‘ಅಮೃತಪಥ’ದ ಅನ್ವೇಷಣೆಯತ್ತ...

Update: 2021-12-21 06:35 GMT

ಸುಮಾರು ನಾಲ್ಕುವರೆ ದಶಕಗಳ ಹಿಂದೆ ನಾನು ಕಲಬುರಗಿಯ (ಗುಲ್ಬರ್ಗದ) ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ ನನ್ನ ಜೊತೆಗಿದ್ದವರು ವಿ. ಮಾ. ಜಗದೀಶ್. ಅವರ ಸಾಹಿತ್ಯಾಸಕ್ತಿ ಕಂಡು ನಾನು ಅವರನ್ನು ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಾಗ ಕೇಳುತ್ತಿದ್ದೆ. ಒಂದು ದಿನ ಅವರು ಒಂದು ಹಸ್ತ ಪ್ರತಿಯನ್ನು ಕೊಟ್ಟರು. ಅದು ‘ರೇಡಿಯೊ ಕವನ’ಗಳು ಎಂಬುದಾಗಿತ್ತು. ರೇಡಿಯೊಗಾಗಿಯೇ ಬರೆಯುವವರು ವಿರಳವಿದ್ದಾಗ (ಈಗಲೂ ಈ ಕೊರತೆ ಇದ್ದೇ ಇದೆ) ಜಗದೀಶ ಅವರ ಕವನಗಳು ನನಗೆ ಹಿಡಿಸಿದವು. ಜಗದೀಶ ಒಬ್ಬ ಬಾನುಲಿ ಕವಿ ಎಂದು ಗೊತ್ತಾದ ಮೇಲೆ ಅವರ ಅನೇಕ ಗೀತರೂಪಕಗಳನ್ನು ಪ್ರಸಾರಮಾಡಿದೆ. ಅವುಗಳಲ್ಲಿ ‘ಪತ್ರಪುಷ್ಪ’-ಎಂಬುದು ಕೇವಲ ಎರಡೇ ಧ್ವನಿಗಳಲ್ಲಿ ಇದ್ದು ಬಹಳ ಪರಿಣಾಮಕಾರಿಯಾಗಿತ್ತು. ಇದನ್ನು ತಮ್ಮ ಆಕರ್ಷಕ ಭಾವನಾತ್ಮಕ ಧ್ವನಿಯಲ್ಲಿ ಪ್ರಸ್ತುತ ಪಡಿಸಿದವರು ಮೈತ್ರೇಯಿ ಜಹಗೀರ್‌ದಾರ್‌ರವರು. ಇದಾದ ಮೇಲೆ ಜಗದೀಶ ಅವರ ‘ಅಸ್ತವ್ಯಸ್ತ’, ‘ಎಲ್ಲ ಆಡಿದ ಮೇಲೆ’, ‘ಹಗಲಾಳೋ ತಿಂಗಳು’, ‘ನೆಲ್ಲಂಬಾರ’ ಮೊದಲಾದ ಕವನ ಸಂಕಲನಗಳನ್ನು ಓದಿದ ನೆನಪು. ಸುಮಾರು 30 ವರ್ಷದ ಮೇಲೆ ಅವರು ‘ಅಮೃತಪಥ’ ಎಂಬ ಆಧುನಿಕ ಮಹಾಕಾವ್ಯವನ್ನು ಪ್ರಕಟಿಸಿದ ಮೇಲೆ ಅದು ಸಿಕ್ಕಾಗ ಇಷ್ಟೊಂದು ಗಾತ್ರದ ಕಾವ್ಯವನ್ನು ಓದುವುದು ಹೇಗಪ್ಪಎಂದುಕೊಂಡ ನನಗೆ ಪ್ರಾರಂಭದಲ್ಲಿಯೇ ‘ಅಮೃತಪಥ’ದ ಮಧುತೋಟದಲ್ಲಿ ಸರಳ ಸುಲಲಿತ ಭಾಷೆ ಒಂದೇ ನಿಟ್ಟಿನಲ್ಲಿ ವಿಹರಿಸುವಂತೆ ಮಾಡಿತು. ಅಮೃತಪಥದ ಓದಿನ ಯಶಸ್ಸು ಅದರ ಭಾಷೆ, ಶಬ್ದ ಹಾಗೂ ಪ್ರಾದೇಶಿಕಥೆಯ ಛಾಪು-ಸ್ವಲ್ಪಇಂಗ್ಲಿಷ್ ಸಾಹಿತ್ಯ ಓದಿದ ನನಗೆ ಅಮೆರಿಕದ ಕವಯಿತ್ರಿ ಎಮಿಲಿ ಡಿಕನ್‌ಸನ್ ಅವರ ಶೈಲಿ ನೆನಪಾಯಿತು. ಅಮೃತಪಥದ ಮಧುತೋಟದಲ್ಲಿ ವಿಹರಿಸಿದ ನನಗೆ ಒಬ್ಬ ಸಾಮಾನ್ಯ ಓದುಗನಿಗೆ ಉಂಟಾಗುವ ಕೆಲವು ಪ್ರಶ್ನೆಗಳನ್ನು ವಿ.ಮಾ.ಜಗದೀಶ್ ಅವರನ್ನು ಭೇಟಿಯಾದಾಗ ಕೇಳಿದೆ. ಅವರ ವಿಚಾರಗಳು ಇಲ್ಲಿವೆ.

