ಬೆಂಗಳೂರು: ಕಚ್ಚಾ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೈಗಾರಿಕಾ ವಲಯ ಬಂದ್
ಬೆಂಗಳೂರು, ಡಿ.20: ಸಣ್ಣ ಕೈಗಾರಿಕೆಗಳಿಗೆ ಅಗತ್ಯ ಎನಿಸುವ ಕಚ್ಚಾ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಪೀಣ್ಯ ಕೈಗಾರಿಕಾ ಸಂಘ, ಮತ್ತಿತರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಏಷ್ಯಾದ ಅತಿದೊಡ್ಡ ಕೈಗಾರಿಕಾ ವಲಯವಾಗಿರುವ ಪೀಣ್ಯದಲ್ಲಿ ಕೈಗಾರಿಕೆಗಳನ್ನು ಬಂದ್ ಮಾಡಿ ಪೀಣ್ಯದ ಆಲ್ ಇಂಡಿಯಾ ಕೌನ್ಸಿಲ್ ಆಫ್ ಅಸೋಸಿಯೇಷನ್ ಆಫ್ ಎಂಎಸ್‍ಎಂಇ ಎದುರು ಭಾರೀ ಪ್ರತಿಭಟನೆ ನಡೆಸಿದರು.
ವಿವಿಧ ಸಂಘಟನೆಗಳ ಮುಖಂಡರು ಜನ ವಿರೋಧಿ ಸರಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಈ ಭಾಗದಲ್ಲಿ ಕೈಗಾರಿಕಾ ವಲಯ ಬಹುತೇಕ ಸ್ತಬ್ಧಗೊಂಡಿತ್ತು. ಪರಿಸ್ಥಿತಿ ಹೀಗೇ ಮುಂದುವರೆದರೆ ಮುಂದೆ ಕೈಗಾರಿಕೆಗಳ ಪರಿಸ್ಥಿತಿ ಹೇಗೆ? ನಮ್ಮ ಕುಟುಂಬ, ನಮ್ಮನ್ನು ನಂಬಿಕೊಂಡಿರುವ ಕಾರ್ಮಿಕರ ಸ್ಥಿತಿಗತಿ ಏನು ಎನ್ನುವ ಆತಂಕ, ಸಿಟ್ಟನ್ನು ಪ್ರತಿಭಟನಾಕಾರರು ಹೊರ ಹಾಕಿದರು.
ಪೀಣ್ಯದ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಮುರಳಿಕೃಷ್ಣ ಮಾತನಾಡಿ, ಕಬ್ಬಿಣ ಮತ್ತಿತರ ಮೂಲ ಕಚ್ಚಾ ವಸ್ತುಗಳು ಕೈಗೆಟುಕದ ರೀತಿಯಲ್ಲಿ ಏರಿಕೆಯಾಗುತ್ತಿವೆ. ಬೆಲೆ ನಿಯಂತ್ರಣಕ್ಕೆ ಸರಕಾರಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕನಿಷ್ಠ ಪಕ್ಷ ಬೆಲೆಗಳ ನಿಯಂತ್ರಣ ಮಾಡಲು ಸಭೆಗಳನ್ನು ಸಹ ನಡೆಸುತ್ತಿಲ್ಲ. ಬೆಲೆ ನಿಯಂತ್ರಣಕ್ಕೆ ಯಾವುದೇ ಕ್ರಮಗಳನ್ನೂ ಕೂಡ ಸರಕಾರಗಳು ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದಿನ ಸರಕಾರಗಳು ಕಬ್ಬಿಣ, ಸಿಮೆಂಟ್ ಮತ್ತಿತರ ವಸ್ತುಗಳ ಬೆಲೆ ನಿಯಂತ್ರಿಸಲು ನಿಯಮಿತವಾಗಿ ಸಭೆಗಳನ್ನು ನಡೆಸುತ್ತಿದ್ದವು. ಇದಕ್ಕಾಗಿ ಸಚಿವರು, ಅಧಿಕಾರಿಗಳ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಗಳನ್ನು ರಚಿಸಿ ಬೆಲೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಈಗಿನ ಸರಕಾರಗಳು ಸಣ್ಣ ಕೈಗಾರಿಕೆಗಳು ಮತ್ತು ಜನ ಸಾಮಾನ್ಯರ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಒಂದು ವೇಳೆ ಕೈಗಾರಿಕೆಗಳು ಶಾಶ್ವತವಾಗಿ ಬಂದ್ ಆದರೆ ಊಹಿಸಲೂ ಸಾಧ್ಯವಾಗದಷ್ಟು ಸಮಸ್ಯೆಗಳು ಎದುರಾಗಲಿವೆ. ಕೊರೋನದಿಂದ ಈಗಾಗಲೇ ಉದ್ಯೋಗವಿಲ್ಲದೆ ಪರಿತಪಿಸುತ್ತಿರುವ ಜನ ಸಾಮಾನ್ಯರು ಭಾರೀ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಬಿ. ಮುರಳಿಕೃಷ್ಣ ಆತಂಕ ವ್ಯಕ್ತಪಡಿಸಿದರು.
ಸಣ್ಣ ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ
‘ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಸಣ್ಣ ಮನೆಗಳನ್ನು ಕಟ್ಟಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಜನತೆ, ಸಣ್ಣ ಕೈಗಾರಿಕೆಗಳು ದಿಕ್ಕೇ ತೋಚದಂತಾಗಿವೆ. ನಾವು ಇದೀಗ ಕೈಗಾರಿಕೆಗಳನ್ನು ಬಂದ್ ಮಾಡದೆ ಬೇರೆ ದಾರಿಯೇ ಇಲ್ಲದಂತಾಗಿದೆ.’
ಬಿ.ಮುರಳಿಕೃಷ್ಣ, ಪೀಣ್ಯಾದ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