ಬಿಡಿಎ ಅಧ್ಯಕ್ಷರಾಗಿ ವಿಶ್ವನಾಥ್ ನೇಮಕ ಪ್ರಶ್ನಿಸಿ ಅರ್ಜಿ: ಹ್ಯಾಂಡ್ ಸಮನ್ಸ್ ಜಾರಿಗೆ ಹೈಕೋರ್ಟ್ ಆದೇಶ
Update: 2021-12-22 19:48 IST
ಬೆಂಗಳೂರು, ಡಿ.22: ಬಿಡಿಎ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ನೇಮಕ ಮಾಡಿರುವ ಆದೇಶ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ವಿಶ್ವನಾಥ್ ಅವರಿಗೆ ಹ್ಯಾಂಡ್ ಸಮನ್ಸ್ ಮೂಲಕ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತು ವಕೀಲ ಎ.ಎಸ್. ಹರೀಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರ ಪರ ವಕೀಲ ಪ್ರಿನ್ಸ್ ಐಸಾಕ್ ವಾದ ಮಂಡಿಸಿ, ಹೈಕೋರ್ಟ್ ಜಾರಿ ಮಾಡಿದ್ದ ನೋಟಿಸ್ ವಾಪಸ್ ಬಂದಿದೆ. ವಿಶ್ವನಾಥ್ ಅವರು ಉದ್ದೇಶಪೂರ್ವಕವಾಗಿ ನೋಟಿಸ್ ಸ್ವೀಕರಿಸಿಲ್ಲ. ಹೀಗಾಗಿ, ಅವರಿಗೆ ಹ್ಯಾಂಡ್ ಸಮನ್ಸ್ ಜಾರಿ ಮಾಡಬೇಕು ಎಂದು ಕೋರಿದರು.
ಮನವಿ ಪರಿಗಣಿಸಿದ ಪೀಠ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರಿಗೆ ಹ್ಯಾಂಡ್ ಸಮನ್ಸ್ ಮೂಲಕ ನೋಟಿಸ್ ಜಾರಿ ಮಾಡಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.