1. ಸತ್ಯವಾನ ನಿಧನವಾಗುವವರೆಗೆ ಈ ಕಥೆ ಇದೆ. ಸಾವಿತ್ರಿಯ ವ್ಯಕ್ತಿತ್ವವನ್ನು ಕಾವ್ಯದ ತುಂಬೆಲ್ಲ ಪ್ರಸ್ತಾಪಿಸಿದ್ದೀರಿ. ಇದು ನಿಮ್ಮ ಸ್ತ್ರೀಪರ ಕಾಳಜಿ ಇರಬಹುದಲ್ಲವೇ?

: ಹಾಗೇನಿಲ್ಲ., ಸ್ತ್ರೀಪರವಾದ ಬಂದದ್ದು ಈಚೆಗೆ. ನಮ್ಮ ಹಿಂದಿನ ತಲೆಮಾರಿನ ಚಿಂತಕರು, ಲೇಖಕರು ಆ ಬಗ್ಗೆ ಬರೆದಿದ್ದಾರೆ. ವೇದಕಾಲದಲ್ಲೇ ಸಾವಿತ್ರಿಯ ತಂದೆ ಅಶ್ವಪತಿ ತನ್ನ ಮಗಳಿಗೆ ತನಗೆ ಬೇಕಾದ ಗಂಡನನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ಕೊಟ್ಟಿರುತ್ತಾನೆ. ಆ ಸ್ವಾತಂತ್ರ್ಯವನ್ನು ಆತ ನೀಡಬೇಕಾದರೆ ಆಕೆಗೆ ಅಷ್ಟರಮಟ್ಟಿನ ಶಿಕ್ಷಣವನ್ನು ಕೊಟ್ಟಿರಲೇ ಬೇಕು. ಶಿಕ್ಷಣದಿಂದ ಯಾವುದೇ ವ್ಯಕ್ತಿಯ ವಿಚಾರಶಕ್ತಿ ವಿಕಸನವಾಗುತ್ತದೆ. ಪೂರ್ವಾಪರವನ್ನು ನಿಷ್ಕರ್ಶಿಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವ ಶಕ್ತಿ ತಾನೇ ಬರುತ್ತದೆ ಅಲ್ಲವೆ? ಈ ಕಾವ್ಯ ಆರ್ಯದ್ರಾವಿಡ ಸಂಸ್ಕೃತಿ ಕೆನೆಗಡೆದ ಕಾಲದಲ್ಲಿ ಅಂದರೆ ರಾಮಾಯಣ, ಮಹಾಭಾರತಗಳು ಹುಟ್ಟುವ ಮೊದಲಿನದು. ಆ ಕಾಲದಲ್ಲಿ ಸ್ತ್ರೀ-ಪುರುಷ ವಿದ್ಯಾರ್ಥಿಗಳು ಗುರುಕುಲದಲ್ಲಿ ಒಟ್ಟಿಗೆ ವಿದ್ಯೆ ಕಲಿಯುತ್ತಿದ್ದರು. ಹಾಗೆ ವಿದ್ಯಾಭ್ಯಾಸಮಾಡಿ ಸ್ವಂತ ವಿಚಾರ ಶಕ್ತಿ ಬೆಳೆಸಿಕೊಂಡು ಪ್ರಖ್ಯಾತರಾದ ಸ್ತ್ರೀಯರ ಉದಾಹರಣೆ ಬೇಕಷ್ಟಿವೆ. ಅಂತಹವರಲ್ಲಿ ಸಾವಿತ್ರಿಕೂಡ ಒಬ್ಬಳು. ಆ ಕಾಲದ ಭಾರತೀಯ ಸಮಾಜದಲ್ಲಿ ಸ್ತ್ರೀಯರನ್ನು ತಮ್ಮ ಸೇವೆಗೆ ಇಟ್ಟುಕೊಳ್ಳಬೇಕೆಂಬ, ಅದಕ್ಕಾಗಿ ಸಿದ್ಧಪಡಿಸಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ವೇದ ಶಾಸ್ತ್ರ (ಪಾತವ್ರತ್ಯ)ವಾಗಿತ್ತು. ಅದರ ಅಂತರಂಗದಲ್ಲಿರುವ ಹುನ್ನಾರವನ್ನು ಪ್ರಶ್ನಿಸುವ, ಒಪ್ಪದ ಮನೋಭಾವದವರೂ ಇದ್ದರು. ಪ್ರಸ್ತುತ ಕಾವ್ಯ ಅಮೃತಪಥದಲ್ಲಿ ಅದನ್ನು ಅವಲೋಕಿಸಬಹುದು. ಅಂತಹ ಒಂದು ಪಾತ್ರವಾಗಿದ್ದಾಳೆ ಸಾವಿತ್ರಿ. ಆಕೆ ತಾನಿದ್ದ ಸಮಾಜದ ನಡೆ ನುಡಿಗಳನ್ನು ಕೆಲವೊಮ್ಮೆ ಮೌನವಾಗಿ, ಸೌಮ್ಯವಾಗಿ ಪ್ರತಿಭಟಿಸುತ್ತಾಳೆ. ನೊಂದ ಹೆಂಗಳೆಯರ ಪರವಾಗಿ ನಿಂತದ್ದೂ ಇದೆ. ಮುಟ್ಟಿನ ವಿಚಾರದಲ್ಲಿ ಅತ್ತೆ ಸೊಸೆಯರ ನಡುವೆ ಎದ್ದ ಬಿರುಕನ್ನು ಬಗೆ ಹರಿಸಿಕೊಂಡದ್ದು ಮೌನ ಪ್ರತಿಭಟನೆಯಲ್ಲಿ. ಹಾಗಾಗಿ ಈಗಿನವರಿಗೆ ಅವು ಸ್ತ್ರೀ ಪರಕಾಳಜಿ ಎನಿಸಿದ್ದರೆ ತಪ್ಪಲ್ಲ. ರಾಜ ವರ್ಗದವರ ಗತ್ತು ತೋರದೆ ಸಮಾಜದ ಎಲ್ಲಾ ವರ್ಗದವರೊಂದಿಗೆ ಬೆರೆವ, ಸ್ಪಂದಿಸುವ ಗುಣ ಆಕೆಯದು.

2. ಸಾವಿತ್ರಿ ಮತ್ತು ಯಮನ ನಡುವಿನ ವಾದ ವಿವಾದಗಳನ್ನು ಆಧ್ಯಾತ್ಮಿಕ ನೆಲೆಯಲ್ಲಿ ವಿಸ್ತರಿಸಿ ಸಾವಿತ್ರಿಯನ್ನು ಇನ್ನೂ ಹೆಚ್ಚಿನ ದೈವತ್ವಕ್ಕೆ ಏರಿಸಬಹುದಿತ್ತಲ್ಲಾ?

