ವರ್ತಮಾನದ ಓದಿನ ನೆಲೆಗಳು

Update: 2021-12-26 06:33 GMT

‘ವರ್ತಮಾನದ ಓದಿನ ನೆಲೆಗಳು’ ಭಿನ್ನ ಬಗೆಯಲ್ಲಿ ಪ್ರಾಚೀನ ಕಾವ್ಯ, ಜನಪದ ಕಾವ್ಯಗಳು, ಆಧುನಿಕ ಮಹಾಕಾವ್ಯ, ಕಾದಂಬರಿ ಕತೆ ಕುರಿತ ವಿವರಗಳನ್ನು ಒಳಗೊಂಡ ಈ ವಿಮರ್ಶಾ ಕೃತಿಯು ಪೂರ್ವದ ಪಠ್ಯಗಳನ್ನು ವರ್ತಮಾನದ ವಿವರಗಳನ್ನು ಸಮೀಕರಿಸಿ ಚರ್ಚಿಸುತ್ತದೆ. ಆ ದೃಷ್ಟಿಯಿಂದಲೇ ಇದು ವರ್ತಮಾನದ ಓದು ಆಗಿದೆ. ಆ ಮೂಲಕವಾಗಿ ವಿಮರ್ಶಕರಾದ ಡಾ.ನರಸಿಂಹಮೂರ್ತಿ ಹೂವಿನಹಳ್ಳಿ ಅವರು ತಾವೊಬ್ಬ ಮುಖ್ಯ ವಿಮರ್ಶಕರೆಂಬುದನ್ನು ಸಾಬೀತುಪಡಿಸಿದ್ದಾರೆ. ವಿಮರ್ಶಕರು ಇಲ್ಲಿ ಎರಡು ನೆಲೆಗಳಲ್ಲಿ ಮುಖ್ಯವೆನಿಸುತ್ತಾರೆ. ಒಂದು ಪೂರ್ವ ಕೃತಿಯನ್ನು ವಿಶ್ಲೇಷಕರಾಗಿ ಮತ್ತು ವರ್ತಮಾನದ ವಿಷಯದ ಜೊತೆ ಕಂಟೆಂಟನ್ನು ತಗುಲಿಸಿ ವ್ಯಾಖ್ಯಾನಿಸುವುದರೊಂದಿಗೆ. ಈ ಹಿನ್ನೆಲೆಯಲ್ಲಿ ಇಲ್ಲಿ ಪೂರ್ವ ಕೃತಿಗಿಂತಲೂ, ಅದು ಪ್ರಭಾವಿಸುವ ವಲಯಕ್ಕಿಂತ ಸಮಕಾಲೀನ ಅರ್ಥದ ಸಾಧ್ಯತೆಗಳು ಮುಖ್ಯವಾಗಿರುತ್ತವೆ.

ಮೊದಲ ಮಾತನ್ನು ಮತ್ತೆ ನೆನಪಿಸುತ್ತ, ವಿಮರ್ಶಕ ತನ್ನ ಕಾಲದ ತನ್ನದೇ ಆದ ಭಾಷೆಯನ್ನು ಸೃಜಿಸುತ್ತಿರುತ್ತಾನೆ. ಆ ಭಾಷೆಯಲ್ಲೇ ಕೃತಿಯನ್ನು ಆಧರಿಸಿದ ವೌಲ್ಯವನ್ನು ಬೆಲೆಗಟ್ಟುವ ಕೆಲಸವನ್ನು ಮಾಡುತ್ತಿರುತ್ತಾನೆ. ‘ವರ್ತಮಾನದ ಓದಿನ ನೆಲೆಗಳು’ ಅಂತಹ ಒಂದು ವಿಮರ್ಶಾ ಸಂಕಲನವಾಗಿದೆ. ಈ ಕೃತಿಯು ಎತ್ತುವ ಪ್ರಶ್ನೆಗಳಿಗೆ ಉತ್ತರಿಸುವುದು ಸುಲಭದ ಕೆಲಸವಲ್ಲ. ನಮ್ಮ ಬದುಕು ಎದುರಿಸುವ ಬಿಕ್ಕಟ್ಟನ್ನು ಈ ಸಂಕಲನವೂ ಎದುರಿಸುತ್ತಿದೆ. ಆದರಿಂದಲೇ ವಿಮರ್ಶೆ ಎಂದರೆ ಚರ್ವಿತ ಚರ್ವಣವಲ್ಲ. ಬದಲಿಗೆ ಕೃತಿಯ ಮೂಲಕ ಜೀವನಕ್ಕೆ ಚೈತನ್ಯವನ್ನು ತರುವುದೇ ಆಗಿದೆ. ಅಂತಹ ಭಾಷೆಯ ಮೂಲಕ ಚೈತನ್ಯ ತರುವ ವಿಮರ್ಶೆ ಇಲ್ಲಿದೆ. ಕೃತಿ-ವೌಲ್ಯ ಎರಡೂ ನೆಲೆಕಳೆದುಕೊಳ್ಳುತ್ತಿರುವ ಈ ಕಾಲದಲ್ಲಿ ಹೆಚ್ಚು ಹೆಚ್ಚು ಸೂಕ್ಷ್ಮವಾದ ಮನಸ್ಸನ್ನು ಕಟ್ಟುವ ಆರೋಗ್ಯಕರ ಚಿಂತನೆಯು ಈ ಕೃತಿಯುದ್ದಕ್ಕೂ ಇರುವುದನ್ನು ನಾವು ಕಾಣಬಹುದಾಗಿದೆ.

ಪುಸ್ತಕ: ವರ್ತಮಾನದ ಓದಿನ ನೆಲೆಗಳು

ಲೇಖಕರು: ನರಸಿಂಹಮೂರ್ತಿ ಹೂವಿನಹಳ್ಳಿ

ಬೆಲೆ: ರೂ. 200 ಪ್ರಕಾಶಕರು : ಪ್ರೇರಣ ಪ್ರಕಾಶನ,2393/ಎಂ., ಒಂದನೇ ‘ಎ’ ಮುಖ್ಯರಸ್ತೆ, ಆರ್.ಪಿ.ಸಿ. ಲೇಔಟ್, ವಿಜಯನಗರ, ಬೆಂಗಳೂರು-40

Writer - ಡಾ. ರಾಜಪ್ಪ ದಳವಾಯಿ

contributor

Editor - ಡಾ. ರಾಜಪ್ಪ ದಳವಾಯಿ

contributor

Similar News