×
Ad

ಮತಾಂತರ ನಿಷೇಧ ವಿಧೇಯಕ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ

Update: 2021-12-22 18:42 IST

ಬೆಂಗಳೂರು, ಡಿ.22: ವಿಧಾನಸಭೆಯ ಸದನದಲ್ಲಿ ಮತಾಂತರ ನಿಷೇಧ ವಿಧೇಯಕವನ್ನು ಮಂಡಿಸಿದ ಬೆನ್ನಲ್ಲೇ ಬುಧವಾರ ಕ್ರೈಸ್ತ ಸಂಘಟನೆಗಳು ಸೇರಿದಂತೆ ಅಲ್ಪಸಂಖ್ಯಾತ ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಿದವು. 

ಸರಕಾರವು ಮತಾಂತರ ನಿಷೇಧ ಮಸೂದೆಯ ಮೂಲಕ ಧಾರ್ಮಿಕ ಶ್ರದ್ಧೆಯ ಸ್ವಾತಂತ್ರ್ಯವನ್ನು ಅಪರಾಧೀಕರಿಸುತ್ತಿದೆ. ಅಲ್ಲದೇ ಸ್ವಾತಂತ್ರ್ಯಹರಣ ಮಾಡುವ ಮಸೂದೆಗೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣೆ ಮಸೂದೆ ಎಂದು ಬೂಟಾಟಿಕೆಗೆ ನಾಮಕರಣ ಮಾಡಿ, ಜನರ ದಿಕ್ಕು ತಪ್ಪಿಸಲಾಗಿದೆ. ಬಿಜೆಪಿ ಸರಕಾರ ಜನರ ಹಸಿವು ಮತ್ತು ನಿರುದ್ಯೋಗದಂತಹ ಪ್ರಸ್ತುತ ಸಮಸ್ಯೆಗಳನ್ನು ಮರೆಮಾಚಲು ಇಂತಹ ಕಾಯ್ದೆಗಳನ್ನು ರೂಪಿಸಲಾಗುತ್ತಿದೆ ಎಂದು ಸಿಪಿಐ ಮುಖಂಡ ಡಾ. ಸಿದ್ದನಗೌಡ ಪಾಟೀಲ್ ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿಮತನಾಡಿದ ಅವರು, ಪ್ರಪಂಚದ ಎಲ್ಲಾ ಧರ್ಮವು ಮತಾಂತರದಿಂದಲೇ ಹುಟ್ಟಿವೆ. ತಮ್ಮ ಧರ್ಮಗಳ ಬೆಳವಣಿಗೆಗಾಗಿ ಮತಾಂತರವನ್ನು ಬಳಸಿಕೊಳ್ಳಲಾಗುತ್ತದೆ. ಇದನ್ನು ತಿಳಿದಿರುವ ಸರಕಾರವು ಮತಾಂತರ ನಿಷೇಧವನ್ನು ಜಾರಿಗೊಳಿಸುತ್ತಿದೆ. ಇದು ಧಾರ್ಮಿಕ ಚಟುವಟಿಕೆಯಲ್ಲ, ಬದಲಾಗಿ ರಾಜಕೀಯ ಚಟುವಟಿಕೆಯಾಗಿದೆ ಎಂದು ಅವರು ತಿಳಿಸಿದರು. 

ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಪಕ್ಷಾಂತರಗೊಳಿಸಿ ಸರಕಾರವನ್ನು ರಚಿಸಿರುವ ಬಿಜೆಪಿ ಪಕ್ಷವು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುತ್ತಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಅವರು ಹೇಳಿದರು.
ಬುಧವಾರ ಮತಾಂತರ ನಿಷೇಧ ವಿಧೇಯಕವನ್ನು ವಿರೋಧಿಸಿ ಪ್ರತಿಭಟನಾಕಾರರು ನಗರದ ಮೈಸೂರು ಬ್ಯಾಂಕ್ ಸರ್ಕಲ್‍ನಿಂದ ಫ್ರೀಡಂ ಪಾರ್ಕ್‍ವರೆಗೂ ರ್ಯಾಲಿ ನಡೆಸಿ, ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ಮಾಡಿದರು.  

ಸರಕಾರ ಕೊಟ್ಟ ಕ್ರಿಸ್ ಮಸ್ ಕೊಡುಗೆ

ಸಂವಿಧಾನದ 25ನೇ ವಿಧಿಯು ದಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಪ್ರತಿಪಾದಿಸುತ್ತದೆ. ಆದರೆ ಮತಾಂತರ ನಿಷೇಧ ಕಾಯ್ದೆಯು ಮೂಲಭೂತ ಹಕ್ಕುಗಳ ಮೇಲೆ ದಾಳಿ ಮಾಡುತ್ತದೆ. ಹಾಗಾಗಿ ರಾಜ್ಯದ 224 ಶಾಸಕರನ್ನು ಭೇಟಿ ಮಾಡಿ, ಸಂವಿಧಾನ ವಿರೋಧಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡದಂತೆ ಮನವಿ ಸಲ್ಲಿಸಿದರೂ, ಮಂಗಳವಾರ ವಿಧಾನಸಭೆಯಲ್ಲಿ ವಿದೇಯಕಯನ್ನು ಮಂಡಿಸಲಾಗಿದೆ. ಇದು ಈ ವರ್ಷದ ಕ್ರಿಸ್‍ಮಸ್ ಸಮಯದಲ್ಲಿ ಕ್ರೈಸ್ತ ಮತೀಯರಿಗೆ ಸರಕಾರವು ನೀಡುತ್ತಿರುವ ಆಘಾತವಾಗಿದೆ. 

-ಪೀಟರ್ ಮಚಾದೋ, ಆರ್ಚ್ ಬಿಷಪ್, ಬೆಂಗಳೂರು

ಸರಕಾರದ ವಿರುದ್ಧ ನ್ಯಾಯಾಂಗ ಹೋರಾಟ

ರಾಜ್ಯವು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುತ್ತಿವೆ. ಸರಕಾರವು ಇದನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಮತಾಂತರ ನಿಷೇಧ ಕಾಯ್ದೆಯನ್ನು ಏಕಾಏಕಿ ಸಂವಿಧಾನ ಬಾಹಿರವಾಗಿ ಜಾರಿಗೊಳಿಸುತ್ತಿದೆ. ದೇಶದ ಯಾವುದೇ ಮೂಲೆಯಲ್ಲೂ ಬಲವಂತದ ಮತಾಂತರದ ಪ್ರಕರಣ ದಾಖಲಾಗಲಿಲ್ಲ. ಆದರೂ ಅಲ್ಪಸಂಖ್ಯಾತರ ಬದುಕುವ ಹಕ್ಕನ್ನು ಕಸಿದುಕೊಂಡಿರುವ ಸರಕಾರವು ಈಗ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ನ್ಯಾಯಾಂಗ ಹೋರಾಟ ಮಾಡಲಾಗುತ್ತದೆ. 

-ಮಾನವಿ ಅತ್ರಿ, ವಕೀಲೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News