: ಈ ಕಾವ್ಯದ ರಚನೆಯು ಅನೂಚಾನವಾಗಿ ಬಂದ ದರುಶನ ತತ್ವಗಳನ್ನು ವೈಭವೀಕರಿಸುವುದಲ್ಲ. ವಾಸ್ತವದ ನೆಲೆಯಲ್ಲಿ ಅದನ್ನು ನಿಕಷಕ್ಕೊಳ್ಳಪಡಿಸುವುದು ಆಗಿದೆ. ಸಮಾಜದ ಒಟ್ಟಂದದ ನಡೆಯನ್ನು ಚಿತ್ರೀಕರಿಸುವುದಾಗಿದೆ. ಹಾಗಾಗಿ ಇಲ್ಲಿನ ಪಾತ್ರಗಳನ್ನು ಅವುಗಳ ಸಂಸ್ಕಾರದ ನಡೆಗೆ ಬಿಟ್ಟುಕೊಟ್ಟಿದೆ. ಅವಕ್ಕೆ ಕವಿಯ ಅಂಕುಶ, ಲಗಾಮು ಇಲ್ಲ. ನಾಯಕ ನಾಯಕಿಯರನ್ನು ಧೀರೋದಾತ್ತತೆಯ ಪುತ್ಥಳಿಯಾಗಿ ಕಡೆದಿಲ್ಲ. ಮಾನವ ಸಹಜ ಗುಣಾವಗುಣಗಳು ಅವರಲ್ಲೂ ಇವೆ ಎಂಬುದಕ್ಕೆ ಒತ್ತಿದೆ. ದಾಂಪತ್ಯದಲ್ಲಿ-ಹೊಂದಾಣಿಕೆ, ಕ್ಷಮಿಸುವಿಕೆ, ಬಂದ ಪರಿಸ್ಥಿತಿಯನ್ನು ದಿಟ್ಟತನದಿಂದ ಚಾಣಕ್ಷತನದಿಂದ ನಿಭಾಯಿಸುವುದು ಮುಖ್ಯ, ಕೇವಲ ಆದರ್ಶತತ್ವ ಪರಿಪಾಲನೆಯಲ್ಲ. ಸತಿಪತಿಗಳ ಒಂದಾದ ಬದುಕಿಗೆ ಒತ್ತು ಕೊಡುವ ನಡೆ ಇಲ್ಲಿನದು. ಹಾಗಾಗಿ ಯಮ ಸಾವಿತ್ರಿ ನಡುವಿನ ವಾದ ವಿವಾದಕ್ಕೆ ಹೆಚ್ಚಿನ ಮಹತ್ವ ನೀಡಿಲ್ಲ. ದೈವತ್ವಕ್ಕೇರಿಸಿಲ್ಲ. ಸಂಸಾರದಲ್ಲಿ ಉದ್ಭವಿಸುವ ಎಡರು ತೊಡರುಗಳನ್ನು ದಿಟ್ಟತನದಿಂದ ಎದುರಿಸಿ ಗೆಲ್ಲಬೇಕು ಎಂಬ ಧೋರಣೆ ಇಲ್ಲಿನದು.

3. ಪ್ರಸ್ತುತ ಸಾವಿತ್ರಿ ಚರಿತೆ ನಿಮ್ಮ ಕಾವ್ಯದಲ್ಲಿ ಆಕೆ ಒಬ್ಬ ಪೌರಾಣಿಕ ಸ್ತ್ರೀ ಆಗದೆ ಸಮಕಾಲೀನ ಅಥವಾ ಪರಿಚಿತ ಸ್ತ್ರೀಯಂತೆ ಚಿತ್ರಿಸಿದ್ದೀರಿ ಏಕೆ?

