಾರೆ. ಸುಮಾರು 20-25 ವರ್ಷದ ಯುವಕ ಹಳದಿ ಪಟ್ಕಾ ಧರಿಸಿದ್ದ ಎಂದು ಸಿಂಗ್ ವಿವರಿಸಿದರು.

"ಗರ್ಭಗುಡಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಸಂಗತರ ಜತೆಗೆ ಯುವಕ ನಿಂತಿದ್ದ. ಆದರೆ ಆತನ ಸರದಿ ಬಂದಾಗ ರೇಲಿಂಗ್ ಜಿಗಿದು ಖಡ್ಗ ಕೈಗೆತ್ತಿಕೊಂಡ ತಕ್ಷಣವೇ ಯುವಕನನ್ನು ಹಿಡಿದು ಹೊರಕ್ಕೆ ತಂದು ಬೀದಿಯಲ್ಲಿ ಸಂಗತರು ಥಳಿಸಿದರು. ತೀವ್ರ ಗಾಯಗೊಂಡ ಯುವಕ ಮತಪಟ್ಟ" ಎಂದು ಹೇಳಿದರು. ಮೃತದೇಹವನ್ನು ಶವಾಗಾರಕ್ಕೆ ಕಳುಹಿಸಲಾಗಿದ್ದು, ರವಿವಾರ ಅಟಾಪ್ಸಿ ನಡೆಯಲಿದೆ ಎಂದು ಡಿಸಿಪಿ ತಿಳಿಸಿದರು.

ಮೃತ ಯುವಕನ ಬಳಿ ಯಾವುದೇ ಗುರುತಿನ ಪತ್ರ ಅಥವಾ ದಾಖಲೆಗಳು ಇದ್ದಿರಲಿಲ್ಲ. ಆತ ಒಬ್ಬನೇ ಬಂದಿದ್ದನೇ ಅಥವಾ ಇತರರ ಜತೆಗೆ ಬಂದಿದ್ದನೇ ಎನ್ನುವುದನ್ನು ತಿಳಿಯಲು ಸಿಸಿಟಿವಿ ದೃಶ್ಯಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

ಘಟನೆಯ ನೈಜ ಉದ್ದೇಶವನ್ನು ತಿಳಿಯಲು ಘಟನೆ ಬಗ್ಗೆ ತನಿಖೆ ನಡೆಸಲಾಗುವುದು. ಈ ಅಪಚಾರದ ಪ್ರಯತ್ನ ದುರದೃಷ್ಟಕರ ಮತ್ತು ಹೇಯ ಕೃತ್ಯ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‌ ಜೀತ್ ಚನ್ನಿ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News