ವಕ್ಫ್ ಜಾಗದಲ್ಲಿ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರ ಸ್ಥಾಪನೆ: ಎನ್.ಕೆ.ಎಂ.ಶಾಫಿ ಸಅದಿ

Update: 2021-12-22 11:42 GMT
ಎನ್.ಕೆ.ಎಂ.ಶಾಫಿ ಸಅದಿ

ಬೆಂಗಳೂರು, ಡಿ.22: ಲಾಲ್‍ಬಾಗ್ ಸಮೀಪವಿರುವ ಬಡೆ ಮಕಾನ್‍ನಲ್ಲಿ ಸುಮಾರು 33 ಸಾವಿರ ಚದರ ಅಡಿ ವ್ಯಾಜ್ಯಗಳಿಲ್ಲದ ವಕ್ಫ್ ಜಾಗವಿದ್ದು, ಅಲ್ಲಿ ಸಮುದಾಯದ ದಾನಿಯೊಬ್ಬರ ನೆರವಿನಿಂದ ಸುಮಾರು 10 ಕೋಟಿ ರೂ.ವೆಚ್ಚದಲ್ಲಿ ಅಂತರ್‍ರಾಷ್ಟ್ರೀಯ ಗುಣಮಟ್ಟದ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ತಿಳಿಸಿದರು.

ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಒಂದು ತಿಂಗಳ ನಂತರ ಸೋಮವಾರ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ನಡೆಸಿದ ಸರ್ವ ಸದಸ್ಯರ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಅವರು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದರು.

ಬಡೆ ಮಕಾನ್‍ನಲ್ಲಿ ವಕ್ಫ್ ಬೋರ್ಡ್‍ಗೆ ಸೇರಿದ 6 ಎಕರೆ 9 ಗುಂಟೆ ಜಮೀನಿದ್ದು, ಅಲ್ ಅಮೀನ್ ಶಿಕ್ಷಣ ಸಂಸ್ಥೆಯೂ ಇದೇ ಜಾಗದಲ್ಲಿದೆ. ಯಾವುದೆ ವ್ಯಾಜ್ಯಗಳಿಲ್ಲದ ಸುಮಾರು 33 ಸಾವಿರ ಚದರ ಅಡಿ ಜಾಗ ಇಲ್ಲಿ ಲಭ್ಯವಿದ್ದು, ಅಲ್ಲಿ ನಮ್ಮ ಸಮುದಾಯದ ಮಕ್ಕಳಿಗೆ ಐಎಎಸ್, ಐಪಿಎಸ್ ಸೇರಿದಂತೆ ನಾಗರಿಕ ಸೇವಾ ಪರೀಕ್ಷೆಗೆ ಸಂಬಂಧಿಸಿದಂತೆ ತರಬೇತಿ ನೀಡಲು ಅಂತರ್‍ರಾಷ್ಟ್ರೀಯ ಗುಣಮಟ್ಟದ ತರಬೇತಿ ಕೇಂದ್ರ, ಉರ್ದು ಭವನ, ಗ್ರಂಥಾಲಯವನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಮುಂದಿನ ಸಾಲಿನ ಜನವರಿ 26ರಂದು ಈ ಕೇಂದ್ರದ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕಲಾಗುವುದು ಎಂದು ಅವರು ಹೇಳಿದರು.

ಅದೇ ರೀತಿ ತುಮಕೂರಿನಲ್ಲಿ ಹಝ್ರತ್ ಮದಾರ್ ಶಾ ದರ್ಗಾಗೆ ಸೇರಿದ 14 ಎಕರೆ ಜಾಗ ಲಭ್ಯವಿದ್ದು, ಮುಸ್ಲಿಮರಿಗಾಗಿ ಗುಣಮಟ್ಟದ ಉನ್ನತ ಶಿಕ್ಷಣ ನೀಡುವ ಶೈಕ್ಷಣಿಕ ಕೇಂದ್ರ ಆರಂಭಿಸಲಾಗುವುದು. ಈ ವಿಚಾರದಲ್ಲಿ ಈಗಾಗಲೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಜೊತೆ ಚರ್ಚೆ ಮಾಡಿದ್ದೇನೆ ಎಂದು ಶಾಫಿ ಸಅದಿ ತಿಳಿಸಿದರು.

ರಾಜ್ಯದಲ್ಲಿ ಖಾಲಿಯಿರುವ ವಕ್ಫ್ ಆಸ್ತಿಗಳ ಅಭಿವೃದ್ಧಿಗೆ ನಾವು ಆದ್ಯತೆ ನೀಡಿದ್ದೇವೆ. ರಾಜ್ಯದ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಇತ್ತೀಚೆಗೆ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿಯನ್ನು ಭೇಟಿ ಮಾಡಿ ರಾಜ್ಯದ ವಕ್ಫ್ ಆಸ್ತಿಗಳ ಅಭಿವೃದ್ಧಿಗೆ 500 ಕೋಟಿ ರೂ.ಗಳ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ನಮ್ಮ ಬೋರ್ಡ್ ವತಿಯಿಂದ ಮುಖ್ಯಮಂತ್ರಿಗೆ 300 ಕೋಟಿ ರೂ.ಗಳ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ವಿಂಡ್ಸರ್ ಮ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಹೋರಾಟ ನಡೆಸಲು ಓರ್ವ ಹಿರಿಯ ನ್ಯಾಯವಾದಿಯ ನೇಮಕ ಮಾಡುವುದು ಹಾಗೂ ಆ ಸಮಿತಿಗೆ 10 ಲಕ್ಷ ರೂ.ಗಳ ಸಾಲ ನೀಡಲು ನಿರ್ಧರಿಸಲಾಗಿದೆ. ಮತ್ತು ಹಾಪ್‍ಕಾಮ್ಸ್‍ಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಿದ್ಧಪಡಿಸಿದ್ದ ನಡಾವಳಿಯ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ಆದುದರಿಂದ, ಡಿ.26ರಂದು ಕಾರ್ಯದರ್ಶಿಯವರನ್ನು ವಕ್ಫ್ ಬೋರ್ಡ್ ಸದಸ್ಯರು ಭೇಟಿ ಮಾಡಿ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಶಾಫಿ ಸಅದಿ ತಿಳಿಸಿದರು.

ಉಡುಪಿ ಜಿಲ್ಲೆ ಕೊಡವೂರು ಜುಮ್ಮಾ ಮಸೀದಿಗೆ ಸಂಬಂಧಿಸಿದಂತೆ ಕೆಲವು ಕೋಮು ಸಂಘರ್ಷಗಳು ನಡೆದಿದ್ದು, ಈ ಬಗ್ಗೆ ಬೋರ್ಡ್ ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲಿ ನಮ್ಮ ವಕ್ಫ್ ಜಾಗ ಇದೆ. ಆದರೆ, ಅದು ಕಂದಾಯ ಇಲಾಖೆಗೆ ಸೇರಿದ್ದು ಎಂದು ಸರಕಾರ ಆರ್‍ಟಿಸಿ ಎಲ್ಲ ಬದಲಾಯಿಸಿದೆ. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.

-ಮೌಲಾನ ಎನ್.ಕೆ.ಎಂ.ಶಾಫಿ ಸಅದಿ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News