: ಸಾವಿತ್ರಿ ಪೌರಾಣಿಕ ಸ್ತ್ರೀಯೆ. ಆಕೆಯ ಆಲೋಚನಾ ದಾಟಿ ಸ್ತ್ರೀಯಂತೆ ಇದೆ. ಪ್ರಕೃತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾನವರು ಸ್ತ್ರೀ ಪುರುಷ ಸಂಜಾತರು. ಗಂಡಿನಲ್ಲಿ ಪುರುಷತ್ವ ಹೆಚ್ಚಿದ್ದರೆ ಸ್ತ್ರೀಯರಲ್ಲಿ ಸ್ತ್ರೀತ್ವ ಹೆಚ್ಚಿರುತ್ತದೆ. ಮನಃಶಾಸ್ತ್ರಜ್ಞರ ಪ್ರಕಾರ ಸಮಯಸಂದರ್ಭಗಳಿಗನುಸಾರವಾಗಿ ಸ್ತ್ರೀಯು ಪುರುಷತ್ವವನ್ನು ಪುರುಷ ಸ್ತ್ರೀಯತ್ವನ್ನು ತೋರುವುದಿದೆ. ಸ್ತ್ರೀತ್ವ ಪುರುಷರಲ್ಲಿ ಹೆಚ್ಚಾಗಿದ್ದರೆ ಆತನನ್ನು ಹೆಣ್ಣಿಗ ಅಂತಲೂ ಸ್ತ್ರೀಯರಲ್ಲಿ ಪುರುಷತ್ವ ಹೆಚ್ಚಾಗಿದ್ದರೆ ಆಕೆಯನ್ನು ಗಂಡುಬೀರಿ ಅಂತಲೂ ಕರೆಯುತ್ತೇವೆ. ಅಮೃತ ಪಥದಲ್ಲಿ ಸಾವಿತ್ರಿ ಚಿತ್ರಿತವಾಗಿರುವುದು ಹಾಗೆ. ಗಂಡನೊಡನೆ ಆಕೆಯ ವ್ಯವಹಾರ ರೀತಿಯಲ್ಲಿ ಸ್ತ್ರೀ ದಾಂಪತ್ಯದ ಸಹಜತೆಯಿದೆ. ಅದೇ ಮಾವನೊಡನೆ ಆಕೆ ನಡೆದುಕೊಳ್ಳುವ ರೀತಿಯಲ್ಲಿ ಮಾವನಿಗೆ ಅವನ ತಾಯಿ ನೆನಪಾಗುವ ತೆರನಿದೆ. ಅತ್ತೆಯೊಡನಾಟದಲ್ಲಿ ಒಳಕಿತ್ತಾಟದ ಸೌಮ್ಯ ಪ್ರತಿಭಟನೆಯಿದೆ. ಹೊಂದಾಣಿಕೆಯ ವ್ಯವಹಾರ ಚತುರತೆಯಿದೆ. ಗೆಳತಿಯರಲ್ಲಿ ಆತ್ಮೀಯ ಸಲುಗೆ ಬದುಕಿನಲ್ಲಿ ಎದುರಾಗುವ ಘಟನೆಗಳನ್ನು ತರ್ಕಬದ್ಧವಾಗಿ ನೋಡಿ ಸೂಕ್ತನಿರ್ಣಯವನ್ನು ತೆಗೆದುಕೊಳ್ಳುವ ಚತುರಿದೆ. ಹಾಗಾಗಿ ನಮಗೆ ಆಕೆ ಪರಿಚಿತ ಸ್ತ್ರೀಯಂತೆ ಕಾಣುತ್ತಾಳೆ.

4. ಇದಕ್ಕೂ ಮೊದಲು ಸಾವಿತ್ರಿ ಸತ್ಯವಾನರನ್ನು ಕುರಿತ ಕೃತಿಗಳು ಕಾವ್ಯ, ನಾಟಕ, ರೂಪಕ ಮೊದಲಾದವು ಸಾಹಿತ್ಯ ಪ್ರಕಾರದಲ್ಲಿ ಬಂದಿವೆ. ಅಲ್ಲೆಲ್ಲ ಯಮ-ಸಾವಿತ್ರಿ ಸಂವಾದಕ್ಕೆ ಮಹತ್ವ ಕೊಟ್ಟಿದ್ದಾರೆ. ನೀವು ಅದನ್ನೇ ಗೌಣವಾಗಿಸಿದ್ದೀರಲ್ಲ?

