×
Ad

ಬೆಂಗಳೂರಿನ ಚರ್ಚ್ ಮೇಲೆ ಸಂಘಪರಿವಾರದಿಂದ ದಾಳಿ: ಪ್ರಾರ್ಥನಾ ನಿರತರಿಗೆ ಗಂಭೀರ ಹಲ್ಲೆ

Update: 2021-12-19 19:52 IST

ಬೆಂಗಳೂರು, ಡಿ.19: ನಗರದ ಮಲ್ಲತ್ತಹಳ್ಳಿಯಲ್ಲಿರುವ ಪ್ರತಿಷ್ಠಿತ ಹೆವನ್ಸ್ ಕಿಂಗ್ಡಮ್ ಮಿನಿಸ್ಟ್ರೀಸ್ ಚರ್ಚ್ ಮೇಲೆ ಸಂಘಪರಿವಾರದ ಕಾರ್ಯಕರ್ತರು ದಾಳಿ ನಡೆಸಿ, ಪ್ರಾರ್ಥನಾ ನಿರತರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ.

ರವಿವಾರ ಬೆಳಗ್ಗೆ 10.30ರ ಸುಮಾರಿಗೆ ಕಿಂಗ್ಡಮ್ ಮಿನಿಸ್ಟ್ರೀಸ್ ಚರ್ಚ್‍ಗೆ ಏಕಾಏಕಿ ನುಗ್ಗಿದ ಸಂಘ ಪರಿವಾರದ ಕಾರ್ಯಕರ್ತರು ಪ್ರಾರ್ಥನಾ ನಿರತ ಮಹಿಳೆ, ಮಕ್ಕಳು ಸೇರಿ ನೆರೆದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಚರ್ಚ್‍ನಲ್ಲಿದ್ದ ಚೇರುಗಳು, ಆಲಂಕಾರಿಕ ವಸ್ತುಗಳು ಒಡೆದು ಧ್ವಂಸ ಮಾಡಿದಾರೆ. 

ಕ್ರಿಸ್ಮಸ್ ಹಬ್ಬ ಬರುತ್ತಿರುವ ಸಂದರ್ಭದಲ್ಲೇ ಕ್ರಿಶ್ಚಿಯನ್ ಸಮುದಾಯದ ಮೇಲೆ ಸಂಘಪರಿವಾರ ಕಾರ್ಯಕರ್ತರು ದಾಳಿ ನಡೆಸಿರುವುದು ಖಂಡನೀಯ ಎಂದು ಪ್ರಾರ್ಥನಾ ನಿರತರು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕಾಗಮಿಸಿದ ಬೆಂಗಳೂರಿನ ಜ್ಞಾನಭಾರತಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಲು ಯತ್ನಿಸಿರುವ ಕಾರ್ಯಕರ್ತರ ವಿಚಾರಣೆಗಾಗಿ ಪೊಲೀಸರು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಪರಿಸ್ಥಿತಿ ಶಾಂತಗೊಳಿಸಲು ಪೊಲೀಸರು ಕ್ರಮ ವಹಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News