×
Ad

'ಅಧಿಕಾರಿಗಳು ಸಾಹೇಬಗಿರಿಯಿಂದ ಹೊರಬಂದು ಸಾಮಾನ್ಯರ ಕೆಲಸ ಮಾಡುವಂತೆ ಶ್ರಮಿಸಿದ ಕೀರ್ತಿ ನಝೀರ್ ಸಾಬ್‍ಗೆ ಸಲ್ಲುತ್ತದೆ'

Update: 2021-12-19 18:22 IST

► ಅಬ್ದುಲ್ ನಝೀರ್ ಸಾಬ್‍ರ 87ನೇ ಜನ್ಮ ದಿನೋತ್ಸವ

ಬೆಂಗಳೂರು, ಡಿ.19: ರಾಜಕಾರಣಿಗಳು ಸರಳತೆ, ಸೌಜನ್ಯ, ಪ್ರಾಮಾಣಿಕತೆಯ ಬಗ್ಗೆ ಮಾತನಾಡಿದರೆ, ಅಬ್ದುಲ್ ನಝೀರ್ಸಾಬ್ ಅವನ್ನು ಅನುಷ್ಠಾನ ಮಾಡುತ್ತಿದ್ದರು. ಹಾಗಾಗಿ ಜನತಾ ಹೆಸರಿನಲ್ಲಿ ಜನರ ಸರಕಾರವನ್ನು ರಚಿಸಿದವರಲ್ಲಿ ಅವರು ಪ್ರಮುಖರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮನು ಬಳಿಗಾರ್ ಅಭಿಪ್ರಾಯಪಟ್ಟರು. 

ರವಿವಾರ ಜನತಾ ಪಾರ್ಟಿ ಕರ್ನಾಟಕವು ಶಾಸಕರ ಭವನದಲ್ಲಿ ಆಯೋಜಿಸಿದ್ದ ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯ ರೂವಾರಿಯಾದ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಜಿ ಸಚಿವ ಅಬ್ದುಲ್ ನಝೀರ್ ಸಾಬ್‍ರ 87ನೇ ಜನ್ಮ ದಿನೋತ್ಸವದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ತರದ ಭಾರತದಲ್ಲಿ ಅಧಿಕಾರಿಗಳು ಬ್ರಿಟೀಷರಂತೆ ವರ್ತಿಸಲು ಮುಂದಾದರು. ಆಗ ಅಧಿಕಾರಿಗಳು ತಮ್ಮ ಸಾಹೇಬಗಿರಿಯಿಂದ ಹೊರಬಂದು ಸಾಮಾನ್ಯರ ಕೆಲಸ ಮಾಡುವಂತೆ ಶ್ರಮಿಸಿದ ಕೀರ್ತಿ ನಝೀರ್ಸಾಬ್‍ಗೆ ಸಲ್ಲುತ್ತದೆ ಎಂದರು.

ಗ್ರಾಮಾಭಿವೃದ್ಧಿಯ ಪರಿಕಲ್ಪನೆಯನ್ನು ಮಾದರಿಯಾಗಿರಿಸಿಕೊಂಡು, ವಿಧಾನಸೌಧದಲ್ಲಿ ಮುಖ್ಯಕಾರ್ಯದರ್ಶಿ ಇರುವಂತೆ ಗ್ರಾಮ ಪಂಚಾಯಿತಿಯಲ್ಲೂ ಕಾರ್ಯದರ್ಶಿಯನ್ನು ನೇಮಕ ಮಾಡಿದರು. ಈ ಮೂಲಕ ಎಲ್ಲಾ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುವ ವಾತಾವರಣವನ್ನು ಸೃಷ್ಟಿಸಿದರು ಎಂದರು. 

ಅಧಿಕಾರ ವಿಕೇಂದ್ರಿಕರಣ, ಭ್ರಷ್ಟಾಚಾರ ತಡೆ, ಜಾತ್ಯತೀತ ಪರಿಸರ ನಿರ್ಮಾಣಕ್ಕಾಗಿ ದುಡಿದ ನಝೀರ್ಸಾಬ್‍ರ ಓದುವ ಹಂಬಲ ಹಾಗೂ ಅಧ್ಯಯನದ ತತ್ವ ಎಲ್ಲರಿಗೂ ಮಾದರಿಯಾಗಬೇಕು. ಸದನ ಕಲಾಪಗಳಲ್ಲಿ ಬರಹಗಾರರ ವಾಕ್ಯಗಳನ್ನೇ ನಿದರ್ಶನವಾಗಿ ನೀಡುತ್ತಿದ್ದ ನಝೀರ್ ಸಾಬ್‍, ಕನ್ನಡ ಸಾಹಿತ್ಯವನ್ನು ಬಲ್ಲವರಾಗಿದ್ದರು ಎಂದು ಅವರು ಹೇಳಿದರು. 