: ಹೌದು ನನಗಿಂತ ಮೊದಲು ಸಾವಿತ್ರಿ ಸತ್ಯವಾನರನ್ನು ರಚಿಸಿದ್ದು ಪಾತಿವ್ರತ್ಯ ಹಾಗೂ ಸತಿಪತಿಯರ ಅತುಲ ಪ್ರೇಮದ ನೆಲೆಗಟ್ಟಿನ ಮೇಲೆ ಅತಿಮಾನುಷವಾಗಿ, ಪ್ರೇಮಕ್ಕೆ ಮೃತ್ಯುವೂ ಸೋಲಬೇಕು ಎಂಬ ಭಾವುಕ ಅಭಿಲಾಷೆಯಲ್ಲಿ ಶ್ರೀ ಅರವಿಂದರು ತಮ್ಮ ಆಚಾರ್ಯ ಕಾವ್ಯ ‘ಸಾವಿತ್ರಿ’ಯನ್ನು a legend and a symbol ಅಂತಲೇ ಕರೆದಿದ್ದಾರೆ. ಪ್ರೇಮತತ್ವವನ್ನು ದೈವತ್ವಕ್ಕೇರಿಸಿದ್ದಾರೆ. ಕುವೆಂಪುರವರು-ಪುರಾಣದ ಸಾವಿತ್ರಿಯನ್ನು ಪಾತಿವ್ರತ್ಯದ ನೆಲೆಯಲ್ಲೇ ಇಟ್ಟುಕೊಂಡು ಪ್ರೇಮದ ಔನತ್ಯವನ್ನೂ ಯಮ ಸಾವಿತ್ರಿಯರ ಸಂಭಾಷಣೆ ಯಲ್ಲಿ ತಂದಿದ್ದಾರೆ. ಪೌರಾಣಿಕ ನಲೆಗಟ್ಟಿನಲ್ಲಿ ಅದಕ್ಕೆ ತನ್ನದೇ ಆದ ಗೌರವವಿದೆ. ವಾಸ್ತವದಲ್ಲಿ ಸತ್ತವರು ಎದ್ದು ಬಂದುದು ಇಲ್ಲ. ಅದು ನನಗೆ ಮುಖ್ಯವಾಯಿತು. ಪಾತಿವ್ರತ್ಯ-ಸ್ತ್ರೀಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಪುರುಷಸಮಾಜ ಸೃಷ್ಟಿಸಿದ್ದು. ಅಮೃತಪಥದಲ್ಲಿ ಇದನ್ನು ಮಾನವೀಯ ನೆಲೆಯಲ್ಲಿ ಕಂಡುಕೊಳ್ಳುವ ಯತ್ನವಿದೆ. ಇಲ್ಲಿ ಸಾವಿತ್ರಿ ಗಂಡನನ್ನು ಅನುಸರಿಸುವುದು ಭಾವುಕನೆಲೆಯಲಿಲ್ಲ. ಕಾಂತಾಸಮ್ಮಿತತೆಯಲ್ಲಿ. ಸತ್ಯವಾನ ಅಲ್ಪಾಯು ಎಂಬ ಕುದಿಯನ್ನು ಬಿಟ್ಟುಕೊಡದೆ ಪತಿ ಏಳಿಗೆಗೇ ಪರಿತಪಿಸುವುದು, ಯತ್ನಿಸುವುದು ಕಾವ್ಯದಲ್ಲಿ ಆನುಷಾಂಗಿಕವಾಗಿ ಬಂದಿದೆ. ಹಾಗೆ ಅಮೃತಪಥದಲ್ಲಿ ದಾಂಪತ್ಯ ವಿವಿಧ ಮುಖಗಳ, ಮೃತ್ಯುವಿನ ವಿವಿಧ ಛಾಯೆಗಳ ಅನಾವರಣವಾಗಿದೆ. ‘ಇದಮಿತ್ಥಂ’ ಎಂಬುದು ತನ್ನ ಕಾವ್ಯರಚನೆಯ ಉದ್ದೇಶವಲ್ಲ. ಸಹಜ ಬದುಕಿನಲ್ಲಿ ಅಮೃತತ್ವವನ್ನು ಸ್ಥಾಪಿಸುವುದು ಕಾವ್ಯದ ಲಕ್ಷ್ಯವಾದ್ದರಿಂದ ಆಕೆ ಸಾಮಾಜಿಕ ಪತ್ನಿ ಎನಿಸುತ್ತಾಳೆ ಎನ್ನಬಹುದು.

