×
Ad

ಬೆಂಗಳೂರು: ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡುವ ಅಧಿಕಾರ ವಕ್ಫ್ ಮಂಡಳಿಗಿಲ್ಲ: ಸುತ್ತೋಲೆ

Update: 2021-12-22 19:19 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ.22: ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡುವ ಅಧಿಕಾರ ರಾಜ್ಯದ ವಕ್ಫ್ ಬೋರ್ಡ್‍ಗೆ ಇರುವುದಿಲ್ಲ. ಅಧಿಕೃತ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಧ್ವನಿವರ್ಧಕ ಅಳವಡಿಸಿ ಪ್ರತಿನಿತ್ಯ ಬಳಸುತ್ತಿದ್ದರೆ ಈ ಕೂಡಲೇ ಅದನ್ನು ತೆರವು ಮಾಡಬೇಕು. ಇಲ್ಲದಿದ್ದರೆ, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ನಗರದ ಸಂಪಿಗೇಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್‍ ಸ್ಪೆಕ್ಟರ್ ಮತ್ತು ಠಾಣಾಧಿಕಾರಿ ಈ ಸುತ್ತೋಲೆ ಹೊರಡಿಸಿದ್ದಾರೆ.

ಈ ಹಿಂದೆ ಧ್ವನಿವರ್ಧಕ ಬಳಸಲು ಅನುಮತಿ ಪಡೆದುಕೊಂಡಿದ್ದರೆ ಅದು ವಿಶೇಷ ದಿನಗಳಿಗೆ ಮಾತ್ರ ಅನ್ವಯ ಆಗಲಿದೆ. ಪ್ರತಿನಿತ್ಯ ಇದನ್ನು ಬಳಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. 

ತಮಗೆ ವಕ್ಫ್ ಬೋರ್ಡ್, ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಧ್ವನಿವರ್ಧಕ ಬಳಸದಂತೆ ಹೊರಡಿಸಿರುವ ಸುತ್ತೋಲೆಯ ಆದೇಶವನ್ನು ಪಾಲಿಸುವುದಿಲ್ಲ ಎಂಬುದು ಮಸೀದಿಯ ಆಡಳಿತ ಮಂಡಳಿಗಳ ವಾದವಾಗಿದೆ. ಈ ಹಿನ್ನೆಲೆಯಲ್ಲಿ ಸಂಪಿಗೇಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಮತ್ತು ಠಾಣಾಧಿಕಾರಿ ಈ ಸುತ್ತೋಲೆ ಹೊರಡಿಸಿದ್ದಾರೆ.

ಮಸೀದಿಗಳಲ್ಲಿ ಪ್ರತಿನಿತ್ಯ ಬಳಸುತ್ತಿರುವ ಧ್ವನಿವರ್ಧಕಗಳ ವಿಚಾರವಾಗಿ ಕರ್ನಾಟಕ ಹೈಕೋರ್ಟ್, ಬೆಂಗಳೂರಿನಲ್ಲಿ ರಿಟ್ ಪಿಟಿಷನ್ ವಿಚಾರಣೆಯಲ್ಲಿದ್ದು, ಕೋರ್ಟ್ ಅಂತಿಮ ಆದೇಶಕ್ಕೆ ತಾವು ಬದ್ಧರಾಗಿದ್ದೇವೆ ಎಂದು ನೋಟಿಸ್‍ನಲ್ಲಿ ಉಲ್ಲೇಖಿಸಿದೆ.

ಮಸೀದಿಯ ಧ್ವನಿವರ್ಧಕ ತೆರವು

ಅಧಿಕೃತ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಬಳಸುತ್ತಿದ್ದ ಬೆಂಗಳೂರಿನ ಸಿದ್ದಾಪುರ ವಾರ್ಡ್ 144ರ ವ್ಯಾಪ್ತಿಯ ಮಸೀದಿಯೊಂದರ ಧ್ವನಿವರ್ಧಕವನ್ನು ಸಿದ್ದಾಪುರ ಪೊಲೀಸರು ತೆರವುಗೊಳಿಸಿದ್ದಾರೆ. ಹೈಕೋರ್ಟ್ ಆದೇಶದ ಪಾಲನೆಯ ಹಿನ್ನೆಲೆಯಲ್ಲಿ ಈ ಧ್ವನಿವರ್ಧಕವನ್ನು ತೆಗೆದಿದ್ದಾಗಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News