ಸಮಾಜವಾದಿ ಅಲಿಬಾಬ ಮಾತನಾಡಿ, 90ರ ದಶಕದ ರಾಜಕಾರಣವನ್ನು ಅಧ್ಯಯನ ಮಾಡಿದರೆ, ಭಾವನಾತ್ಮಕ ವಿಚಾರಗಳು ಎದ್ದು ಕಾಣುತ್ತಿದ್ದವು. ಆದರೆ 90ರ ದಶಕದ ನಂತರದ ರಾಜಕಾರಣವು ಅಸಹ್ಯವಾಗಿದೆ. ನಝೀರ್ಸಾಬ್, ಇಮಾಂ ಸಾಬ್ ಹಾಗೂ ಶಾಂತವೇರಿ ಗೋಪಾಲಗೌಡರಂತಹ ಸಮಾಜವಾದಿಗಳನ್ನು ಯುವಪೀಳಿಗೆಗೆ ಪರಿಚಯ ಮಾಡುವಂತಹ ಕೆಲಸ ಸರಕಾರ ಮಾಡುತ್ತಿಲ್ಲ ಎಂದು ಮರುಕಪಟ್ಟ, ಅವರು, ಪ್ರಸ್ತುತ ಸಮಸ್ಯೆಗಳಿಗೆ ಸಮಾಜವಾದವೇ ಉತ್ತರ ಎಂದು ಸರಕಾರ ಮನಗಾಣಬೇಕು ಎಂದರು. 

ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ ಮಾತನಾಡಿ, ದೇವರಾಜ ಅರಸು ತೀರಿಕೊಂಡ ಬಳಿಕ ರಾಜ್ಯದಲ್ಲಿ ಉಂಟಾದ ರಾಜಕೀಯ ಗೊಂದಲದೊಂದಿಗೆ ಹೊರಹೊಮ್ಮಿದ ಅಬ್ದುಲ್ ನಝೀರ್ ಸಾಬ್‍, ಕರ್ನಾಟಕ ಕ್ರಾಂತಿರಂಗ ಪಕ್ಷವನ್ನು ಮುನ್ನಡೆಸಿಕೊಂಡು ಬಂದರು. ಅದರ ಪರಿಣಾಮವಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಕಂದಾಯ, ಗೃಹ ಮತ್ತು ಲೋಕೋಪಯೋಗಿ ಇಲಾಖೆಗಳ ಮಂತ್ರಿಗಿರಿಯನ್ನು ತ್ಯಜಿಸಿ, ಗ್ರಾಮೀಣಾಭಿವೃದ್ಧಿ ಇಲಾಖೆಯ ಮಂತ್ರಿ ಸ್ಥಾನವನ್ನು ಆಯ್ಕೆ ಮಾಡಿಕೊಂಡು, ಪ್ರತಿ ತಿಂಗಳು 19 ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದರು. ಹಾಗಾಗಿ ಜನ ಸಾಮಾನ್ಯರಿಗೆ ಹತ್ತಿರವಾಗುತ್ತಿದ್ದರು. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗ್ ಯಾವ ರೀತಿ ಕಾರ್ಯನಿರ್ವಹಿಸಿದರೋ, ಹಾಗೆಯೇ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ನಝೀರ್ಸಾಬ್ ಅವರ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಿದರು.

ಮಾಜಿ ಸಚಿವೆ ಲಲಿತ ನಾಯಕ್ ಮಾತನಾಡಿ, ಪತ್ರಕರ್ತೆಯಾಗಿದ್ದ ನನ್ನನ್ನು ನಝೀರ್ ಸಾಬ್ ರಾಜಕೀಯಕ್ಕೆ ಬರಮಾಡಿಕೊಂಡರು ಎಂದು ನಝೀರ್ ಸಾಬ್‍ ರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು. 

ಕಾರ್ಯಕ್ರಮದಲ್ಲಿ ಜನತಾ ಪಾರ್ಟಿಯ ಹಿರಿಯ ಮುಖಂಡ ಕೆ.ಎಂ. ಪಾಲಾಕ್ಷ, ಡಾ. ಬಾಸ್ಕರ್, ನಾಗೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. 

ನಝೀರ್  ಸಾಬ್ ಜನ್ಮೋತ್ಸವ ಯಾಕಿಲ್ಲ?

ಟಿಪ್ಪು ಸುಲ್ತಾನ್ ಜನ್ಮೋತ್ಸವವನ್ನು ಚರ್ಚೆಗೆ ತರುವ ಸರಕಾರ ನಝೀರ್ ಸಾಬ್‍ ಜನ್ಮೋತ್ಸವವನ್ನು ಯಾಕೆ ಆಚರಿಸುವುದಿಲ್ಲ. ನಝೀರ್ ಸಾಬ್‍ ಅಧಿಕಾರಿಗಳನ್ನೇ ಹಳ್ಳಿಗಳಿಗೆ ಹೋಗುವಂತೆ ಆದೇಶಿಸುತ್ತಿದ್ದರು. ಆದರೆ ಈಗಿನ ಜನಪ್ರತಿನಿಧಿಗಳು ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಪರಿಣಾಮವಾಗಿ ಹಳ್ಳಿಗರು ಪ್ರತಿನಿತ್ಯ ಸರಕಾರಿ ಕಚೇರಿಗಳನ್ನು ಸುತ್ತುತ್ತಿದ್ದಾರೆ. 

-ನಾಗೇಶ್, ಮುಖಂಡ, ಜನತಾ ಪಾರ್ಟಿ ಕರ್ನಾಟಕ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News