5. ಮಹಾಭಾರತದಲ್ಲಿ ನೂರಾರು ಕಥೆಗಳಿವೆ. ಸಾವಿತ್ರಿ ಕಥೆ ಹೇಗೆ ಸೆಳೆದುಕೊಂಡಿತು.?

: ಅದು ಹೇಗೆ ಎಂಬುದು ನನಗೆ ಈಗಲೂ ಚೋದ್ಯ. ಮಹಾಭಾರತದ ಅರಣ್ಯ ಪರ್ವವನ್ನು ಗದ್ಯರೂಪದಲ್ಲಿ ಓದಿದ್ದು ವಿದ್ಯಾರ್ಥಿದೆಸೆಯಲ್ಲಿ. ‘ಯಮನ ಸೋಲು’ ನಾಟಕ ನೋಡಿದ್ದು ಹಾರನಹಳ್ಳಿಯಲ್ಲಿ. ಆಗ ನಾನು ಮಿಡ್ಲಸ್ಕೂಲ್ ಸ್ಟೂಡೆಂಟು. ‘ಸತ್ಯವಾನ ಸಾವಿತ್ರಿ’ ಸಿನೆಮಾ ನೋಡಿದ್ದು ಹಾರನಹಳ್ಳಿಯ ಟೂರಿಂಗ್ ಟಾಕೀಸಿನಲ್ಲಿ ಕಾಲೇಜಿಗೆ ಬರುವಷ್ಟರಲ್ಲಿ ಪದ್ಯ ಹೊಸೆಯಲು ಶುರು ಮಾಡಿದೆ. ಒಂದೆರಡು ಪದ್ಯಗಳು ನಾಡಪತ್ರಿಕೆಯಲ್ಲಿ ಬಂದಿದ್ದವು. ಆಗ ವಿದ್ವತ್‌ವಲಯದಲ್ಲಿ ‘ರಾಮಾಯಣದರ್ಶನಂ’ ಬಗೆಗೆ ಚರ್ಚೆ ನಡೆಯುತ್ತಿತ್ತು. ಆಗ ನನಗೂ ಮಹಾಕಾವ್ಯ ಬರೆಯಬೇಕೆಂಬ ತುಡಿತವುಂಟಾಯಿತು. ಮಹಾಕಾವ್ಯದ ಬಗೆಗಿನ ಯಾವ ಕಲ್ಪನೆಯಿಲ್ಲದೆ ಚಿಟ್ಟೆಯನ್ನು ಕುರಿತು-‘ಸ್ತ್ರೀವೇಷ್ಠಿದರ್ಶನಂ’ ಎಂಬ ಕಾವ್ಯ ಬರೆದೆ. ‘ರಾಮಾಯಣದರ್ಶನಂ’ ಛಂದಸ್ಸನ್ನು ಅನುಸರಿಸಿ 4-6 ಪುಟ ಸಾಗುವಷ್ಟರಲ್ಲೇ ಉತ್ಸಾಹ ತಿಣುಕಾಡಿತು. ಕಲ್ಪನೆ ಅಷ್ಟು ವಿಸ್ತಾರಕ್ಕೆ ಅರ್ಹ ಅಲ್ಲ ಎನಿಸಿ ಕೈಬಿಟ್ಟೆ. ನಾನು ಬಿಟ್ಟರೂ ಮಹಾಕಾವ್ಯ ರಚನೆಯ ಗುಂಗು ಸುಪ್ತವಾಗಿಯೇ ಇತ್ತು. ಮಹಾಕಾವ್ಯದ ಬಗ್ಗೆ ಸಂಬಂಧಿಸಿದ ಲೇಖನಗಳನ್ನು ಪರೀಕ್ಷಾ ದೃಷ್ಟಿಯಿಂದ ಓದಿದೆ. ಮಹಾಕಾವ್ಯ ಅಷ್ಟಾದಶ ವರ್ಣನೆಯಲ್ಲ, ಸಮಗ್ರ ಜೀವನದ ಪರಿಪಾಕ ಇತ್ಯಾದಿ ಇತ್ಯಾದಿ ತಲೆತುಂಬಿ-ಈ ಕಥೆ ಬರೆಯಲು ಪ್ರೇರೇಪಿಸಿತು. ತೋಚಿದಷ್ಟು ಅಧ್ಯಯನ ನಡೆಸಿ ಬರೆದೆ.

