×
Ad

ರಾಜ್ಯದಲ್ಲಿ ಎಂಇಎಸ್, ಶಿವಸೇನಾ ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ

Update: 2021-12-19 21:19 IST
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ವಿರೂಪಗೊಳಿಸಿದ ಎಂಇಎಸ್ ಕಾರ್ಯಕರ್ತರು

ಬೆಂಗಳೂರು, ಡಿ.19: ನಾಡಿನ ಘನತೆಗೆ ಧಕ್ಕೆ ಉಂಟು ಮಾಡಿದ ಎಂಇಎಸ್ ಹಾಗೂ ಶಿವಸೇನೆ ಎಂಬ ಭಯೋತ್ಪಾದಕ ಗುಂಪುಗಳ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ವೇದಿಕೆ ಸಜ್ಜಾಗಿದ್ದು, ಸರಕಾರವು ಆ ಸಂಘಟಣೆಗಳನ್ನು ನಿಷೇಧಿಸುವಂತೆ ಇಂದು (ಡಿ.19) ಸಹಸ್ರಾರು ಕರವೇ ಕಾರ್ಯಕರ್ತರು ಸುವರ್ಣಸೌಧ ಮುತ್ತಿಗೆ ಹಾಕಲಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ವಿರೂಪಗೊಳಿಸಿದ ಎಲ್ಲ ಭಯೋತ್ಪಾದಕರ ಮೇಲೂ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷಿಸಬೇಕು. ಎಲ್ಲರನ್ನೂ ಮಹಾರಾಷ್ಟ್ರಕ್ಕೆ ಗಡೀಪಾರು ಮಾಡಬೇಕು. ಬೆಳಗಾವಿಯಲ್ಲಿ, ಬೆಂಗಳೂರಿನಲ್ಲಿ ಸೇರಿದಂತೆ ರಾಜ್ಯದ ವಿವಿಧೆಡೆ ಬಂಧನಕ್ಕೆ ಒಳಗಾಗಿರುವ ಎಲ್ಲ ಕನ್ನಡಪರ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬ ಹಕ್ಕೊತ್ತಾಯಗಳನ್ನು ಸರಕಾರದ ಮುಂದೆ ಇಟ್ಟಿದ್ದಾರೆ.

ಈ ಹಕ್ಕೊತ್ತಾಯಗಳ ಈಡೇರಿಕೆಗಾಗಿ ರವಿವಾರದಂದು ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಸುಮಾರು 50 ವಾಹನಗಳ ಮೂಲಕ ನೂರಾರು ಕರವೇ ಸೇನಾನಿಗಳು ನಗರದ ಗಾಂಧಿನಗರದ ಕರವೇ ಕೇಂದ್ರ ಕಚೇರಿಯಿಂದ ಬೆಳಗಾವಿಗೆ ಹೊರಟಿದ್ದು, ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕರವೇ ಸೇನಾನಿಗಳು ಇಂದು ಮಧ್ಯಾಹ್ನ 12 ಗಂಟೆಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮೆರವಣಿಗೆ ಹೊರಟು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News