6. ನಿಮ್ಮ ಕಾವ್ಯದಲ್ಲಿ ವೇದ ಕಾಲದ ಸಾಮಾಜಿಕ ಜನಜೀವನ ಸೂಚ್ಯವಾಗಿ ಬರುತ್ತದೆ. ಆಧ್ಯಾತ್ಮಿಕ ಸಾಮಾಜಿಕ ವಿಚಾರಗಳು ಅಷ್ಟೇ. ಒಂದು ರೇಡಿಯೊ, ರೂಪಕ, ರೇಡಿಯೊ ನಾಟಕದ ತಂತ್ರ ಇಲ್ಲಿದೆ. ಏನನ್ನುತೀರಿ?

: ನೀವು ಕೃತಿಯನ್ನು ಬಹಳ ಚೆನ್ನಾಗಿ ಅವಲೋಕಿಸಿದ್ದೀರಿ. ರೇಡಿಯೋ ತಂತ್ರದ ಗುರಿ ಪ್ರಮುಖವಾಗಿ-ಪಂಡಿತರಿಂದ ಪಾಮರರತನಕ ಏಕಗ್ರಾಹಿಯಾಗಿ ವಿಚಾರವನ್ನು ಮುಟ್ಟಿಸಬೇಕೆಂಬುದು. ಅದು ಎಷ್ಟರಮಟ್ಟಿಗೆ ಇಲ್ಲಿ ಸಾಧಿತವಾಗಿದೆಯೋ ಪ್ರಸಾರ ತಜ್ಞರು ಹೇಳಬೇಕು. ಬರೆಯುವಾಗ ಅದು ಲಕ್ಷ್ಯದಲ್ಲಿ ಇಟ್ಟುಕೊಳ್ಳದಿದ್ದರೂ ಕೃತಿ ಅಚ್ಚಾದ ಮೇಲೆ ನನಗೂ ಒಮ್ಮೆ ಹಾಗನಿಸಿದ್ದು ಇದೆ. ಈ ಕೃತಿಯ ಛಂದಸ್ಸಿನ ಬಗ್ಗೆ ವಿದ್ವಾಂಸ ಮಿತ್ರರು ಇದು ಕಾವ್ಯ ಕಾದಂಬರಿ, ಮುಗ್ಧ ಆಧುನಿಕ ಜಾನಪದ ಛಂದಸ್ಸು. ಗದ್ಯಗಂಧಿ ಸರಳ ರಗಳೆ ಎಂದಿದ್ದಾರೆ. ಇನ್ನು ಕೃತಿ ಕುರಿತು ಓದುಗ ಮಹಾಶಯರ ಅನಿಸಿಕೆ, ಅಭಿಪ್ರಾಯಗಳಿಗೆ ನಾನು ಉತ್ಸುಕನಾಗಿದ್ದೇನೆ.

Writer - ಜಿ. ಎಂ. ಶಿರಹಟ್ಟಿ.

contributor

Editor - ಜಿ. ಎಂ. ಶಿರಹಟ್ಟಿ.

contributor

Similar News